ಚಿಕ್ಕಬಳ್ಳಾಪುರ: ಗುಡಿಬಂಡೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಪೊಲೀಸರು ಬೇಧಿಸಿದ್ದಾರೆ. ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನೇ ಹಿರಿಯಣ್ಣ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಫ್ರೆಜರ್ ಟೌನ್ ನಿವಾಸಿ ಶಬ್ಬೀರ್ (47), ಬಿಟಿಎಂ ಲೇಔಟ್‌ನ ಆಟೋ ಚಾಲಕರಾದ ಅಶ್ರಫ್ (58), ರಹೀಂ (28), ಆರ್ಮ್ಸ್ಟ್ರಾಂಗ್ ರೋಡ್‌ನ ಮಹಮ್ಮದ್ ನೂರುಲ್ಲಾ (38) ಬಂಧಿತರು.
ಗುಡಿಬಂಡೆ ತಾಲೂಕಿನ ಚೆಂಡರೂ ಕ್ರಾಸ್ ಬಳಿಯ ನೀಲಿಗಿರಿ ತೋಪಿನಲ್ಲಿ 2014ರ ಜುಲೈ 2 ರಂದು 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು. ದೇಹವನ್ನು ಗುರುತು ಸಿಗದಂತೆ ಪೆಟ್ರೋಲ್‌ನಿಂದ ಸುಡಲಾಗಿತ್ತು. ಆದರೆ, ಮೃತನ ಹಸ್ತ ಗುರುತಿನಿಂದ ಆತನನ್ನು ಜೆಸಿ ನಗರದ ವಿಲಿಯಮ್ಸ್ ಟೌನ್‌ನ ಸೈಯದ್ ತಾಜ್ ಎಂದು ಗುರುತಿಸಲಾಗಿತ್ತು.
ಅಲ್ಲದೆ, ಆತ ಬೆಂಗಳೂರು ನಗರದ ಫ್ರೆಜರ್‌ಟೌನ್ ಪೊಲೀಸ್ ಠಾಣೆ, ಜೆಸಿ ನಗರ ಪೊಲೀಸ್ ಠಾಣೆ, ಭಾರತಿ ನಗರ ಪೊಲೀಸ್ ಠಾಣೆ ಹಾಗೂ ಇತರೇ ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂಬುದೂ ಗೊತ್ತಾಗಿತ್ತು.
ಪ್ರಕರಣದ ತನಿಖೆಗೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಗುಡಿಬಂಡೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಗೌತಮ್ ಮತ್ತು ಪಿಎಸ್‌ಐ ಪಾಪಣ್ಣ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡ ಕೊಲೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕೊಲೆಗೆ ಕಾರಣವಿದು: ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಶಬ್ಬೀರ್ ಕೊಲೆಗೀಡಾದ ತಾಜ್‌ನ ಹಿರಿಯ ಸಹೋದರನಾಗಿದ್ದಾನೆ. ಶಬ್ಬೀರ್‌ನ ಪತ್ನಿಯೊಂದಿಗೆ ತಾಜ್ ಕೆಲ ದಿನಗಳ ಕಾಲ ನಾಪತ್ತೆಯಾಗಿದ್ದ. ಇದರಿಂದ ಕೆರಳಿದ ಶಬ್ಬೀರ್ ಮೂವರು ಸ್ನೇಹಿತರ ಜೊತೆಗೂಡಿ ತಾಜ್‌ನನ್ನು ಕೊಲೆ ಮಾಡಿದ್ದ. ದೇಹವನ್ನು ಗುರುತು ಸಿಗದಂತೆ ಪೆಟ್ರೋಲ್‌ನಿಂದ ಸುಟ್ಟು ಹಾಕಿದ್ದ ಎಂದು ಎಸ್ಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.