ಔರಾದ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದೆಂದು ಉತ್ತಮ ಶಿಕ್ಷಣ ಪಡೆಯುತ್ತಿರುವ ಗಡಿ ತಾಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶಿಷ್ಯವೇತನ (ಸುಜ್ಞಾನಿ ನಿಧಿ ) ನೀಡಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಸಂಜೀವಿನಿಯಾಗಿ ಪರಿಣಮಿಸಿದೆ.
ಹಿಂದುಳಿದ ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಕುಟುಂಬದಲ್ಲಿನ ಬಡತನ ಹಾಗೂ ಹಣಕಾಸಿನ ಸಮಸ್ಯೆ ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುತ್ತಿದೆ ಎಂಬುದನ್ನು ಅರಿತ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಹಾಗೂ ಸಂಸ್ಥೆಯ ಸಿಬ್ಬಂದಿ, ಧರ್ಮಾಧಿಕಾರಿಗಳ ಗಮನಕ್ಕೆ ತಂದು ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸಿಗುವಂತೆ ಮಾಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತಾಲೂಕಿಗೆ ಬಂದ ಸಂಸ್ಥೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಹಣಕಾಸಿನ ವ್ಯವಹಾರದ ಜ್ಞಾನ ಕಲ್ಪಿಸಿಕೊಟ್ಟಿದೆ. ಜೊತೆಗೆ ಹೈನುಗಾರಿಗೆ, ಸ್ವಂತ ಉದ್ಯೋಗದ ತರಬೇತಿ, ಸ್ವಸಹಾಯ ಸಂಘದ ಮೂಲಕ ಸಾಲ ನೀಡಿ, ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಸ್ವಚ್ಚತೆ-ಶೌಚಾಲಯ ಜಾಗೃತಿ, ಮಂದಿರ ನಿರ್ಮಾಣಕ್ಕೆ ಸಂಸ್ಥೆಯಿಂದ ಅನುದಾನ, ಶುದ್ಧ ಕುಡಿಯುವ ನೀರು ಪೂರೈಕೆ, ಸೋಲಾರ್ ಅಳವಡಿಕೆ, ಶಾಲೆಗೆ ಬೆಂಚ್ ಮತ್ತು ಡೆಸ್ಕ್ ವಿತರಣೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಿರಂತರವಾಗಿ ಸಂಸ್ಥೆ ಶ್ರಮಿಸುತ್ತಿದೆ.
ಔರಾದ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವುದನ್ನು ಅರಿತು ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರ ನೇಮಕ ಮಾಡಿ ಗಡಿಯಲ್ಲಿ ಕನ್ನಡ ಭಾಷೆ ಉಳಿವಿಗೆ ಶ್ರಮಿಸುತ್ತಿದೆ. ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ. ಶಿಷ್ಯ ವೇತನ ಪಡೆದ ವಿದ್ಯಾರ್ಥಿಗಳು, ನಿವೇದಿತಾ ರವೀಂದ್ರ ಎಂ.ಬಿ.ಬಿಎಸ್ (50)ಸಾವಿರ, ಸಪ್ನಾ ಬಂಡೆಪ್ಪ ಸೋರಳ್ಳಿ ಬಿಇ (40)ಸಾವಿರ, ಸಂಗಮೇಶ್ವರ ಬಾಪುರಾವ್ ಔರಾದ ಬಿಇ (40)ಸಾವಿರ, ದೀಪಕ ಲಕ್ಷ್ಮಣ ಔರಾದ ಬಿಇ (40)ಸಾವಿರ, ಶ್ರೀಕೃಷ್ಣಾ ವೀಠಲರಾವ್ ಔರಾದ ಬಿಇ(40)ಸಾವಿರ, ಜಾನಸನ ವೈಜನಾಥ ಬಿಇ 40 ಸಾವಿರ, ಮಹಾದೇವ ತುಕರಾಮ ಔರಾದ ಡಿಪ್ಲೋಮಾ 12 ಸಾವಿರ, ರತನ ಪ್ರಭಾ ಬಿಎಸ್‌ಸಿ ಅಗ್ರಿ 40 ಸಾವಿರ, ರಾಹುಲ ಬಿಎಸ್‌ಸಿ ಅಗ್ರಿ 40 ಸಾವಿರ ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳಿಗೆ ವೇತನ ಪತ್ರ ನೀಡಲಾಗಿದೆ.
