ಲಾಕ್ ಡೌನ್ ನಿಂದ ಯಾರು ಏನು ಕಳೆದುಕೊಂಡರೋ ಗೊತ್ತಿಲ್ಲ. ಆದರೆ, ಸಿನಿಮಾ ಪ್ರಿಯರಂತೂ ಒಂದಷ್ಟು ಒಳ್ಳೆಯ ಸಿನಿಮಾಗಳನ್ನು ನೋಡಿರೋದಂತು ಸುಳ್ಳಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಳ್ಳೆಯ ವಿಮರ್ಶೆ ಪಡೆದರೂ ಒಂದಷ್ಟು ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡಿತ್ತು. ಆ ಸಿನಿಮಾಗಳ ಬಗ್ಗೆ ಮೌಥ್ ಟಾಕ್ ಕ್ರಿಯೇಟ್ ಆಗಿ ಜನ ಆ ಸಿನಿಮಾಗಳನ್ನು ನೋಡು ಬಯಸುವ ಹೊತ್ತಿಗೆ ಚಿತ್ರಮಂದಿರಗಳಿಂದ ಆ ಸಿನಿಮಾಗಳನ್ನು ಎತ್ತಂಗಡಿ ಮಾಡಲಾಗಿತ್ತು.
ಆದರೆ ಈಗ ಲಾಕ್ ಡೌನ್‌ನಲ್ಲಿ ಸಿನಿಮಾ ಪ್ರಿಯರು ಆ ಚಿತ್ರಗಳನ್ನೆಲ್ಲಾ ನೋಡಿದ್ದಾರೆ. ಅದು ಡಿಜಿಟಲ್ ವೇದಿಕೆಯಲ್ಲಿ. ಅಮೆಜಾನ್, ನೆಟ್‌ಪ್ಲಿಕ್ಸ್‌ನ ಓಟಿಟಿಗಳಲ್ಲಿ ಈ ಸಿನಿಮಾಗಳನ್ನೆಲ್ಲಾ ನೋಡಿ ಎಂಜಾಯ್ ಮಾಡಿದ್ದಾರೆ. ಜೊತೆಗೆ ಕನ್ನಡ ಚಿತ್ರಗಳಿಗೆ ಭೇಷ್ ಎಂದಿದ್ದಾರೆ. ಲಾಕ್ ಡೌನ್‌ನ ಇಷ್ಟು ದಿನಗಳಲ್ಲಿ ಮಾಲ್ಗುಡಿ ಡೇಸ್, ದಿಯಾ, ನಮ್ ಗಣಿ ಬಿ.ಕಾಂ ಪಾಸ್, ನನ್ನ ಪ್ರಕಾರ, ಭರತ ಬಾಹುಬಲಿ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಕಪಟ ನಾಟಕ ಪಾತ್ರಧಾರಿ ಸೇರಿದಂತೆ ಹಲವು ಸಿನಿಮಾಗಳನ್ನು ಡಿಜಿಟಲ್ ವೇದಿಕೆಯಲ್ಲಿ ಜನ ನೋಡಿ ಎಂಜಾಯ್ ಮಾಡಿದ್ದಾರೆ.
ಈ ಮೂಲಕ ಕನ್ನಡ ಸಿನಿಮಾಗಳನ್ನು ಮೆಚ್ಚಿದ್ದಾರೆ. ಯಾವ್ಯಾವ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತೋ ಆ ಎಲ್ಲಾ ಸಿನಿಮಾಗಳನ್ನು ಹುಡುಕಿ ನೋಡುವ ಮೂಲಕ ಲಾಕ್ ಡೌನ್ ಸಮಯವನ್ನು ಸದಭಿರುಚಿಯ ಸಿನಿಮಾಗಳಿಗೆ ಮೀಸಲಿಟ್ಟಿದ್ದಾರೆ. ತಮ್ಮ ಸಿನಿಮಾಗಳನ್ನು ಪ್ರೇಕ್ಷಕ ಡಿಜಿಟಲ್ ಮೀಡಿಯಾದಲ್ಲಿ ಇಷ್ಟಪಟ್ಟಿರೋದು ಸಿನಿಮಾ ಮಂದಿಗೂ ಖುಷಿ ಕೊಟ್ಟಿದೆ. ಏಕೆಂದರೆ ಮುಂದಿನ ದಿನಗಳಲ್ಲಿ ಥಿಯೇಟರ್ ಗಿಂತ ಡಿಜಿಟಲ್ ಮೀಡಿಯಾ ಸ್ಟ್ರಾಂಗ್ ಆಗುವ ಸಾಧ್ಯತೆ ಇದೆ.
ಹಾಗಾಗಿ ಈ ಬೆಳವಣಿಗೆ ಖುಷಿ ನೀಡಿದೆ. ಸದ್ಯ ಒಂದಷ್ಟು ಮಂದಿ ಹೊಸಬರು ಮುಂದಿನ ದಿನಗಳಲ್ಲಿ ಡಿಜಿಟಲ್ ವೇದಿಕೆ ಮೂಲಕ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಹೇಳಿಕೇಳಿ ಹೊಸಬರಿಗೆ ಗಾಂ—ನಗರದಲ್ಲಿ ಚಿತ್ರಮಂದಿರ ಸುಲಭವಾಗಿ ಸಿಗೋದಿಲ್ಲ. ಸಿಕ್ಕರೂ ಮೊದಲೇ ಬಾಡಿಗೆ ಕಟ್ಟಿ ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಪರ್ಯಾಯ ಮಾರ್ಗವಾಗಿ ಈ ಡಿಜಿಟಲ್ ವೇದಿಕೆಗಳು ಸಿದ್ಧವಾಗುತ್ತಿವೆ.
ಇನ್ನು ಅಮೆಜಾನ್, ನೆಟ್‌ಪ್ಲಿಕ್ಸ್‌ನಂತೆ ಕನ್ನಡದಲ್ಲೂ ಪ್ರತ್ಯೇಕ ಓಟಿಟಿ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ಈ ಪ್ರಯತ್ನ ಯಶಸ್ವಿಯಾದರೆ, ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಓಟಿಟಿ ಸಿಗುವ ಜೊತೆಗೆ ಕನ್ನಡ ಚಿತ್ರಗಳ ಬೇಡಿಕೆ ಕೂಡಾ ಹೆಚ್ಚಲಿದೆ.