Advertisement
ನಮ್ಮ ವರ್ತಮಾನ ಮತ್ತು ಭವಿಷ್ಯದ ಮೇಲೆ ಅದು ಉಂಟುಮಾಡಿರುವ ಪರಿಣಾಮಗಳನ್ನು ಅರಗಿಸಿಕೊಳ್ಳಲು ನಾವು ಹೆಣಗಾಡುತ್ತಿದ್ದೇವೆ. ಕೋವಿಡ್-19 ಪ್ರಸರಣವನ್ನು ತಡೆಯುವುದಕ್ಕಾಗಿ ನಮ್ಮ ಜೀವನ ಶೈಲಿ ಮತ್ತು ಕೆಲಸದ ವಿಧಿವಿಧಾನಗಳಲ್ಲಿ ಅನೇಕ ಬದಲಾವಣೆಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಲಾಗಿದೆ. ಅವುಗಳೆಂದರೆ, ಸಾಮಾಜಿಕವಾಗಿ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಕೈಕುಲುಕುವುದಕ್ಕೆ ವಿದಾಯ, ಮಾಸ್ಕ್ ಧಾರಣೆ ಮತ್ತು ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು. ಕೋವಿಡ್ -19 ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಸೀಮಿತ ಸಂಖ್ಯೆಯ ಸಿಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದು, ಅತ್ಯಗತ್ಯ ಸೇವೆಗಳನ್ನು ಮಾತ್ರ ಒದಗಿಸಬೇಕು ಎಂಬುದಾಗಿ ಭಾರತ ಸರಕಾರ ಸುತ್ತೋಲೆ ಹೊರಡಿಸಿದೆ. ಆರೋಗ್ಯ ಸೇವಾ ಸಿಬಂದಿ ವಿಭಾಗಗಳ ಪೈಕಿ ಒಂದಾಗಿರುವ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಗಳು ತಾವು ಒದಗಿಸುವ ಆರೋಗ್ಯ ಸೇವೆಯ ಸ್ವಭಾವದಿಂದಾಗಿ ಅಗತ್ಯೇತರ ಆರೋಗ್ಯ ಸೇವೆಗಳ ಯಾದಿಯಲ್ಲಿ ಸೇರುತ್ತಾರೆ. ಆದ್ದರಿಂದ ಕೋವಿಡ್-19 ಪರಿಸ್ಥಿತಿಯಲ್ಲಿ ಆಡಿಯಾಲಜಿಸ್ಟ್ ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಥೆರಪಿಸ್ಟ್ ಗಳು ಒದಗಿಸುವ ಎಲ್ಲ ಸೇವೆಗಳನ್ನು ಮುಂದೂಡಲಾಗಿದೆ.
Related Articles
Advertisement
ಕೋವಿಡ್‌ಹಾವಳಿಯಿಂದ ಆಡಿಯಾಲಜಿಮತ್ತು ಸ್ಪೀಚ್ ಲ್ಯಾಂಗ್ವೇಜ್ ಥೆರಪಿಗೆ ಉಂಟಾಗಿರುವ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಾವು ಒದಗಿಸುವ ಚಿಕಿತ್ಸೆಯಲ್ಲಿ ನಿರಂತರತೆಯನ್ನು ಸಾಧಿಸಲು ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಥೆರಪಿಸ್ಟ್ ಗಳು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗಿದೆ. ಟೆಲಿ ಥೆರಪಿ ಒಂದು ಪರ್ಯಾಯ ಆಯ್ಕೆಯಾಗಿದ್ದು, ಪಾಶ್ಚಾತ್ಯ ದೇಶಗಳಲ್ಲಿ ಯಶಸ್ವಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಮತ್ತು ನಮ್ಮ ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಸಾಂಕ್ರಾಮಿಕ ಹಬ್ಬುವುದಕ್ಕೆ ಮುನ್ನವೇ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು.
