ಉಡುಪಿ: ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥಾ – 2024 ಆ.25ರಂದು ಬನ್ನಂಜೆಯ ಬಿಲ್ಲವರ ಸೇವಾ ಸಂಘದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2ಕ್ಕೆ ಬನ್ನಂಜೆಯ ಸಂಘದಲ್ಲಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಜಾಥಾಕ್ಕೆ ಚಾಲನೆ ನೀಡುವರು ಎಂದರು.
ಯುವ ವೇದಿಕೆ 11 ವರ್ಷಗ ಳಿಂದ ಸಂಘಟನೆ,ವಿದ್ಯೆ, ಜಾಗೃತಿ, ಪ್ರಗತಿ ಎಂಬ 4 ಧ್ಯೇಯಗಳೊಂದಿಗೆ ಕಾರ್ಯಕ್ರಮ ಸಂಘಟಿಸುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಬಗ್ಗೆ ಅರಿವು ಮೂಡಿಸುತ್ತಿದೆ ಎಂದ ಅವರು, ಜಾಥಾವು ಬನ್ನಂಜೆಯಿಂದ ಸಿಟಿ ಬಸ್ ನಿಲ್ದಾಣ, ಜೋಡುಕಟ್ಟೆ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್ ಮೂಲಕ ಕಲ್ಸಂಕ ಮಾರ್ಗವಾಗಿ ಬನ್ನಂಜೆ ತಲುಪಲಿದೆ. ಸಂಜೆ 5ಕ್ಕೆ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಸಮಾರೋಪ ಜರಗಲಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕರಾದ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ , ಕುದ್ರೋಳಿ ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಕಟಪಾಡಿ ವಿಶ್ವನಾಥ ಕ್ಷೇತ್ರ ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ. ಸುವರ್ಣ, ಹೈಟೆಕ್ ಆಸ್ಪತ್ರೆಯ ನ್ಯೂರೊ ಸರ್ಜನ್ ವಿನೋದ್ ಕುಮಾರ್, ಸೂರತ್ ಗೋಕುಲ ಸಾಫ್ಟ್ವೇರ್‌ನ ಸಿಇಒ ಸುಭಾಷ್, ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಆಡಳಿತ ಅಧಿಕಾರಿ ಶಿನೋದ್ ಟಿ.ಆರ್., ತೋನ್ಸೆ ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಬಿಲ್ಲವ ಸೇವಾ ಸಂಘ ಸಂಸ್ಥೆಯ ಗೌರವ ಅಧ್ಯಕ್ಷ ಭಾಸ್ಕರ ಜತ್ತನ್, ನಾರಾಯಣಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಅಮೀನ್, ಉದ್ಯಮಿಗಳಾದ ಜಯ ಪ್ರಕಾಶ್ ಹೂಡೆ, ಬಿಲ್ಲವ ಸೇವಾ ಸಂಘ ಕಾಪುವಿನ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಬಾಳಿಗ ಫಿಶ್‌ನೆಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ ವಿ. ಸುವರ್ಣ ಹಾಗೂ ಉಡುಪಿ ಪರಿಸರದ ಬಿಲ್ಲವ ಸಮುದಾಯ ಸಂಘಟನೆಗಳ ಅಧ್ಯಕ್ಷರು ಭಾಗವಹಿಸುವರು. ಜಾಥಾ ಆರಂಭಗೊಂಡ ಬಳಿಕ ಸಭಾಂಗಣ ದಲ್ಲಿ ತುಳು ಯಕ್ಷಗಾನ “ತುಳುನಾಡ ಬಲಿಯೇಂದ್ರ’ ಪ್ರದರ್ಶನವಿರಲಿದೆ.
5 ಸಾವಿರ ಮಂದಿ ಜಾಥಾದಲ್ಲಿ ಪಾಲ್ಗೊಳ್ಳುವರು. ಗೌರವ ಸಲಹೆಗಾರ ಸುಧಾಕರ ಡಿ.ಅಮೀನ್ ಪಾಂಗಾಳ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಲ್ಮಾಡಿ, ಉಪಾಧ್ಯಕ್ಷರಾದ ಎಂ.ಮಹೇಶ್ ಕುಮಾರ್, ವಿಜಯ ಕೋಟ್ಯಾನ್ ಪಿತ್ರೋಡಿ, ಸಂಚಾಲಕ ಕೃಷ್ಣಾನಂದ ಮಲ್ಪೆ ಉಪಸ್ಥಿತರಿದ್ದರು.