ಕೆಲವು ಸಿನಿಮಾಗಳ ಟ್ರೇಲರ್‌ಗಳನ್ನು ನೋಡಿದ ಕೂಡಲೇ ಈ ಸಿನಿಮಾದೊಳಗೇನೋ ಒಂದು ವಿಶೇಷತೆ ಇರಬಹುಹುದು ಎಂಬ ಭಾವನೆ ಬರುತ್ತದೆ. ಸದ್ಯ ಬಿಡುಗಡೆಯಾಗಿರುವ ಹೊಸಬರ “ಆರ’ ಸಿನಿಮಾದ ಟ್ರೇಲರ್ ಭರವಸೆ ಹುಟ್ಟಿಸಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ “ಆರ’. ಈ ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ.
ಸಿನಿಮಾ, ಸಂಪೂರ್ಣ ಹೊಸ ಪ್ರತಿಭೆಗಳಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ “ಆರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ರೋಹಿತ್ ಬರೆದಿದ್ದು, ಆನಂದ್ ನೀನಾಸಂ ಸತ್ಯ ರಾಜ್ ನಿಖೀಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಜು.28ಕ್ಕೆ ತೆರೆಕಾಣುತ್ತಿದೆ.
ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಶ್ವಿನ್ ವಿಜಯಮೂರ್ತಿ ಮಾತನಾಡಿ, “ಒಬ್ಬ ಹುಡುಗನ ಜರ್ನಿಯನ್ನು ಇಲ್ಲಿ ಹೇಳಿದ್ದೇವೆ. ಆ ಜರ್ನಿಯಲ್ಲಿ ಅವನು ಆಧ್ಯಾತ್ಮಿಕವಾಗಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ. ಅದು ಯಾವುದೇ ಮುಖಾಂತರವಾಗಿಯಾದರೂ ಬರಬಹುದು. ಹೆಣ್ಣಿನ, ದುಡ್ಡಿನ, ಸಂಬಂಧಗಳ ಮೂಲಕವಾದರೂ ಬರಬಹುದು… ಸೇರಿದಂತೆ ಅನೇಕ ಅಂಶಗಳನ್ನು ಹೇಳಲಾಗಿದೆ’ ಎನ್ನುವುದು ನಿರ್ದೇಶಕರ ಮಾತು.
“ಆರ’ ಎಂಬ ಯುವಕನ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಕಥೆ ಚಿತ್ರದಲ್ಲಿ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದೆ. ಚಿತ್ರದಲ್ಲಿ ಉಡುಪಿಯ ಕನ್ನಡವನ್ನು ಬಳಸಲಾಗಿದೆ. ಈ ಚಿತ್ರವನ್ನು “ಎಆರ್ ಫಿಲಂಸ್’ ಬ್ಯಾನರ್‌ನಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರ ಇದೇ ಜುಲೈ 28ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.