Advertisement

ಶ್ರವಣ ಸಾಧನ ಒಂದು ಸಾಕೇ, ಎರಡು ಬೇಕೇ?

01:33 AM Jun 28, 2020 | Sriram |

ಕೇಳಿಸಿಕೊಳ್ಳುವುದಕ್ಕೆ ನಮಗೆ ಎರಡು ಕಿವಿಗಳಿವೆ. ಒಂದು ಕಿವಿ ಇರುವುದಕ್ಕಿಂತ ಎರಡು ಕಿವಿಗಳಿದ್ದರೆ ಉತ್ತಮ ಎಂಬುದು ಇದರರ್ಥವೇ? ಖಂಡಿತ ಹೌದು. ಹೇಗೆ ಎಂಬುದನ್ನು ನೋಡೋಣ. ಎರಡು ಕಿವಿಗಳಿಂದ ಆಲಿಸುವುದನ್ನು ಬೈನೋರಲ್‌ ಶ್ರವಣ ಎಂದು ಕರೆಯುತ್ತೇವೆ. ಈ ಬೈನೋರಲ್‌ ಶ್ರವಣದಿಂದ ಹಲವಾರು ಪ್ರಯೋಜನಗಳಿದ್ದು, ಅವುಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

Advertisement

ಎರಡೂ ಕಿವಿಗಳ ಮೂಲಕ ಕೇಳುವುದರಿಂದ ಮಾತಿನ ಅರ್ಥೈಸುವಿಕೆಯು ನಿಶ್ಶಬ್ದ ಮತ್ತು ಸದ್ದು – ಎರಡೂ ವಾತಾವರಣದಲ್ಲಿ ಉತ್ತಮವಾಗಿರುತ್ತದೆ. ಮೆದುಳು ಎರಡೂ ಕಿವಿಗಳ ಮೂಲಕ ಕೇಳಿಸಿಕೊಂಡ ಸದ್ದುಗಳನ್ನು ಹೋಲಿಸಿ ನೋಡಿ ಅರ್ಥವತ್ತಾದ ಶಬ್ದ ಸಂಕೇತಗಳಿಗೆ ಹೆಚ್ಚು ಒತ್ತು ಕೊಡುತ್ತದೆ, ಕೇವಲ ಸದ್ದುಗಳನ್ನು ನಿರ್ಲಕ್ಷಿಸುತ್ತದೆ. ಎರಡು ಕಿವಿಗಳಿರುವುದರಿಂದ ಸದ್ದುಗಳನ್ನು ದೊಡ್ಡದಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುವುದರಿಂದ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮೆದುಳಿಗೆ ಎರಡು ಅವಕಾಶಗಳು ಸಿಗುತ್ತವೆ. ಎರಡು ಕಿವಿಗಳಿಂದಾಗಿ ಸದ್ದಿನ ಮೂಲವನ್ನು ಗುರುತಿಸುವ (ಸದ್ದು ಬಂದ ದಿಕ್ಕು/ ಸ್ಥಳ/ ಮೂಲ ಗುರುತಿಸುವುದು) ಹೆಚ್ಚು ಸುಲಭವಾಗುತ್ತದೆ, ಸದ್ದು ಎರಡೂ ಕಿವಿಗಳಿಗೆ ಮುಟ್ಟಿದ ಸಮಯ ಮತ್ತು ಸದ್ದಿನ ಪ್ರಮಾಣ ವ್ಯತ್ಯಾಸವನ್ನು ತುಲನೆ ಮಾಡುವ ಮೂಲಕ ಇದು ಸಾಧ್ಯವಾಗುತ್ತದೆ. ಈ ಪ್ರಯೋಜನಗಳಿಂದ ಸದ್ದನ್ನು ಕೇಳಿಸಿಕೊಳ್ಳುವುದು ಹೆಚ್ಚು ಆರಾಮದಾಯಕವಾಗುತ್ತದೆ, ಆಲಿಸುವುದು ಸುಲಭವಾಗುತ್ತದೆ. ಆದ್ದರಿಂದಲೇ ಎರಡೂ ಕಿವಿಗಳ ಮೂಲಕ ಸಹಜ ಶ್ರವಣ ಸಾಮರ್ಥ್ಯ ಹೊಂದಿರುವವರು ಹೆಚ್ಚು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತದೆ.

