Advertisement

ಆಡಿಯೋ ಬಾಂಬ್‌: ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಆಕ್ರೋಶ

06:38 AM Mar 25, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಸೀಟು ಹೊಂದಾಣಿಕೆಗೆ ಅಪಸ್ವರ ಕೇಳಿಬಂದಿರುವ ಬೆನ್ನಲ್ಲೇ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಕೆಲಸ ಮಾಡುವಂತೆ ಕಾಂಗ್ರೆಸ್‌ನ ಮಾಜಿ ಸಚಿವ ಚೆಲುವರಾಯಸ್ವಾಮಿ ಜೆಡಿಎಸ್‌ ಮುಖಂಡರೊಬ್ಬರ ಜತೆ ಮಾತನಾಡಿರುವರೆನ್ನಲಾದ ಆಡಿಯೋ ಬಹಿರಂಗಗೊಂಡಿದೆ.

Advertisement

ಈ ಮೂಲಕ ಎರಡೂ ಪಕ್ಷಗಳ ನಡುವೆ ಸೀಟು ಹೊಂದಾಣಿಕೆಯಾಗಿದ್ದರೂ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಬಯಲಾಗಿದೆ. ನಿಖೀಲ್‌ ನಾಮಪತ್ರ ಸಲ್ಲಿಕೆ ಮುನ್ನಾದಿನವೇ ಬಹಿರಂಗವಾಗಿರುವ ಈ “ಆಡಿಯೋ ಬಾಂಬ್‌’ ತೀವ್ರ ಸಂಚಲನ ಮೂಡಿಸಿದೆ.

ಮಂಡ್ಯದ ಮುಖಂಡ ಶಿವಪ್ರಕಾಶ್‌ ಬಾಬು ಎಂಬವರಿಗೆ ದೂರವಾಣಿ ಕರೆ ಮಾಡಿ ಸುಮಲತಾ ಪರವಾಗಿ ಕೆಲಸ ಮಾಡಬೇಕು. ಮಂಡ್ಯದ ಸ್ವಾಭಿಮಾನಕ್ಕಾಗಿ ಕೆಲಸ ಮಾಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿರುವುದು ಈ ಆಡಿಯೋದಲ್ಲಿದೆ.
ಈ ಆಡಿಯೋ ರವಿವಾರ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮಂಡ್ಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಜೆಡಿಎಸ್‌ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಾನು ಸ್ವಾಭಿಮಾನ ಬಿಟ್ಟು ಯಾರ ಬಳಿಯೂ ಭಿಕ್ಷೆ ಬೇಡು ವುದಿಲ್ಲ. ಬೆನ್ನಿಗೆ ಚೂರಿ ಹಾಕುವವರನ್ನು ನಂಬುವುದಿಲ್ಲ ಎಂದು ಹೇಳಿದ್ದರು. ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನುದ್ದೇಶಿಸಿಯೇ ಈ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.

ಸಿಎಂ ಪ್ರತಿಕ್ರಿಯೆ
ಆಡಿಯೋ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಆ ಕ್ಷೇತ್ರದಲ್ಲಿ ಆಗುತ್ತಿರುವ ವಿದ್ಯಮಾನ ಗಳಿಗೆ ಇದು ಸಾಕ್ಷಿ. ಕಾಂಗ್ರೆಸ್‌ ನಾಯಕರ ಗಮನಕ್ಕೂ ತಂದಿದ್ದೇವೆ. ನಾನು ಇದಕ್ಕೇ ಯಾರ ಬಳಿಯೂ ಹೋಗುವುದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

Advertisement

ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ಒಳಗೊಳಗೆ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರಿನಲ್ಲಿಯೂ ಕೆಲ ಜೆಡಿಎಸ್‌ ಮುಖಂಡರು ಬಂಡಾಯ ಸಾರಲು ಸಜ್ಜಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಉಂಟಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ದಿನೇಶ್‌, ಜಮೀರ್‌ ಸಿಎಂ ಭೇಟಿ
ಆಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಸಚಿವ ಜಮೀರ್‌ ಅಹ್ಮದ್‌ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಮಂಡ್ಯ ಸಹಿತ ಕೆಲವು ಕ್ಷೇತ್ರಗಳಲ್ಲಿನ ವ್ಯತ್ಯಾಸ ಸರಿಪಡಿಸಲಾಗುವುದು. ಕಾಂಗ್ರೆಸ್‌ ಪಕ್ಷ ನಿಮ್ಮ ಜತೆಯಿದೆ. ಅತೃಪ್ತರನ್ನು ಕರೆದು ಎಚ್ಚರಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next