ಟೆಲಿ ಪ್ರ್ಯಾಕ್ಟೀಸ್ : ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ಮತ್ತು ಆಡಿಯಾಲಜಿ ವಿಭಾಗದ ವೃತ್ತಿಪರ ಸೇವೆಗಳನ್ನುರೋಗಿಗಳು/ ಗ್ರಾಹಕರಿಗೆ ಒದಗಿಸಲು ಟೆಲಿಕಮ್ಯುನಿಕೇಶನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದೇ ಟೆಲಿಪ್ರ್ಯಾಕ್ಟೀಸ್. ರೋಗಿ/ ಗ್ರಾಹಕರನ್ನು ಈ ವೃತ್ತಿಪರಿಣಿತರೊಂದಿಗೆ ಅಥವಾ ಈ ವೃತ್ತಿಪರಿಣಿತರನ್ನು ವೃತ್ತಿಪರಿಣಿತರೊಂದಿಗೆ ಟೆಲಿಕಮ್ಯುನಿಕೇಶನ್ ತಂತ್ರಜ್ಞಾನದ ಮೂಲಕ ಸಂಪರ್ಕಿಸಿ ವಿಶ್ಲೇಷಣೆ, ಚಿಕಿತ್ಸೆ ಮತ್ತು/ ಅಥವಾ ಸಮಾಲೋಚನೆಯನ್ನು ಒದಗಿಸುವುದನ್ನು ಇದರಲ್ಲಿ ಅನುಸರಿಸಲಾಗುತ್ತದೆ. ಟೆಲಿ ಪ್ರ್ಯಾಕ್ಟೀಸ್ ಜತೆಗೆ ಟೆಲಿ ಆಡಿಯಾಲಜಿ, ಟೆಲಿ ಸ್ಪೀಚ್ ಮತ್ತು ಸ್ಪೀಚ್ ಟೆಲಿ ಥೆರಪಿಯಂಥವುಗಳನ್ನೂ ಒದಗಿಸುತ್ತಾರೆ. ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ (ಎಸ್‌ಎಲ್‌ಪಿ)ಗಳು ಒದಗಿಸುವ ಸೇವೆಯನ್ನು ಸ್ಥೂಲವಾಗಿ ಟೆಲಿ ರಿಹ್ಯಾಬಿಲಿಟೇಶನ್ ಎಂಬ ವಿಶಾಲ ವ್ಯಾಪ್ತಿಯಲ್ಲಿ ಗುರುತಿಸಲಾಗುತ್ತದೆ (ಅಮೆರಿಕನ್ ಟೆಲಿಮೆಡಿಸಿನ್ ಅಸೋಸಿಯೇಶನ್, 2010). ಟೆಲಿ ಪುನರ್ವಸತಿ ವಿಧಾನಗಳು ಕೋವಿಡ್-19 ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತವೆ.
ಇಲ್ಲಿ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಥೆರಪಿಸ್ಟ್‌ಗಳು ಎಷ್ಟು ಪರಿಣಾಮಕಾರಿಯಾಗಿ ಟೆಲಿ ಪ್ರ್ಯಾಕ್ಟೀಸ್ ಅಥವಾ ಟೆಲಿ ಪುನರ್ವಸತಿ ಸೇವೆಯನ್ನು ಅಳವಡಿಸಿಕೊಂಡಿದ್ದಾರೆ? ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಥೆರಪಿಯನ್ನು ಪರೋಕ್ಷವಾಗಿ ಅಂದರೆ, ಟೆಲಿ ವಿಧಾನದ ಮೂಲಕ ಒದಗಿಸುವ ಆಯ್ಕೆಯನ್ನು ಅನೇಕ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ಗಳು ಪರಿಗಣಿಸಿದ್ದರಾದರೂ ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಳ್ಳುವುದಕ್ಕೆ ಮುನ್ನ ಇದನ್ನು ನಿಜವಾಗಿ ಅಳವಡಿಸಿಕೊಂಡವರು ಕೆಲವೇ ಮಂದಿ. ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿದ ಆ್ಯಪ್ ಮೂಲಕ ಶ್ರವಣ ಸಾಧನವನ್ನು ದೂರದಿಂದಲೇ ಪ್ರೋಗ್ರಾಮ್ ಮಾಡುವುದರಿಂದ ಆರಂಭಿಸಿ ರೋಗಿ ಮತ್ತು ಸೇವಾ ಪೂರೈಕೆದಾರರು ದೂರದಲ್ಲಿಯೇ ಇದ್ದು ಸಮಗ್ರ ಟೆಲಿ ವಿಶ್ಲೇಷಣೆ ನಡೆಸುವುದರ ವರೆಗೆ ಟೆಲಿ ಆಡಿಯಾಲಜಿ ಎಂಬುದು ಇಂದು ಲಭ್ಯವಿರುವ ಅನೇಕ ರೂಪಗಳನ್ನು ಒಳಗೊಂಡಿದೆ.
