Advertisement

ಒಬ್ಬ ವೀರನ ಹರಾಜು, ಗೆಲುವು ಟೂ ಬಿಟ್ಟಾಗ ಏನಾಗುತ್ತೆ?

11:08 AM May 23, 2017 | Harsha Rao |

ಇದೊಂದು ರೋಚಕ ಕತೆ. ಬಾಹುಬಲಿಯಂತೆ ನೀಳಬಾಹುವಿನ ಕಲಿವೀರ ಈ ಕತೆಯ ನಾಯಕ. ಮಹಾನ್‌ ಆಶಾವಾದಿ, ಹದ್ದಿನ ಕಣ್ಣಿನವ, ಸಿಕ್ಕಾಪಟ್ಟೆ ಗೌರವ ಹೊಂದಿದವ… ಎಲ್ಲವೂ ಸರಿ. ಆದರೆ, ಅದೊಂದು ದಿನ ಅವನನ್ನು ಲೋಕ ಮಾತಾಡಿಸುವುದೇ ಇಲ್ಲ. ಬಲಿಷ್ಠ ಬಾಹುವನ್ನು ಪ್ರದರ್ಶಿಸಿ ಆತ ನಡೆದು ಹೋಗುತ್ತಿದ್ದರೂ ಅವನಿಗೆ ಗೌರವ ಸಿಗುವುದಿಲ್ಲ. ಎಲ್ಲಿದ್ದಾನೆ ಈ ಕಲಿವೀರ? ನಮ್ಮ ಕ್ಯಾಂಪಸ್ಸಿನಲ್ಲಿ… ನಮ್ಮ ಆಫೀಸಿನಲ್ಲಿ… ನಮ್ಮ ಸುತ್ತಮುತ್ತ… ನಮ್ಮೊಳಗೆ…? ಹುಡುಕಿರಿ ಪ್ಲೀಸ್‌… 

Advertisement

ಅವನೊಬ್ಬ ಅಪರೂಪದ ಬೇಟೆಗಾರ. ಹದ್ದಿನ ಕಣ್ಣು, ನೀಳ ಬಾಹುಗಳು, ವಿಶಾಲವಾದ ಎದೆ, ದಷ್ಟಪುಷ್ಟವಾದ ಶರೀರ ಅವನದು. ಮಹಾನ್‌ ಆಶಾವಾದಿ. ಅನೇಕ ಸಾಹಸಗಳನ್ನು ಮೆರೆದಿದ್ದ. ಇಷ್ಟೇ ಆಗಿದ್ದಿದ್ದರೆ ಕಲಿವೀರನ ಬಗ್ಗೆ ಇಲ್ಲಿ ಪ್ರಸ್ತಾಪಿಸುವ ಅವಶ್ಯಕತೆಯೇ ಇರಲಿಲ್ಲ. ಅವನ ವಿಶೇಷತೆ ಎಂದರೆ, ಸದಾ ಬೆನ್ನಿಗಂಟಿಕೊಂಡಿರುತ್ತಿದ್ದ ಬತ್ತಳಿಕೆ! ಅವನ ಅರ್ಧದಷ್ಟು ಎತ್ತರವಿದ್ದ ಬತ್ತಳಿಕೆ ಗಾತ್ರದಲ್ಲಿ ದೊಡ್ಡದಿತ್ತು. ಅವನಿಗದು ಹೆಮ್ಮೆಯ, ಗರ್ವದ ಜೀವನ ಸಾರ್ಥಕ್ಯದ ಸಂಕೇತವಾಗಿತ್ತು. ತನ್ನ ಗುರಿ ತಪ್ಪದ ಬಾಣಕ್ಕೆ ಬೆಲೆತೆತ್ತ ಪ್ರಾಣಿ, ವಸ್ತು ಇತ್ಯಾದಿಗಳ ಪಳೆಯುಳಿಕೆಗಳು ಅದರಲ್ಲಿದ್ದವು. ಒಟ್ಟಿನಲ್ಲಿ ಬತ್ತಳಿಕೆ ಎಂಬುದು ಕಲಿವೀರನ ಜೀವಮಾನ ಸಾಧನೆಯ ಜೀವಂತ ಅಸ್ತಿತ್ವ!

ಬತ್ತಳಿಕೆಯ ಬಗ್ಗೆ ತೃಪ್ತಭಾವ ಬಲಿತು, ಬೇಟೆ ನಿಲ್ಲಿಸಿದ ಕಲಿವೀರ ಅದರಲ್ಲಿದ್ದ ವಸ್ತುಗಳನ್ನು ತನ್ನೂರಿನ ಜನರಿಗೆ ಪರಿಚಯಿಸುತ್ತಾ ಭಯ, ಮರ್ಯಾದೆ, ಗೌರವಗಳನ್ನು ಸಂಪಾದಿಸುತ್ತಿದ್ದ. ಜನರೂ ಅಷ್ಟೇ… ಪರಮವೀರ ಮತ್ತು ಅವನ ಬತ್ತಳಿಕೆಯನ್ನು ಅದ್ಭುತವೆಂಬಂತೆ ಕಾಣುತ್ತಿದ್ದರು. ಜನರ ಈ ಪ್ರಶಂಸಾಭಾವವು ಕಲಿವೀರನನ್ನು ಮುಗಿಲಿನೆತ್ತರಕ್ಕೆ ಹಾರಾಡಿಸುತ್ತಿದ್ದವು. ಆದರೆ, ಇವೆಲ್ಲಾ ಬೆರಳೆಣಿಕೆಯ ದಿನಗಳಷ್ಟೇ… ಕಾಲಕ್ರಮೇಣ ಊರಿನ ಜನರಿಗೆ ಬತ್ತಳಿಕೆಯ ಬಗ್ಗೆ ಇದ್ದ ಕುತೂಹಲ ತಗ್ಗತೊಡಗಿತು.

ಜನರಿಂದ ಕಡೆಗಣಿಸಲ್ಪಟ್ಟ ಕಲಿವೀರನಿಗೆ ಬಹಳ ನಿರಾಸೆಯಾಯಿತು. ಬತ್ತಳಿಕೆಯನ್ನು ಹೊತ್ತು ಬೇರೆ ಊರು ಸೇರಿಕೊಂಡ. ಅಬ್ಟಾ!!! ಮತ್ತೆ ಅವನ ಪಾಲಿನ ದಿನಗಳು ಗೆಜ್ಜೆ ಕಟ್ಟಿಕೊಂಡು ನರ್ತಿಸಿದವು. ಕಲಿವೀರ ಮತ್ತೆ ಗೆಲುವಾದ! ಜನರ ಕಣ್ಣಲ್ಲಿ ದೊಡ್ಡವನಾದ… ಅದೂ ಒಂದೇ ದಿನದಲ್ಲಿ! ಅವನ ಮನದ ಮುಂದೆ ಸಂತೋಷ ರಾಶಿ ಹಾಕಿದಂತೆ ಬಿದ್ದಿತ್ತು. ಆದರೆ, ಅಂಥ ರಾಶಿಯನ್ನು ತಿಂದು ಹಾಕಲು ಕಾಲಕ್ಕೆ ಹೆಚ್ಚು ದಿನ ಬೇಕಾಗಿರಲಿಲ್ಲ. ಮತ್ತೆ ಕಲಿವೀರನ ಮನ ಆನೆ ಹೊಕ್ಕ ಹೊಂಡ! 

ಇಷ್ಟಕ್ಕೂ ಸೋಲು ಒಪ್ಪಿಕೊಳ್ಳದ ಕಲೀವೀರ ಮತ್ತೆ ಹೊಸದೊಂದು ಊರಿನ ಬೇಟೆಗೆ ಹೊರಟ. ಹೆಗಲಲ್ಲಿ ಮತ್ತದೇ ಬತ್ತಳಿಕೆ! ರಾತ್ರೋರಾತ್ರಿ ಊರು ಬಿಟ್ಟು ನಡೆದ ಕಲಿವೀರ ಇನ್ನೇನು ಮತ್ತೂಂದು ಊರು ತಲುಪಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೂಡಣದ ಮಲ್ಲಿಗೆ ಹಾಗತಾನೆ ಮೆಲ್ಲಗೆ ಪಕ್ಕಳೆ ಬಿಚ್ಚಿ ಎಳೆ ಬಿಸಿಲು ಚೆಲ್ಲುತ್ತಿತ್ತು. ಆ ಸುಂದರ, ಹಸಿರು ಪರಿಸರದ ನಡುವೆ ಶೇÌತಧಾರಿ ಗುರುವೊಬ್ಬರು ಮರವೊಂದರ ಕೆಳಗೆ ಕುಳಿತಿರುವುದು ಕಂಡ ಕಲಿವೀರ ಅವರೆಡೆಗೆ ನಡೆದ. ಹತ್ತಿರ ಧಾವಿಸಿದ ಕಲಿವೀರನನ್ನು ಕಂಡು ಗುರು ಮುಗುಳ್ನಕ್ಕರು. ಅಷ್ಟರಿಂದಲೇ ಸಂತೃಪ್ತನಾಗಿ ಗುರುವಿನ ಮಾರು ದೂರದ ಅಂತರದಲ್ಲಿ ಕುಳಿತ.

Advertisement

ಕಾದ. ಗುರು ಕಣ್ಣುಮುಚ್ಚಿಕೊಂಡರು. ಅವನಿಗೋ ತನ್ನ ಬತ್ತಳಿಕೆಯ ಬಗ್ಗೆ ಅವರಲ್ಲಿ ಹೇಳಿಕೊಳ್ಳುವ ತವಕ. ಆದರೆ, ಗುರು ಕಣ್ತೆರೆಯಲಿಲ್ಲ. ಹಿಡಿದ ಹಠ ಬಿಡದವನಂತೆ ಕಾದು ಕುಳಿತ. ನಡೆದು ಆಯಾಸಗೊಂಡಿದ್ದ ದೇಹವನ್ನು ಎಳೆ ಗಾಳಿ ಸುಳಿದು ಸಂತೈಸತೊಡಗಿತು. ಹಾಗೆಯೇ ನೆಲಕ್ಕೊರಗಿ ನಿದ್ದೆಗೆ ಜಾರಿದ! 

ಕಲಿವೀರ ಕಣ್ಣು ಬಿಟ್ಟಾಗ ಸೂರ್ಯ ನಡು ನೆತ್ತಿಯಲ್ಲಿದ್ದ. ತಡಬಡಿಸುತ್ತ ಎದ್ದು ಕುಳಿತವನ ಕಣ್ಣಿಗೆ ಗುರು ಕಾಣಿಸಲಿಲ್ಲ. ಜೊತೆಗೆ ಅವನ ಬತ್ತಳಿಕೆಯೂ…!

ಚಡಪಡಿಸಿದ… ಹಲುಬಿದ… ಆಘಾತಕ್ಕೊಳಗಾದ… ಆದರೇನೂ ಮಾಡುವಂತಿರಲಿಲ್ಲ.
ಸುಮಾರು ಹೊತ್ತು ಕಳೆಯಿತು. ಹೊಟ್ಟೆ ಚುರುಗುಟ್ಟತೊಡಗಿತು. ತಲೆಯೆತ್ತಿದ. ಕಣ್ಣಳತೆಯ ದೂರದಲ್ಲಿಯೇ ಊರೊಂದು ಕಂಡಿತು. ಥಟ್ಟನೆ ಎದ್ದು ಹೆಜ್ಜೆ ಮುಂದಿಟ್ಟ. ಅದು ಅವನು ಅದೆಷ್ಟೋ ವರ್ಷಗಳ ನಂತರ ಬತ್ತಳಿಕೆಯಿಲ್ಲದೆ ಇಟ್ಟ ಮೊದಲ ಹೆಜ್ಜೆ ಆಗಿತ್ತು! ಮಿಂಚಿನ ವೇಗದಲ್ಲಿ ಊರು ಸೇರಿಕೊಂಡ ಕಲಿವೀರ, ತಾನು ಅದ್ಭುತ ಬೇಟೆಗಾರನೆಂದು ಹೇಳಿಕೊಂಡು ಅನ್ನ, ನೀರು ಬೇಡಿದ. ಜನ ನಕ್ಕರು. ಆ ವ್ಯಂಗ್ಯ ನಗು, ಅವನ ಅಭಿಮಾನದ ಗೋಡೆಯನ್ನೊಡೆದು ಪಾತಾಳಕ್ಕಿಳಿಸಿತು. ಸೋಲೊಪ್ಪಿಕೊಳ್ಳದ ಕಲಿವೀರ ತನ್ನ ಮಾಂತ್ರಿಕ ಬಿಲ್ವಿದ್ಯೆಯನ್ನು ನಿಂತಲ್ಲಿಯೇ ಪ್ರದರ್ಶಿಸುವುದಾಗಿ ಸವಾಲು ಹಾಕಿದ. ಹುಚ್ಚನನ್ನು ನೋಡುವವರಂತೆ ಅವನ ಸುತ್ತ ಜನ ನೆರೆದರು. ಅದೇನೋ, ತೋರಿಸು ನಿನ್ನ ಶೌರ್ಯ ಎಂಬಂತಿತ್ತು ಅವರ ನೋಟ. ಕಲಿವೀರನಿಗೆ ಆಗ ಅರಿವಾದ ಸತ್ಯ ತನ್ನ ಕೈಯಲ್ಲಿ ಬಿಲ್ಲು ಇಲ್ಲ ಎಂಬುದು! ಅಷ್ಟಕ್ಕೆ ಕುಗ್ಗದ ಕಲಿವೀರ, ಸುತ್ತಾ ಕಣ್ಣು ಹಾಯಿಸಿದ. ಮರವೊಂದು ಕಣ್ಣಿಗೆ ಬಿತ್ತು. 

ಸರಸರನೆ ಮರವೇರತೊಡಗಿದ. ಅಭ್ಯಾಸ ತಪ್ಪಿ ಹೋಗಿದ್ದರಿಂದ ಅಲ್ಲಲ್ಲಿ ಜಾರಿದ. ಸಾವರಿಸಿಕೊಂಡು ಮರವನ್ನು ಹತ್ತಿ, ರೆಂಬೆ ಮುರಿಯಲು ಹೋದವನು ರೆಂಬೆ ಸಮೇತ ಕೆಳಕ್ಕೆ ಬಿದ್ದ. ರೆಂಬೆಯನ್ನು ಬಿಲ್ಲನ್ನಾಗಿ ಮಾಡುವುದು ಅವನ ಉದ್ದೇಶವಾಗಿತ್ತು.

ಜನ ಚಪ್ಪಾಳೆ ಹೊಡೆದುಕೊಂಡು ನಗತೊಡಗಿದರು. ಅವಮಾನದಿಂದ ಹಿಡಿಯಷ್ಟಾಗಿ ಹೋಗಿದ್ದ ಕಲಿವೀರ ತಲೆಎತ್ತಿ ನೋಡಿದ. ಎದುರಿಗೆ ಗುರುಗಳು! ಅವರ ಮುಖದಲ್ಲಿ ಅದೇ ಮುಗುಳ್ನಗೆ ಅವರ ಒಂದು ಕೈಯಲ್ಲಿ ಬಿಲ್ಲು! ಮತ್ತೂಂದರಲ್ಲಿ ಬುಟ್ಟಿಯಂಥ ಬತ್ತಳಿಕೆ!

ಧಿಗ್ಗನೆದ್ದು ನಿಂತ ಕಲಿವೀರ, ಇಷ್ಟು ವರುಷ ತಾನು ಹೊತ್ತು ತಿರುಗುತ್ತಿದ್ದ ಬತ್ತಳಿಕೆ ಕಂಡು ಅಸಹ್ಯ ಪಟ್ಟುಕೊಂಡ! 
ಕಲಿವೀರ ಬಿಲ್ಲು ಹಿಡಿದ!!
ಚಪ್ಪಾಳೆ ಮಳೆ ಸುರಿಯಿತು!!!
ಕಲಿವೀರ ಬಯಸಿದ್ದು ಕಾಲಡಿಗೆ ಬಂದಿತ್ತು!!!! 
ಜನರ ಹೆಗಲ ಮೇಲೇರಿ ಮೆರೆಯುತ್ತಿದ್ದ ಕಲಿವೀರ ಆ ಅಪಾರ ಜನಸಂದಣಿಯಲ್ಲಿ ಗುರುವನ್ನು ಹುