ಹೊಸದಿಲ್ಲಿ: “ವೀಕ್ಷಕರ ಸ್ವರ್ಗ’ ವಾಗಿರುವ ಭಾರತದಲ್ಲೀಗ ಖಾಲಿ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವ ಸ್ಥಿತಿ ಎದುರಾಗಿದೆ. ದೇಶಿ ಪಂದ್ಯಾವಳಿಯಾದ ಸಯ್ಯದ್ ಮುಷ್ತಾಕ್ ಅಲಿ ಟಿ20 ಕೂಟದಿಂದ ಮೊದಲ್ಗೊಂಡು ಪ್ರವಾಸಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ಮುಚ್ಚಲ್ಪಡಲಿದೆ. ಕೊರೊನಾ ಕಡಿಮೆಯಾದರೂ, ಶೇ. 50ರಷ್ಟು ವೀಕ್ಷಕರಿಗೆ ಅವಕಾಶ ನೀಡಬಹುದೆಂಬ ಕೇಂದ್ರ ಸರಕಾರದ ಆದೇಶವಿದ್ದರೂ ವೀಕ್ಷಕರನ್ನು ಕಡೆಗಣಿಸಿದ್ದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.
ಮೂಲವೊಂದರ ಪ್ರಕಾರ, ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಾವಕಾಶ ನೀಡುವುದು ಬಿಸಿಸಿಐ ಯೋಜನೆಯಾಗಿದೆ. ಆದರೆ ಅಂತಿಮ ನಿರ್ಧಾರವೇನಿದ್ದರೂ ಸರಕಾರ ಹಾಗೂ ಸ್ಥಳೀಯ ಆಡಳಿತದ್ದು ಎಂದು ಮಂಡಳಿ ಮೂಲವೊಂದು ತಿಳಿಸಿದೆ. ಈ ಸರಣಿ ಮಾ. 12ರಿಂದ ಅಹ್ಮದಾಬಾದ್‌ನಲ್ಲಿ ಆರಂಭವಾಗಲಿದೆ.
“ಭಾರತ-ಇಂಗ್ಲೆಂಡ್ ನಡುವಿನ ಟಿ20 ಥ್ರಿಲ್ಲಿಂಗ್ ಸರಣಿ ವೇಳೆ ವೀಕ್ಷಕರಿಗೆ ಪ್ರವೇಶ ನೀಡುವ ಯೋಜನೆ ನಮ್ಮದು. ಆದರೆ ಎಷ್ಟು ಜನರಿಗೆ ಅವಕಾಶ ಕೊಡಬೇಕೆಂಬ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಗರಿಷ್ಠ ಶೇ. 50ರಷ್ಟು ಆಸನಗಳನ್ನು ಭರ್ತಿಗೊಳಿಸಬಹುದು. ಅಂತಿಮ ನಿರ್ಧಾರವೇನಿದ್ದರೂ ಸರಕಾರದ್ದು. ಸುರಕ್ಷತೆಗೆ ಮೊದಲ ಆದ್ಯತೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಿಕೆಟ್ ನಿರೀಕ್ಷೆ ಬೇಡ :
ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳ ತಾಣವಾಗಿರುವ ಚೆನ್ನೈಯಲ್ಲಿ ವೀಕ್ಷಕರಿಗೆ ನಿರ್ಬಂಧ ವಿಧಿಸಿ ಪ್ರಕಟನೆ ಹೊರಡಿಸಲಾಗಿದೆ. ವೀಕ್ಷಕರು ಟಿಕೆಟ್ ಕೌಂಟರ್ ತೆರೆಯಲ್ಪಡಲಿದೆ ಎಂಬ ನಿರೀಕ್ಷೆಯಲ್ಲಿರುವುದು ಬೇಡ ಎಂದು ರಾಜ್ಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಆರ್.ಎಸ್. ರಾಮಸ್ವಾಮಿ ತಿಳಿಸಿದ್ದಾರೆ. ಆದರೆ ಅಹ್ಮದಾಬಾದ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟಗೊಂಡಿಲ್ಲ. ಇಲ್ಲಿ ಕೊನೆಯ 2 ಟೆಸ್ಟ್ ಪಂದ್ಯಗಳು (ಫೆ. 24-28, ಮಾ. 4-8) ನಡೆಯಲಿವೆ.