ಟೆಲಿ ಸ್ಪೀಚ್‌ನಲ್ಲಿ ಕೆಲವು ಸಂವಾದಾತ್ಮಕ ಚಟುವಟಿಕೆಗಳು ಒಳಗೊಳ್ಳುತ್ತವೆ. ಇದರ ಮೂಲಕ ಮನೆಯಲ್ಲಿಯೇ ಅಥವಾ ಕ್ಲಿನಿಕ್‌ನಿಂದ ದೂರದಲ್ಲಿದ್ದು ವೀಡಿಯೋ ಕಾನ್ಫರೆನ್ಸ್ ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ. ಟೆಲಿ ಸ್ಪೀಚ್ ಅನ್ನು ಅನೇಕ ಸಂವಹನ ವೈಕಲ್ಯಗಳ ಚಿಕಿತ್ಸೆಗಾಗಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಹಿರಿಯರ ನ್ಯೂರೊಜೆನಿಕ್ ಸ್ಪೀಚ್ ಮತ್ತು ಲ್ಯಾಂಗ್ವೇಜ್ ಸಮಸ್ಯೆಗಳು (ಅಫೇಸಿಯಾ, ಡಿಸಾರ್ಥಿಯಾ ಮತ್ತು ಗ್ರಹಣಾತ್ಮಕ ಸಂವಹನ ಸಮಸ್ಯೆಗಳು), ತೊದಲು, ಧ್ವನಿ ಸಮಸ್ಯೆಗಳು, ಮಕ್ಕಳಲ್ಲಿ ಸ್ಪೀಚ್ ಮತ್ತು ಲ್ಯಾಂಗ್ವೇಜ್ ಸಮಸ್ಯೆಗಳು, ಲ್ಯಾರಿಂಗೆಕ್ಟೊಮಿ ಮತ್ತು ನುಂಗುವ ತೊಂದರೆಗಳಂತಹ ಸಮಸ್ಯೆಗಳ ಚಿಕಿತ್ಸೆಯಲ್ಲಿ ಅನೇಕ ದೃಶ್ಯ ಆಧಾರಿತ ಆ್ಯಪ್ಲಿಕೇಶನ್‌ಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಮೋಟಾರ್ ಸ್ಪೀಚ್ ಸಮಸ್ಯೆಗಳನ್ನು ಹೊಂದಿರುವ ಹಿರಿಯರಲ್ಲಿ ಇಂಟರ್‌ನೆಟ್‌ಮೂಲಕ ಲಭ್ಯವಿರುವ ತಂತ್ರಜ್ಞಾನಗಳು ಮತ್ತು ವಿಶ್ಲೇಷಣಾ ಮಾನದಂಡಗಳನ್ನು ತುಸು ಪರಿಷ್ಕರಿಸಿಕೊಂಡು ಉಪಯೋಗಿಸುವುದು ಸಾಧ್ಯವಿದೆ ಎಂಬುದನ್ನು ಟೆಲಿ ಪ್ರ್ಯಾಕ್ಟೀಸ್/ ಟೆಲಿ ಪುನರ್ವಸತಿಯ ಮೂಲಕ ಸೇವೆಗಳನ್ನು ಒದಗಿಸುವ ಪರಿಣಾಮಕಾರಿತನದ ಕುರಿತಾದ ಅಧ್ಯಯನಗಳು ತೋರಿಸಿಕೊಟ್ಟಿವೆ. ತೊದಲುವಿಕೆ ಮತ್ತು ಧ್ವನಿಯ ಸಮಸ್ಯೆಗಳ ಕುರಿತು ಆಸ್ಟ್ರೇಲಿಯಾದಲ್ಲಿ ನಡೆಸಲಾದ ಅಧ್ಯಯನ ಕೂಡ ಉತ್ತಮ ಗ್ರಾಹಕ ಸಂತೃಪ್ತಿಯ ಜತೆಗೆ ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಥೆರಪಿ ವೃತ್ತಿಪರಿಣಿತರು ತಮ್ಮ ಗುರಿಗಳನ್ನು ಚೆನ್ನಾಗಿ ಸಾಧಿಸಬಹುದು ಎಂದು ತೋರಿಸಿಕೊಟ್ಟಿವೆ.
