Advertisement
ಈಗಾಗಲೇ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಕೆಲವೊಂದು ಲುಕ್ ಹೊರಬಿದ್ದಿದ್ದು, ಶಿವಣ್ಣ ಅವರ ಪಾತ್ರ ಹೇಗಿರಬಹುದು..? ಚಿತ್ರದೊಳಗೆ ಶಿವಣ್ಣ ಹೇಗೆ ಕಾಣಲಿದ್ದಾರೆ..? ಎಂಬ ಕುತೂಹಲ ಚಿತ್ರಪ್ರೇಮಿಗಳಲ್ಲಿ ಮನೆ ಮಾಡಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಡಿಸೆಂಬರ್ ಅಂತ್ಯದೊಳಗೆ “ಕವಚ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.
Related Articles
Advertisement
ಶಿವಣ್ಣ ರಿಮೇಕ್ ಚಿತ್ರ ಮಾಡೋದಕ್ಕೆ ಕಾರಣ..?: ಇನ್ನು ಶಿವಣ್ಣ ಅವರೇ ಹೇಳುವಂತೆ, “ಈ ರಿಮೇಕ್ ಚಿತ್ರ ಮಾಡಲು ಕಾರಣ ಅದರಲ್ಲಿರುವ ಕಥೆ. ಮೊದಲೆ ಮಲೆಯಾಳಂನಲ್ಲಿ ಈ ಚಿತ್ರವನ್ನು ನೋಡಿ ತುಂಬ ಇಷ್ಟಪಟ್ಟಿದ್ದೆ. ಚಿತ್ರದ ಕಥೆ, ಮೋಹನ್ ಲಾಲ್ ಅಭಿನಯ ಎಲ್ಲವೂ ನನಗೆ ತುಂಬ ಇಷ್ಟವಾಗಿತ್ತು. ಆ ಚಿತ್ರ ನನ್ನನ್ನು ಯಾವಾಗಲೂ ಕಾಡುತ್ತಿತ್ತು.
ಒಮ್ಮೆ ಕಾಕತಾಳೀಯವೆಂಬಂತೆ, ಈ ಚಿತ್ರವನ್ನು ಕನ್ನಡದಲ್ಲೂ ಮಾಡುತ್ತಿದ್ದು, ಮೋಹನ್ ಲಾಲ್ ಅವರ ಪಾತ್ರವನ್ನು ನೀವೆ ಮಾಡಬೇಕು ಎಂದು ನಿರ್ಮಾಪಕರು ಕೇಳಿಕೊಂಡಾಗ ನನಗೆ ಅಚ್ಚರಿ ಮತ್ತು ಭಯ ಎರಡೂ ಆಯಿತು’ ಎನ್ನುತ್ತಾರೆ. ನಂತರ ತಾವು ಈ ಚಿತ್ರ ಮಾಡಬೇಕೆ.., ಬೇಡವೇ..? ಎಂಬ ನಿರ್ಧಾರಕ್ಕೆ ಬರಲು ಕೆಲ ಸಮಯ ತೆಗೆದುಕೊಂಡ ಶಿವಣ್ಣ ಕೊನೆಗೂ ಈ ಚಿತ್ರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟರು. ಆ ನಂತರ “ಕವಚ’ ಚಿತ್ರದ ಕೆಲಸಗಳು ಶುರುವಾದವು.
ಈ ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅನುಭವಗಳ ಬಗ್ಗೆ ಮಾತನಾಡುವ ನಟ ಶಿವರಾಜಕುಮಾರ್, “ಈ ಪಾತ್ರ ಮಾಡುವ ಮೊದಲು ಭಯವಿತ್ತು. ಯಾಕೆಂದರೆ, ಅಂಧನ ಪಾತ್ರ ಅದುವರೆಗೂ ಮಾಡಿಯೇ ಇಲ್ಲ. ಇದಕ್ಕೂ ಮುನ್ನ ಆ ಚಿತ್ರ ನೋಡಿದ್ದೆ. ಸೆಟ್‌ನಲ್ಲಿ ಒಬ್ಬರು ಒಂದಷ್ಟು ಹೇಳಿಕೊಟ್ಟರು. ಉಳಿದಂತೆ ಆ ಪಾತ್ರಕ್ಕಾಗಿ ಬೇರೆಯಾವುದೇ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಬ್ಲೆ„ಂಡ್ ಆಗಿಯೇ ಸೆಟ್‌ಗೆ ಹೋದೆ.
ಅಲ್ಲಿ ಏನು ಹೇಳಿಕೊಡುತ್ತಿದ್ದರೊ, ಅದನ್ನೇ ಮಾಡುತ್ತಾ ಹೋದೆ. ಅಂಧರು ಅಂದಾಕ್ಷಣ, ಎಲ್ಲರೂ ಒಂದೇ ರೀತಿ ಇರಲ್ಲ. ಇಲ್ಲಿ ಸಾಗರ ಎಂಬ ಊರಿನ ಬಗ್ಗೆ ಅವನಿಗೆ ಎಲ್ಲವೂ ಗೊತ್ತಿರುತ್ತೆ. ಹಾಗಾಗಿ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವೇಗವಾಗಿ ಅವನ ಪಾಡಿಗೆ ಅವನು ನಡೆದಾಡುತ್ತಿರುತ್ತಾನೆ. ಇನ್ನು, ಆ ಪಾತ್ರ ನಗುವುದು, ಅಳುವುದು ಓವರ್ ಆಗುತ್ತಾ ಎಂಬ ಪ್ರಶ್ನೆ ಇತ್ತು. ಮಾನಿಟರ್ ನೋಡಿ, ನೋಡಿ ನೈಜತೆ ಕಟ್ಟಿಕೊಡುವ ಉದ್ದೇಶದಿಂದ ಪಾತ್ರ ನಿರ್ವಹಿಸುತ್ತಿದ್ದೆ.
ಇನ್ನು, ಕಣ್ಣುಗಳನ್ನು ಒಂದೇ ಸಮನೆ ಮೇಲೆ ಮಾಡಿಕೊಳ್ಳಬೇಕಿತ್ತು. ಅದರಿಂದ ತುಂಬಾ ತಲೆನೋವಾಗುತ್ತಿತ್ತು. ಎಷ್ಟೋ ಸಲ, ಕಿರಿಕಿರಿಯಾಗಿ, ಜಗಳ ಆಡಿದ್ದುಂಟು. ಆ ಸಮಯದಲ್ಲಿ ಎಲ್ಲರೂ ನನ್ನನ್ನು ಬೈದುಕೊಂಡಿರಬಹುದೇನೋ? ಆದರೆ, ಅದು ಸಿಟ್ಟಿನಿಂದ ಆಡಿದ್ದಲ್ಲ, ಪ್ರೀತಿಯಿಂದ ಮಾಡಿದ ಜಗಳ. ಒಟ್ಟಿನಲ್ಲಿ ಈ ಚಿತ್ರಕ್ಕಾಗಿ ಸುಮಾರು ಎಂಟು ತಿಂಗಳು ಕೆಲಸ ಮಾಡಿದ್ದು, ಆ ಸಮಯ ಹೇಗೆ ಕಳೆದು ಹೋಯ್ತು ಅನ್ನೋದೇ ಗೊತ್ತಾಗಲಿಲ್ಲ’ ಎನ್ನುತ್ತಾರೆ.
ಕನ್ನಡಕ್ಕೆ ಒಪ್ಪುವ ಕಥೆ: ಶಿವಣ್ಣ ಅವರೇ ಹೇಳುವಂತೆ “ಕವಚ’ ಒಂದು ಟೀಮ್ ವರ್ಕ್‌ನಿಂದಾಗಿರುವ ಸಿನಿಮಾ. ಚಿತ್ರ ರಿಮೇಕ್ ಆದರೂ ಕನ್ನಡ ನೇಟಿವಿಗೆ ತಕ್ಕಂತೆ ಬರಬೇಕು ಎಂಬ ಕಾರಣಕ್ಕೆ ಪ್ರತಿಯೊಂದನ್ನು ಹೊಸದಾಗಿ ಮಾಡಲಾಗಿದೆಯಂತೆ. ಕಥೆಯ ಎಳೆಯನ್ನು ಮಾತ್ರ “ಒಪ್ಪಂ’ ಚಿತ್ರದಿಂದ ತೆಗೆದುಕೊಂಡರೂ, ಉಳಿದೆಲ್ಲವೂ ಕನ್ನಡದ ನೇಟಿವಿಟಿಯಲ್ಲೆ ಇದೆ.
ಶಿವರಾಜಕುಮಾರ್ ಅವರೊಂದಿಗೆ, ಇಶಾ ಕೊಪ್ಪಿಕರ್, ರವಿಕಾಳೆ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಮೊದಲಾದ ಕಲಾವಿದರ ತಾರಾಗಣವಿದೆ. “ಹೆಚ್.ಎಂ.ಎ ಸಿನಿಮಾ’ ಬ್ಯಾನರ್‌ನಲ್ಲಿ ಎಂ.ವಿ.ವಿ ಸತ್ಯ ನಾರಾಯಣ್ “ಕವಚ’ ಚಿತ್ರವನ್ನು ನಿರ್ಮಿಸುತ್ತಿದ್ದು, ಜಿ.ವಿ.ಆರ್ ವಾಸು ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಕವಚ’ದ ದೃಶ್ಯಗಳನ್ನು ರಾಹುಲ್ ಶ್ರೀವಾತ್ಸವ್ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರೆ, ಜೊ.ನಿ ಹರ್ಷ ಚಿತ್ರದ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ.
ಬಿಡುಗಡೆಗೊ ಮೊದಲೆ ಬಾರೀ ಪ್ರತಿಕ್ರಿಯೆ: ಇನ್ನು ಸದ್ದಿಲ್ಲದೆ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ “ಕವಚ’ ಚಿತ್ರತಂಡ ಇತ್ತೀಚೆಗೆ ತನ್ನ ಹಾಡುಗಳನ್ನು ಬಿಡುಗಡೆಗೊಳಿಸಿದೆ. ಪವರ್‌ಸ್ಟಾರ್ ಪುನೀತ್ ರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಲಿರಿಕಲ್ ವಿಡಿಯೋವನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರದ ಹಾಡುಗಳು ಝೀ ಮ್ಯೂಸಿಕ್ ಆಡಿಯೋ ಸಂಸ್ಥೆಗೆ ಬಹುದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ, ಮತ್ತೆರಡು ಹಾಡುಗಳಿಗೆ “ಒಪ್ಪಂ’ ಚಿತ್ರದ ಖ್ಯಾತಿಯ ಜಿಮ್ ಸಂಗೀತ ಸಂಯೋಜಿಸಿದ್ದಾರೆ. ಕೆ. ಕಲ್ಯಾಣ್, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಿನಿಪ್ರಿಯ ಕೇಳುಗರಿಂದ ಮತ್ತು ಸೋಷಿಯಲ್ ಮೀಡಿಯಾಗಳಿಂದಲೂ ಭರ್ಜರಿ ಬೆಂಬಲ ಸಿಗುತ್ತಿದ್ದು, ಇದೇ ಖುಷಿಯಲ್ಲಿರುಚ ಚಿತ್ರತಂಡ ಶೀಘ್ರದಲ್ಲಿಯೇ ಚಿತ್ರದ ಹಾಡುಗಳ ಯಶಸ್ವಿ ಸಂಭ್ರಮಾಚರಣೆ ಸಮಾರಂಭವನ್ನು ಆಯೋಜಿಸುವ ಯೋಚನೆಯಲ್ಲಿದೆ.
ಡಿಸೆಂಬರ್ ಅಂತ್ಯದೊಳಗೆ “ಕವಚ’ ದರ್ಶನ: ಒಟ್ಟಾರೆ ಹದಿನಾಲ್ಕು ವರ್ಷದ ನಂತರ ಶಿವಣ್ಣ ರಿಮೇಕ್ ಸಿನಿಮಾವನ್ನು ಏಕೆ ಒಪ್ಪಿಕೊಂಡರು ..? ಚಿತ್ರದಲ್ಲಿ ಅಂಥದ್ದೇನಿದೆ..? ಎಂಬ ಹಲವರ ಪ್ರಶ್ನೆಗೆ “ಕವಚ’ ಚಿತ್ರ ಉತ್ತರ ಕೊಡುವುದು ಪಕ್ಕಾ ಎನ್ನುವುದು ಚಿತ್ರತಂಡದ ಮಾತು. ಸದ್ಯ ತನ್ನ ಕಥಾಹಂದರ, ಪೋಸ್ಟರ್, ಹಾಡುಗಳು, ದೊಡ್ಡ ತಾರಾಗಣದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಕ್ರೈಂ-ಥ್ರಿಲ್ಲರ್ “ಒಪ್ಪಂ’ ಚಿತ್ರದ ಕನ್ನಡ ಅವತರಣಿಕೆ “ಕವಚ’ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೇ ಡಿಸೆಂಬರ್ ಅಂತ್ಯದೊಳಗೆ ತೆರೆ ಬೀಳುವ ಸಾಧ್ಯತೆ ಇದೆ.