Advertisement

August 22: ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ, ಸಿಎಂ ಪರ ಶಕ್ತಿ ಪ್ರದರ್ಶನ

01:36 AM Aug 19, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣ ದಲ್ಲಿ ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಿಎಂ ಪರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆ. 22ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ, “ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ಪ್ರಮಾದ ಮಾಡಿಲ್ಲ. ಆದರೂ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಈ ಸಂದರ್ಭದಲ್ಲಿ ಸರಕಾರ ಮತ್ತು ಪಕ್ಷ ಒಗ್ಗಟ್ಟು ಪ್ರದರ್ಶಿಸಬೇಕು. ಜತೆಗೆ ಪ್ರತಿತಂತ್ರ ರೂಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡಬೇಕು’ ಎಂಬ ಸಂದೇಶ ರವಾನಿಸಲು ಉದ್ದೇಶಿಸಲಾಗಿದೆ.

ವಿಪಕ್ಷ ಬಿಜೆಪಿಯು ಜನಾದೇಶವನ್ನು ಧಿಕ್ಕರಿಸಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತ ಬಂದಿದೆ, ಹಿಂಬಾಗಿಲಿನ ರಾಜಕಾರಣಕ್ಕೆ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಹಿಂದಿನಿಂದಲೂ ಆರೋಪಿಸು ತ್ತಲೇ ಬಂದಿದ್ದಾರೆ. ಈಗ ಸಿಎಂ ವಿರುದ್ಧವೇ ಅಭಿಯೋಜನೆಗೆ ಅನು ಮತಿ ನೀಡಿದ ಸಂದರ್ಭದಲ್ಲಿ ಕರೆ ದಿರುವ ಈ ಶಾಸಕಾಂಗ ಪಕ್ಷದ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮೊದಲೇ ವಿವಿಧ ವೇದಿಕೆಗಳ ಮೂಲಕ ಸಿಎಂ ಪರ ಒಗ್ಗಟ್ಟು ಪ್ರದರ್ಶನ ನಡೆದಿದೆ. ಆ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಬಣಗಳು ಆಚೀಚೆ ಜಿಗಿಯುವ ಸಾಧ್ಯತೆ ಇದೆ. ಪಕ್ಷದಲ್ಲಿ ಭಿನ್ನರಾಗಗಳನ್ನೇ ಎದುರು ನೋಡುತ್ತಿರುವ ವಿಪಕ್ಷಗಳಿಗೆ ಇದು ಆಹಾರವೂ ಆಗಬಹುದು. ಆಗ ಸರಕಾರವನ್ನು ಅಸ್ಥಿರಗೊಳಿಸುವ ಯತ್ನಕ್ಕೆ ಅವಕಾಶ ಕೊಟ್ಟಂತಾಗುತ್ತದೆ.

ಹಾಗಾಗಿ ಸಿಎಂ ಪರ ಎಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸಲು ಸಭೆ ಕರೆಯಲಾಗಿದೆ. ಅಲ್ಲದೆ ಎದುರಾಳಿಗಳ ಅಸ್ತ್ರಕ್ಕೆ ಪ್ರತಿತಂತ್ರವಾಗಿ ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಹೋರಾಟ ರೂಪಿಸಿ ಜನರಿಗೆ ಮನದಟ್ಟು ಮಾಡಿಕೊಡುವ ಗುರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಆರಂಭದಿಂದಲೂ ಒಗ್ಗಟ್ಟಿನ ಮಂತ್ರ
ವಿವಾದದಲ್ಲಿ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದ್ದಂತೆ ಹೈಕಮಾಂಡ್‌ ಸಹಿತ ಇಡೀ ಕಾಂಗ್ರೆಸ್‌ ಪಕ್ಷವು ಸಿಎಂ ಪರ ನಿಲುವನ್ನು ವಿವಿಧ ರೂಪ ಗಳಲ್ಲಿ ಪ್ರಕಟಿಸುತ್ತ ಬಂದಿದೆ. ವಿವಾದ ತೀವ್ರಗೊಂಡು ರಾಜ್ಯ ಪಾಲರು ನೋಟಿಸ್‌ ನೀಡು ತ್ತಿದ್ದಂತೆ ಸಿಎಂ ಡಿಸಿಎಂ ದಿಲ್ಲಿಗೆ ದೌಡಾಯಿಸಿ ದರು. ಅಲ್ಲಿ ಎರಡು ದಿನ ಬೀಡುಬಿಟ್ಟು ಪಕ್ಷದ ರಾಷ್ಟ್ರೀಯ ನಾಯಕರಿಗೆ ಪ್ರಕರಣದ ಸಂಪೂರ್ಣ ವಿವರಣೆ ನೀಡಿ ಮನದಟ್ಟು ಮಾಡಿದರು. ಇದಕ್ಕೆ ಹೈಕಮಾಂಡ್‌ನಿಂದ ಸಿಎಂಗೆ ನೈತಿಕ ಬೆಂಬಲವೂ ದೊರಕಿತು.

ಇದಾದ ಬಳಿಕ ಡಿಸಿಎಂ ಅಧ್ಯಕ್ಷತೆ ಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದು, ಇಡೀ ಸಂಪುಟ ಸಿಎಂ ಬೆನ್ನಿಗೆ ನಿಂತಿತು. ರಾಜ್ಯಪಾಲರು ಸಿಎಂಗೆ ನೀಡಿದ ನೋಟಿಸ್‌ ವಾಪಸ್‌ ಪಡೆದು, ಸಾಮಾಜಿಕ ಕಾರ್ಯಕರ್ತರು ನೀಡಿದ ದೂರನ್ನು ರದ್ದುಗೊಳಿಸುವಂತೆ ಸಲಹೆ ನೀಡುವ ನಿರ್ಣಯ ಕೈಗೊಳ್ಳುವುದರ ಜತೆಗೆ ಸಿಎಂ ಡಿಸಿಎಂ ಎರಡೂ ಬಣಗಳ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದರು. ಅನಂತರ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಅಧಿಕೃತ ನಿವಾಸ “ಕಾವೇರಿ’ಯಲ್ಲೇ ಎಲ್ಲ ಸಚಿವರ ಸಭೆ ಕರೆದು, ಸಿಎಂ ಬೆನ್ನಿಗೆ ಎಲ್ಲರೂ ನಿಲ್ಲುವಂತೆ ತಾಕೀತು ಮಾಡಿದರು. ಬೆನ್ನಲ್ಲೇ ಮಾಜಿ ಸಭಾಪತಿಗಳಾದ ವಿ.ಆರ್‌. ಸುದರ್ಶನ್‌, ಬಿ.ಎಲ್‌. ಶಂಕರ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಒಳಗೊಂಡಂತೆ ಪಕ್ಷದ ಹಿರಿಯ ನಾಯಕರೂ ತಮ್ಮ ಬೆಂಬಲ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next