ನುಂಗುವ ಸಮಸ್ಯೆಗೆ ಸಂಬಂಧಿಸಿ ಲಭ್ಯವಿರುವ ಕೆಲವು ಪ್ರಕಟಿತ ವರದಿಗಳ ಪ್ರಕಾರ ನುಂಗುವ ಥೆರಪಿಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೇಲೆ ಟೆಲಿ ಮನೆ ಆರೈಕೆ ಯೋಜನೆಯ ಪ್ರಕಾರ ಚಿಕಿತ್ಸಕರು ರೋಗಿಯ ಮೇಲೆ ನಿಗಾ ಇರಿಸಬಹುದುಮತ್ತು ಚಿಕಿತ್ಸೆಯ ಮುಂದುವರಿಕೆಯನ್ನು ಖಾತರಿ ಪಡಿಸಬಹುದು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಒದಗಿಸಲಾದ ಇಂಟರ್‌ನೆಟ್ ಆಧರಿತ ವಿಶ್ಲೇಷಣ ಸೂತ್ರಗಳು ಮಕ್ಕಳ ಸ್ಪೀಚ್ ಮತ್ತು ಲ್ಯಾಂಗ್ವೇಜ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚಿಕಿತ್ಸಾತ್ಮಕ ದರ್ಜೆಯದಾಗಿವೆ ಎಂಬುದಾಗಿ ಆಸ್ಟ್ರೇಲಿಯಾದಲ್ಲಿ ನಡೆಸಲಾದ ಪೈಲಟ್ ಅಧ್ಯಯನವೊಂದು ಸಾಬೀತುಪಡಿಸಿದೆ.
ಇಂಗ್ಲಂಡ್‌ನಲ್ಲಿ ಎಸ್‌ಎಲ್‌ಪಿಗಳು ದೂರ/ ಮನೆ/ ನರ್ಸರಿ ಕೇಂದ್ರಗಳಲ್ಲಿ ಒದಗಿಸಿದ ಸಂವಾದಾತ್ಮಕ ಆಡಿಯೋವಿಶ್ಯುವಲ್ ಆಧರಿತ ಸೇವೆಗಳಲ್ಲಿ ಹೆತ್ತವರು ತಮ್ಮ ಮಕ್ಕಳ ಚಿಕಿತ್ಸಾ ಯೋಜನೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿದ್ದು, ತಮ್ಮ ಮಕ್ಕಳ ಸಂವಹನ ಅಭಿವೃದ್ಧಿಯ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ಶಕ್ತವಾಗಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಸಂವಹನ ಪರಿಸರದಬಗ್ಗೆ ತಡೆರಹಿತವಾಗಿ ಅರಿತುಕೊಳ್ಳಲು ಎಸ್ ಎಲ್‌ಪಿಗಳು ಸಮರ್ಥರಾಗಿದ್ದಾರೆ ಮತ್ತು ಹೆತ್ತವರಿಗೆ ಮಾರ್ಗದರ್ಶನ ಮಾಡಲು ಶಕ್ತರಾಗಿದ್ದಾರೆ. ಟೆಲಿ ಪುನರ್ವಸತಿಯ ಬಗ್ಗೆ ಹೆತ್ತವರು ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಲಭಿಸಿದೆ. ಟೆಲಿ ಪ್ರ್ಯಾಕ್ಟೀಸ್ ಉತ್ತಮ ಪ್ರಯೋಜನಗಳನ್ನು ಹೊಂದಿದ್ದರೂ ಮುಖತಃ ಒದಗಿಸುವ ಚಿಕಿತ್ಸೆಗಿಂತ ಇದು ಕೆಲವು ಅಡ್ಡಿಗಳನ್ನು ಹೊಂದಿರುವುದು ನಿಜ. ಕೋವಿಡ್ – 19 ಹಾವಳಿಯ ಈ ಸಂದರ್ಭದಲ್ಲಿ ಟೆಲಿ ಪುನರ್ವಸತಿ ಅಳವಡಿಕೆಯಿಂದ ಉಂಟಾಗುವ ಎಲ್ಲ ಪ್ರಯೋಜನಗಳನ್ನು ಪರಿಗಣಿಸುವುದು ವಿಹಿತವಾಗಿದೆ.
