Advertisement
ಎಚ್.ಡಿ. ಕುಮಾರ್‌ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಜಲಾಶಯಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಜು.31ರಂದು ಹುಣಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುವುದು ಎಂದರು.
Related Articles
ಮೈಸೂರು: ರಾಜ್ಯದಲ್ಲಿ ಎದುರಾಗಿರುವ ಬರದ ಹಿನ್ನೆಲೆ ಸರ್ಕಾರ ಶೀಘ್ರವೇ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಜು.31ರಂದು ವಿಧಾನಸೌಧಕ್ಕೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.
Advertisement
ನಗರದ ಕಾಡಾ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉಂಟಾಗಿರುವ ಮಳೆ ಅಭಾವದಿಂದ ಈ ಬಾರಿಯೂ ಭೀಕರ ಬರ ಆವರಿಸಿದೆ. ಆದರೂ ರಾಜ್ಯದ ರೈತರ ಬಗ್ಗೆ ಕಾಳಜಿ ತೋರದ ಸರ್ಕಾರ, ನ್ಯಾಯಾಲಯದ ಆದೇಶ ನೆಪವಾಗಿಟ್ಟುಕೊಂಡು ತಮಿಳುನಾಡಿಗೆ ನೀರು ಹರಿಸುತ್ತಿದೆ. ಆ ಮೂಲಕ ರಾಜ್ಯದ ರೈತರ ಹಿತವನ್ನು ಸಂಪೂರ್ಣ ಕಡೆಗಣಿಸಿರುವ ರಾಜ್ಯ ಸರ್ಕಾರ ತಮಿಳುನಾಡಿನ ರೈತರ ಹಿತ ಕಾಪಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಅದರಂತೆ ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗುವುದಕ್ಕೂ ಮೊದಲೇ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬರಗಾಲದಿಂದ ತತ್ತರಿಸಿರುವ ರೈತರ ಜಮೀನುಗಳಿಗೆ ನೀರು ನೀಡಬೇಕು, ಇಲ್ಲದಿದ್ದಲ್ಲಿ ಜು.31ರಂದು ಹುಣಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಸಿದರು.
ರಾಜಕೀಯ ಪ್ರೇರಿತ: ಲಿಂಗಾಯತ-ವೀರಶೈವ ಪ್ರತ್ಯೇಕ ಎಂಬ ಚರ್ಚೆ ರಾಜಕೀಯ ಪ್ರೇರಿತವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವೇ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ವೀರಶೈವ ಹಾಗೂ ವೀರಶೈವ ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮವೆಂದು ಘೋಷಿಸಲು ಐವರು ಸಚಿವರು ರಾಜ್ಯದಲ್ಲಿ ಪ್ರವಾಸ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಆದರೆ ಸರ್ಕಾರದ ಈ ಚರ್ಚೆಯಿಂದ ರಾಜ್ಯದ ಜನರಿಗೆ ಯಾವ ಪ್ರಯೋಜನವೂ ಇಲ್ಲ, ಇದರ ಬದಲು ಐವರು ಸಚಿವರು ರೈತರ ಸಮಸ್ಯೆ ಬಗೆಹರಿಸಲು ಪ್ರವಾಸ ನಡೆಸಲಿ. ಶಿವನನ್ನು ಪೂಜಿಸುವ ಎಲ್ಲರೂ ಹಿಂದೂಗಳೇ ಎಂಬುದಾದರೆ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಎನ್ನುವುದು ಸರಿಯಲ್ಲ. ಅಲ್ಲದೆ ಈ ಚರ್ಚೆ ಹೀಗೆ ಮುಂದುವರಿದರೆ ನಾಳೆ ಬೇರೆ ಸಮುದಾಯಗಳು ಸಹ ಪ್ರತ್ಯೇಕ ಧರ್ಮ ನೀಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಡಲಿದ್ದು, ಇದನ್ನು ಈಡೇರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.