ಈಗ, ಕಿವಿಗಳಲ್ಲಿ ಒಂದು ಅಥವಾ ಎರಡೂ ಕಿವಿಗಳ ಶ್ರವಣ ಸಾಮರ್ಥ್ಯ ನಷ್ಟವಾದರೆ ಏನಾಗುತ್ತದೆ ಎಂಬುದನ್ನು ನೋಡೋಣ.
ಶ್ರವಣ ಶಕ್ತಿ ನಷ್ಟವಾಗಿರುವ ವ್ಯಕ್ತಿಗಳಲ್ಲಿ ಬೈನೋರಲ್‌ ಆಲಿಸುವಿಕೆಯ ಸಹಜ ವ್ಯವಸ್ಥೆ ನಷ್ಟವಾಗಿರುತ್ತದೆ. ಆದರೆ ಶ್ರವಣ ಶಕ್ತಿ ನಷ್ಟ ಹೊಂದಿರುವ ಬಹುತೇಕರಲ್ಲಿ ಶ್ರವಣ ಸಾಧನಗಳು ಅಥವಾ / ಮತ್ತು ಕೊಕ್ಲಿಯಾರ್‌ ಇಂಪ್ಲಾಂಟ್‌ ಅಳವಡಿಕೆಯ ಮೂಲಕ ಇದನ್ನು ಪುನರ್‌ಸ್ಥಾಪಿಸಬಹುದಾಗಿದೆ. ಆದರೆ ಸಾಮಾನ್ಯವಾಗಿ ಒಂದು ಕಿವಿಯ ಶ್ರವಣ ಸಾಮರ್ಥ್ಯ ನಷ್ಟವಾಗಿರುವವರು ಸರಿಯಿರುವ ಇನ್ನೊಂದೇ ಕಿವಿಯ ಮೂಲಕ ನಿಭಾಯಿಸಲು ಮುಂದಾಗುತ್ತಾರೆ. ಈ ನಡವಳಿಕೆಗೆ ಹಲವು ಕಾರಣಗಳಿರಬಹುದು; ಶ್ರವಣ ಶಕ್ತಿ ನಷ್ಟವು ಎದ್ದು ಕಾಣುವಂಥದ್ದಲ್ಲ, ಆಂತರಂಗಿಕ ಎಂಬುದು ಒಂದು ಕಾರಣವಾಗಿರಬಹುದು. ಒಂದು ಕಿವಿಯ ಶ್ರವಣ ಶಕ್ತಿ ನಷ್ಟವಾಗಿರುವ ವ್ಯಕ್ತಿಗೆ ಸಹಜವಾಗಿರುವ ಇನ್ನೊಂದು ಕಿವಿಯ ಮೂಲಕ ಜೀವನ ನಡೆಸಲು ಸಾಧ್ಯ ಎಂದಾದರೆ ಶ್ರವಣ ಸಾಧನ ಧರಿಸಬೇಕಾದ ಅಗತ್ಯವೇನೂ ಇಲ್ಲ ಎಂಬ ಭಾವನೆ ಸವàìಸಾಮಾನ್ಯವಾಗಿರುತ್ತದೆ. ಅಲ್ಲದೆ, ಶ್ರವಣ ಸಾಧನ ಧರಿಸಿ ಸಮಾಜದ ವಕ್ರದೃಷ್ಟಿಗೆ ಗುರಿಯಾಗುವುದೂ ತಪ್ಪುತ್ತದೆ. ಕಡಿಮೆ ಆರ್ಥಿಕ ಸಾಮರ್ಥ್ಯ ಇನ್ನೊಂದು ಕಾರಣವಾಗಬಲ್ಲುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ, ಬೈನೋರಲ್‌ ಶ್ರವಣದ ಪ್ರಯೋಜನಗಳ ಬಗ್ಗೆ ಅರಿವಿಲ್ಲದಿರುವುದು ಪ್ರಧಾನ ಕಾರಣವಾಗಿರುತ್ತದೆ. ಎರಡೂ ಕಿವಿಗಳ ಶ್ರವಣ ಸಾಮರ್ಥ್ಯ ಕಳೆದುಕೊಂಡಿರುವವರಲ್ಲಿಯೂ ಬಹುತೇಕ ಮಂದಿ ಒಂದು ಬದಿಗೆ ಮಾತ್ರ ಶ್ರವಣ ಸಾಧನ ಉಪಯೋಗಿಸುತ್ತಿರುತ್ತಾರೆ. ಶ್ರವಣೋಪಕರಣಗಳನ್ನು ಖರೀದಿಸಲು ಆರ್ಥಿಕ ಸಮಸ್ಯೆ, ಸಾಮಾಜಿಕವಾಗಿ ಗೇಲಿಗೆ ಒಳಗಾಗುವ ಅಂಜಿಕೆ ಮತ್ತು ಬೈನೋರಲ್‌ ಶ್ರವಣದ ಪ್ರಯೋಜನಗಳ ಅರಿವಿನ ಕೊರತೆ ಪ್ರಮುಖ ಕಾರಣಗಳು.

ಇಂತಹ ಪ್ರಸಂಗಗಳಲ್ಲಿ, ವ್ಯಕ್ತಿಯು ಒಂದೇ ಕಿವಿಯಿಂದ ಆಲಿಸುವುದರಿಂದ ಅನೇಕ ನಷ್ಟಗಳು ಸಂಭವಿಸುತ್ತವೆ. ಒಂದೇ ಕಿವಿಯಿಂದ ಕೇಳಿಸಿಕೊಳ್ಳುವಾಗ ಧ್ವನಿ ಮೆಲ್ಲನೆ ಕೇಳಿಸುತ್ತದೆ, ಇನ್ನೊಂದು ಬದಿಯಿಂದ ಕೇಳಿಸಿಕೊಳ್ಳಬೇಕಾಗಿದ್ದ ಮಾಹಿತಿಗಳು ನಷ್ಟವಾಗುತ್ತವೆ. ಸದ್ದುಗದ್ದಲದ ವಾತಾವರಣದಲ್ಲಿ ಆಲಿಸುವುದು ಕಷ್ಟವಾಗುತ್ತದೆ, ಗುಂಪಿನಲ್ಲಿ ಮಾತುಕತೆ ನಡೆಯುತ್ತಿರುವಾಗ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ, ಸದ್ದಿನ ಮೂಲ, ದೂರ ಇತ್ಯಾದಿ ಅಂದಾಜಿಸುವುದು ಕಷ್ಟವಾಗುತ್ತದೆ ಮತ್ತು ಶ್ರಮದಾಯಕವಾಗಿರುತ್ತದೆ. ಹೀಗಾಗಿ ಆಲಿಸುವುದು ಹೆಚ್ಚು ಪ್ರಯತ್ನಪೂರ್ವಕ ಮತ್ತು ಆಯಾಸ ತರುವಂಥದ್ದಾಗುತ್ತದೆ. ಒಟ್ಟು ಪರಿಣಾಮವಾಗಿ ಜೀವನ ಗುಣಮಟ್ಟ ಕಳಪೆಯಾಗುತ್ತದೆ. ಒಂದೇ ಕಿವಿಗೆ ಶ್ರವಣ ಸಾಧನ ಧರಿಸಿಕೊಳ್ಳುವುದರಿಂದ ಆಗುವ ಇನ್ನೊಂದು ಅನನುಕೂಲ ಎಂದರೆ, ಶ್ರವಣ ಸಾಧನ ಧರಿಸದ ಇನ್ನೊಂದು ಕಿವಿ ಚಟುವಟಿಕೆ ರಹಿತವಾಗಿ ಅದು ಕೇಳಿಸಿಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಕ್ರಮೇಣ ಕುಸಿಯುತ್ತಾ ಹೋಗುತ್ತದೆ- ಬಳಸಿ ಅಥವಾ ಕಳೆದುಕೊಳ್ಳಿ.
ಎರಡೂ ಕಿವಿಗಳಿಗೆ ಶ್ರವಣ ಸಹಾಯ ಒದಗಿಸುವುದು ಎಂದರೆ ಎರಡೂ ಕಿವಿಗಳಲ್ಲಿ ಶ್ರವಣ ಸಾಧನಗಳ ಅಳವಡಿಕೆ, ಎರಡೂ ಕಿವಿಗಳಲ್ಲಿ ಕೊಕ್ಲಿಯಾರ್‌ ಇಂಪ್ಲಾಂಟ್‌, ಒಂದು ಕಿವಿಗೆ ಕೊಕ್ಲಿಯಾರ್‌ ಇಂಪ್ಲಾಂಟ್‌ ಮತ್ತು ಇನ್ನೊಂದು ಕಿವಿಗೆ ಶ್ರವಣ ಸಾಧನ.

ಎರಡೂ ಕಿವಿಗಳಿಗೆ ಶ್ರವಣ ಸಹಾಯ ಒದಗಿಸುವುದರಿಂದ ಎರಡೂ ಕಿವಿಗಳು ಸಕ್ರಿಯವಾಗಿರುತ್ತವೆ, ಪರಿಣಾಮವಾಗಿ ಶ್ರವಣ ಶಕ್ತಿಯ ಕುಸಿತವು ಕಡಿಮೆಯಾಗುತ್ತದೆ. ಎರಡೂ ಕಿವಿಗಳಲ್ಲಿ ಆಲಿಸುವುದರಿಂದ ಆಲಿಸುವ ಅನುಭವವು ಹಿತಕಾರಿಯಾಗಿರುತ್ತದೆ, ಸಮತೋಲಿತ ಕೇಳುವಿಕೆಯ ಅನುಭವ ಸಿಗುತ್ತದೆ, ಸಂತೃಪ್ತಿಯೂ ಒದಗುತ್ತದೆ. ಬೈನೋರಲ್‌ ಆಲಿಸುವಿಕೆಯ ಪ್ರಯೋಜನಗಳಿಂದಾಗಿ ಎರಡೂ ಕಿವಿಗಳ ಶ್ರವಣ ಸಾಮರ್ಥ್ಯ ನಷ್ಟವಾಗಿರುವ ಪ್ರತೀ ಮಗು ಅಥವಾ ವಯಸ್ಕರು ಎರಡೂ ಕಿವಿಗಳಿಗೆ ಶ್ರವಣೋಪಕರಣಗಳನ್ನು ಅಳವಡಿಸಿಕೊಳ್ಳಬೇಕು. ಒಂದು ಕಿವಿಗೆ ಕೊಕ್ಲಿಯಾರ್‌ ಇಂಪ್ಲಾಂಟ್‌ ಅಳವಡಿಸಿಕೊಂಡಿರುವವರೂ ಕೂಡ ಇನ್ನೊಂದು ಕಿವಿಗೆ ಶಕ್ತಿಯುತವಾದ ಮತ್ತು ಹೊಂದಿಕೆಯಾಗುವ ಶ್ರವಣ ಸಾಧನವನ್ನು ಧರಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗುತ್ತದೆ. ಜತೆಗೆ ಒಂದು ಕಿವಿಯ ಶ್ರವಣ ಸಾಮರ್ಥ್ಯ ನಷ್ಟ ಹೊಂದಿರುವವರು ಆ ಕಿವಿಗೆ ಶ್ರವಣೋಪಕರಣವನ್ನು ಧರಿಸಬೇಕು.
ಯಾವಾಗಲೂ ಎರಡೂ ಕಿವಿಗಳಿಂದ ಕೇಳಿಸಿಕೊಳ್ಳೋಣ!

Advertisement

“”ನಮಗೆ ಎರಡು ಕಿವಿಗಳು ಮತ್ತು ಒಂದು ಬಾಯಿ ಇದೆ. ನಾವು ಮಾತನಾಡುವುದಕ್ಕಿಂತ ದುಪ್ಪಟ್ಟು ಕೇಳಿಸಿಕೊಳ್ಳಬೇಕು ಎಂಬುದೇ ಇದರರ್ಥ.”
-ಡಯೋಜನೀಸ್‌

ಡಾ| ಉಷಾ ಶಾಸ್ತ್ರಿ
ಅಸಿಸ್ಟೆಂಟ್‌ ಪ್ರೊಫೆಸರ್‌, ಸೀನಿಯರ್‌ ಸ್ಕೇಲ್‌ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ,
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next