ನಮ್ಮ ದೇಶದಲ್ಲಿ ಟೆಲಿ ಪ್ರ್ಯಾಕ್ಟೀಸ್ ಅಥವಾ ಟೆಲಿಪುನರ್ವಸತಿ ಸೇವೆಗಳು ಬಾಲ್ಯಾವಸ್ಥೆಯಲ್ಲಿ ಇವೆಯಾದರೂ ರೋಗಿಗಳ/ ಆರೈಕೆದಾರರ ಅಗತ್ಯಗಳಿಗೆ ತಕ್ಕಂತೆ ಮರುವಿನ್ಯಾಸಗೊಳಿಸಿ ದೀರ್ಘಕಾಲಿಕವಾಗಿ ಮತ್ತು ತೀವ್ರವಾಗಿ ಮನೆಯಲ್ಲಿಯೇ ಒದಗಿಸುವುದರಿಂದ ಆಗುವ ಪ್ರಯೋಜನಗಳನ್ನು ಅಲ್ಲಗಳೆಯಲಾಗದು. ಕೋವಿಡ್ -19 ಸ್ಥಿತಿಯಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿ ಮತ್ತು ಮುಂದುವರಿದ ಕನಿಷ್ಠ ಆರು ತಿಂಗಳುಗಳ ಕಾಲ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ಗಳಿಗೆ ಸೇವೆ ಒದಗಿಸುವಲ್ಲಿ ಉಂಟಾಗಿರುವ ಅಡ್ಡಿ ಮಾತ್ರವಲ್ಲದೆ ದೈಹಿಕ ದೂರ ಕಾಪಾಡಿಕೊಳ್ಳುವ ಅಗತ್ಯ, ವಿಶೇಷ ತಜ್ಞರ ಕೊರತೆ, ಸಂಚಾರಕ್ಕೆ ನಿರ್ಬಂಧ ಮೊದಲಾದ ಅಡಚಣೆಗಳಿಂದ ಪಾರಾಗುವುದಕ್ಕೆ ಈ ವಿಧಾನವು ಅತ್ಯಂತ ಉಪಯುಕ್ತವಾಗಿದೆ. ಆದ್ದರಿಂದ ಈ ದಿನಗಳಲ್ಲಿ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರ ಬದಲಾಗಿ ಟೆಲಿ ಪ್ರ್ಯಾಕ್ಟೀಸ್ ನಡೆಸುವುದು ಉಪಯುಕ್ತವಾಗಿದೆ. ಈ ಸೇವಾ ಪೂರೈಕೆದಾರರು ಇದುವರೆಗೆ ತಮ್ಮ ಗ್ರಾಹಕರು/ ರೋಗಿಗಳು ಸಾಧಿಸಿದ ಚಿಕಿತ್ಸಾ ಪ್ರಗತಿಯ ಮೇಲೆ ನಿಗಾ ಇರಿಸಿ ಮುಂದುವರಿಸಲು ಇದರಿಂದ ಸಾಧ್ಯವಾಗಲಿದೆ. ಅಂತಿಮವಾಗಿ, ಈ ವೃತ್ತಿಪರರು ಸದ್ಯದ ಕೋವಿಡ್-19 ಪರಿಸ್ಥಿತಿಯಲ್ಲಿ ತಮ್ಮ ಗ್ರಾಹಕರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬೇಕಾಗಿದೆ.
ಮನೆಯಲ್ಲಿ ಸಂವಹನಪೂರಕ ವಾತಾವರಣ : ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ರಿಂದ ಶೀಘ್ರ ಚಿಕಿತ್ಸೆ ಪಡೆಯುತ್ತಿದ್ದ 0-3 ವಯಸ್ಸಿನ ಮಕ್ಕಳಿಗೆ ಕೋವಿಡ್-19 ಕಾರಣ ದೇಶದಲ್ಲಿ ಹೇರಿಕೆಯಾಗಿರುವ ಲಾಕ್‌ಡೌನ್/ ನಿರ್ಬಂಧಗಳಿಂದಾಗಿ ಚಿಕಿತ್ಸೆಗೆ ಅಡ್ಡಿಯಾಗಿದ್ದು, ಇದು ಅವರ ಹೆತ್ತವರಿಗೆ ಆತಂಕ ಉಂಟು ಮಾಡಿದೆ. ಜತೆಗೆ, ಬೆಳವಣಿಗೆಗೆ ಸಂಬಂದಪಟ್ಟ ವೈಕಲ್ಯಗಳನ್ನು ಹೊಂದಿರುವ ಅಂದರೆ, ವರ್ತನಾತ್ಮಕ ಮತ್ತು ಇತರ ಸಮಸ್ಯೆಗಳನ್ನು ಹೊಂದಿರುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ಅನಿವಾರ್ಯವಾದಸಂದರ್ಭದಲ್ಲಿ ಮಗುವಿನ ತಾಯಿಯು ಚಿಕಿತ್ಸಕರ ಮಾರ್ಗದರ್ಶನದಡಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಬೇಕಾಗಿದೆ ಎಂಬುದನ್ನು ಮಗುವಿನ ಹೆತ್ತವರು ಅರಿತುಕೊಳ್ಳಬೇಕಾಗಿದೆ. ಸಂವಹನವನ್ನು ಪ್ರಚೋದಿಸುವ ನಿಜ ಬದುಕಿನ ಕೆಲವು ಅಂಶಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಸಂವಹನ ಪ್ರೇರಣೆ ಒದಗಿಸುವುದಕ್ಕೆ ಇದು ಒತ್ತು ನೀಡುತ್ತದೆ. ಇದು ಮಗುವಿನ ಭಾಷೆ ಮತ್ತು ಮಾತಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಲಾಕ್‌ಡೌನ್‌ಗೆ ಪೂರ್ವದ ಚಟುವಟಿಕೆಗಳನ್ನು ಹೆತ್ತವರು ಮುಂದುವರಿಸಬೇಕಾಗಿದೆ. ಇಲ್ಲಿ ತಾಯಂದಿರಿಗೆ ಕೆಲವು ಸಲಹೆಗಳಿವೆ: ಮಗುವಿನ ದೈನಿಕ ಚಟುವಟಿಕೆಗಳನ್ನು ಗಮನಿಸಿ, ಸತತವಾಗಿ ಮಾರ್ಗದರ್ಶನ ಒದಗಿಸಿ,ಮಗುವಿಗೆ ಸರಿಯಾಗಿ ವಿವರಣೆಗಳನ್ನು ನೀಡಿ, ಮಗುವಿನ ಜತೆಗೆ ಹೆಚ್ಚು ಸಮಯವನ್ನು ಕಳೆಯಿರಿ, ಮಗುವಿನ ಬೆಳವಣಿಗೆಗೆ ಅಗತ್ಯವಾದ ಮತ್ತು ಪ್ರಯೋಜನಕಾರಿಯಾದ ಚಟುವಟಿಕೆಗಳನ್ನು ಮಗುವಿಗೆ ಒದಗಿಸಿ.
ಡಾ| ವೀಣಾ ಕೆ.ಡಿ.
ಅಸೋಸಿಯೇಟ್ ಪ್ರೊಫೆಸರ್
ಡಾ| ಬಿ. ರಾಜಶೇಖರ್
ಮಾಜಿ ಡೀನ್ ಮತ್ತು ಪ್ರೊಫೆಸರ್
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಮಣಿಪಾಲ