Advertisement

ಆಗಸ್ಟ್ 20ರಂದು ಸಿಇಟಿ ಫಲಿತಾಂಶ; ಶುಲ್ಕ, ಸೀಟು ಹಂಚಿಕೆಯಲ್ಲಿ ಬದಲಾವಣೆ ಇಲ್ಲ !

07:29 PM Aug 17, 2020 | mahesh |

ಬೆಂಗಳೂರು: ಇದೇ ತಿಂಗಳ 20ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು, ಕಳೆದ ವರ್ಷವಿದ್ದಷ್ಟೇ ಶುಲ್ಕ ಪ್ರಮಾಣ ಮತ್ತು ಸೀಟು ಹಂಚಿಕೆ ಅನುಪಾತವನ್ನು ಮುಂದುವರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಇಲ್ಲಿ ತಿಳಿಸಿದರು.

Advertisement

ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ʼಕೋವಿಡ್‌ ಮತ್ತು ನೆರೆ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡುತ್ತಿಲ್ಲ. ಜತೆಗೆ ಕಳೆದ ವರ್ಷದ ಸೀಟು ಹಂಚಿಕೆ ಪ್ರಮಾಣದಲ್ಲಿಯೇ ಈ ವರ್ಷ ಕೂಡ ಸೀಟು ಹಂಚಿಕೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಸಂಘಗಳ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದರು ಎಂದು ಅವರು ತಿಳಿಸಿದರು.

ʼಜುಲೈ 30-31 ಮತ್ತು ಆಗಸ್ಟ್‌ 1ರಂದು ಸಿಇಟಿ ಪರೀಕ್ಷೆ ನಡೆದಿತ್ತು. ರಾಜ್ಯದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಪರೀಕ್ಷೆ ನಡೆದ ಕೇವಲ 19 ದಿನಗಳಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸರಕಾರ ಈ ಕ್ರಮ ಕೈಗೊಂಡಿದೆʼ ಎಂದು ಉಪ ಮುಖ್ಯಮಂತ್ರಿ ಹೇಳಿದರು.

45:30:25ಅನುಪಾತ:
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಈ ವರ್ಷ ಯಾವುದೇ ಬೇಡಿಕೆಯನ್ನು ಮುಂದಿಟ್ಟಿಲ್ಲ. ಸರಕಾರದ ಪ್ರಸ್ತಾವನೆಯನ್ನೇ ಒಪ್ಪಿಕೊಂಡಿವೆ. ಶೇಕಡಾ 45:30:25ರ ಅನುಪಾತದ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಇದರಲ್ಲಿ ಶೇ 45 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ ಶೇ.30ರಷ್ಟು ಸೀಟುಗಳನ್ನು ಕಾಮೆಡ್‌-ಕೆಗೆ ಹಂಚಿಕೆ ಮಾಡಲಾಗುತ್ತಿದೆ. ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ಮೀಸಲಿಡಲಾಗಿದೆ. ಇನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶೇ 40ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಕೊಟ್ಟರೆ ಶೇ 30ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ. ಉಳಿದ ಶೇ 30ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

Advertisement

ಶುಲ್ಕದಲ್ಲೂ ಬದಲಾವಣೆ ಇಲ್ಲ:
ಇನ್ನು ಶುಲ್ಕಕ್ಕೆ ಬಂದರೆ, ಒಂದು ಸಂರಚನೆಯಲ್ಲಿ; ಸಿಇಟಿ ವಿದ್ಯಾರ್ಥಿಗಳಿಗೆ ತಲಾ 65,360 ರೂ. ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ 1,43,748 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ 58,806 ರೂ. ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ 2,01,960 ರೂ. ನಿಗದಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಆನ್‌ಲೈನ್‌ ಕೌನ್ಸೆಲಿಂಗ್:‌
ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವರ್ಷ ಅಕ್ಟೋಬರ್ ತಿಂಗಳ ಒಳಗೆ ಆನ್‌ಲೈನ್‌ ಕೌನ್ಸೆಲಿಂಗ್‌ ಮಾಡಲಾಗುವುದು. ವಿದ್ಯಾರ್ಥಿಗಳು ತಾವು ಇದ್ದ ಜಾಗದಿಂದಲೇ ಕೌನ್ಸೆಲಿಂಗ್‌ ಎದುರಿಸಬಹುದು. ಯಾರೂ ಬೆಂಗಳೂರಿನ ತನಕ ಬರುವ ಅಗತ್ಯವಿಲ್ಲ. ಕಾಲೇಜು ಆಯ್ಕೆ ಮಾಡಿಕೊಂಡ ಮೇಲೆ ಆಯಾ ಕಾಲೇಜಿಗೆ ತೆರಳಿ ನಿಗದಿತ ಅವಧಿಯೊಳಗೆ ಪ್ರವೇಶಾತಿ ಪಡೆಯಬೇಕು. ಎರಡು ರೌಂಡ್‌ ಕೌನ್ಸೆಲಿಂಗ್‌ ಮತ್ತು ಒಂದು ಬಾರಿ ವಿಸ್ತರಿತ ಕೌನ್ಸೆಲಿಂಗ್‌ ಇರುತ್ತದೆ. ಇದು ಬಿಟ್ಟು ಹೆಚ್ಚುವರಿ ಸುತ್ತಿನ ಕೌನ್ಸೆಲಿಂಗ್‌ ಈ ಬಾರಿ ನಡೆಸುವುದಿಲ್ಲ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿಗಳು ಕೂಡ ಭರ್ತಿಯಾಗದ ಸೀಟುಗಳನ್ನು ನಿಗದಿತ ಅವಧಿಯೊಳಗೆ ಸಿಇಟಿಗೆ ವಾಪಸ್‌ ಮಾಡಬೇಕು. ಹಾಗೆ ಮಾಡಿದ 24 ಗಂಟೆಗಳಲ್ಲೇ ಪುನಃ ಸೀಟುಗಳನ್ನು ಕಾಲೇಜುಗಳಿಗೇ ನೀಡಲಾಗುತ್ತದೆ. ಈ ವಿಷಯದಲ್ಲಿ ಯಾರೂ ವಿಳಂಬ ಮಾಡಬಾರದು ಎನ್ನುವ ಸೂಚನೆಯನ್ನು ಕೂಡ ಸಂಘಗಳ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ ಎಂದರು.

ಸೀಟ್‌ ಬ್ಲಾಕಿಂಗ್‌ ಗೆ ಅವಕಾಶ ಇಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಸಲಾಗುವುದು ಎಂದು ಹೇಳಿದ ಅವರು ಈ ಬಾರಿಯ ಸಿಇಟಿ ಕೌನ್ಸೆಲಿಂಗ್‌ ನೀಟ್‌ ಮತ್ತು ಜೆಇಇ ಕೌನ್ಸೆಲಿಂಗ್‌ ನಂತರ ನಡೆಯಲಿದೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಪಾಂಡುರಂಗ ಶೆಟ್ಟಿ, ಡಾ.ಹೇಮಚಂದ್ರ ಸಾಗರ್‌, ಸಿ.ಎಂ.ಲಿಂಗಪ್ಪ, ಶಫೀ ಅಹಮದ್‌ ಹಾಜರಿದ್ದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ, ವಿಟಿಯು ಕುಲಪತಿ ಕರಿಸಿದ್ದಪ್ಪ ಅವರು ಆನ್‌ಲೈನ್‌ ಮೂಲಕ ಸಭೆಗೆ ಹಾಜರಾಗಿದ್ದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ರಾಜಾ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next