ವಿದ್ಯಾರ್ಥಿಗಳ ಆಯ್ಕೆ ವಿಧಾನ: ಸುಜ್ಞಾನಿ ನಿಧಿಯಲ್ಲಿ ಪ್ರತಿವರ್ಷ ಸಂಸ್ಥೆಯಿಂದ ಅರ್ಜಿ ಅಹ್ವಾನಿಸಲಾಗುತ್ತದೆ. ಅರ್ಜಿ ಆಹ್ವಾನಿಸಿದಾಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು. ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಬಡತನ ರೇಖೆಯ ಕೆಳಗೆ ಇರುವ ಕುಟುಂಬದ ಮಕ್ಕಳಿಗೆ ಹಾಗೂ ವೃತ್ತಿಪರ ಕೋರ್ಸ್ ಗೆ ಆದ್ಯತೆ ನೀಡಲಾಗುತ್ತದೆ. ಕಚೇರಿಗೆ ಬಂದ ಒಟ್ಟು ಅರ್ಜಿಗಳನ್ನು ಧರ್ಮಾಕಾರಿ ಡಾ| ವೀರೇಂದ್ರ ಹೆಗಡೆ ಅವರ ಗಮನಕ್ಕೆ ತಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಿಷ್ಯವೇತನ ಪಡೆದ ಮಕ್ಕಳು ಸಂಸ್ಥೆಗೆ ಹಣ ವಾಪಸ್ ಮಾಡುವ ಅವಶ್ಯಕತೆ ಇಲ್ಲ. ಅದರ ಬದಲಿಗೆ ಸಮಾಜಕ್ಕೆ ತಮ್ಮಿಂದ ಉತ್ತಮ ಕೊಡುಗೆಯನ್ನು ಸಿಗಲಿ ಎಂದು ಹಾರೈಸುವುದೇ ಸಂಸ್ಥೆಯ ನಿಸ್ವಾರ್ಥ ಉದ್ದೇಶವಾಗಿದೆ. ಬಡತನದಲ್ಲಿ ಜನಿಸಿದ ನಮಗೆ ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಕುಟುಂಬ ಸದಸ್ಯರಿಂದ ಹಣ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಾಗ ಓದಿನೊಂದಿಗೆ ನಾವೇ ಕೂಲಿ ಕೆಲಸ ಮಾಡಿ ಓದು ನಿಲ್ಲಿಸಬೇಕು ಎನ್ನುವುದರಷ್ಟರಲ್ಲಿ ಸಂಸ್ಥೆಯಿಂದ ಶಿಷ್ಯವೇತನಕ್ಕೆ ಅರ್ಜಿ ಕರೆದ ಮಾಹಿತಿ ಸಿಕ್ಕಾಗ ಅರ್ಜಿ ಸಲ್ಲಿಸಿದ್ದೇವೆ. ಇಂದು ಸಂಸ್ಥೆ ನಮ್ಮ ಪಾಲಕರ ಸ್ಥಾನದಲ್ಲಿ ನಿಂತು ನಮಗೆ ಓದಲು ಅವಕಾಶ ನೀಡುತ್ತಿದೆ. ಸಂಸ್ಥೆ ದಿನದಿಂದ ದಿನಕ್ಕೆ ಹೀಗೆ ಹೆಮ್ಮರವಾಗಿ ಬೆಳೆದು ನಮ್ಮಂತಹ ಸಾವಿರಾರು ಬಡ ಮಕ್ಕಳಿಗೆ ಅಕ್ಷರದ ಅಮೃತಧಾರೆ ಎರೆಯಬೇಕು ಎಂದು ವಿದ್ಯಾರ್ಥಿಗಳು ಭಾವುಕರಾಗಿ ಹೇಳುತ್ತಾರೆ.
ಗಡಿ ತಾಲೂಕಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಸಂಸ್ಥೆಯ ಸಿಬ್ಬಂದಿ ನಾವು ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶ್ರೀಗಳಿಗೆ ಮವನಿ ಮಾಡಿಕೊಂಡಿದ್ದೇವೆ. ಹಿಗಾಗಿಯೆ ತಾಲೂಕಿನ ಇಷ್ಟೊಂದು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಸಾಧ್ಯವಾಗಿದೆ.
ಮಾಸ್ತಾಪ, ಸಂಸ್ಥೆಯ ತಾಲೂಕು
ಯೋಜನಾಧಿಕಾರಿಗಳು, ಔರಾದ
ಸಂಸ್ಥೆಯಿಂದ ಬಡ ವಿದ್ಯಾರ್ಥಿಗಳಿಗೆ ನೀಡಿರುವ ಶಿಷ್ಯ ವೇತನ ಅವರ ಜೀವನವನ್ನೇ ಬದಲಾಯಿಸುತ್ತದೆ. ಸಂಸ್ಥೆ ಗಡಿ ತಾಲೂಕಿನ ಪ್ರತಿಯೊಂದು ವಿಷಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಇಲ್ಲಿನ ಸಿಬ್ಬಂದಿ ಕೂಡ ಜನರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.
ಬಸವರಾಜ ಶೆಟಕಾರ,
ಮುಖಂಡರು ಔರಾದ
ರವೀಂದ್ರ ಮುಕ್ತೇದಾರ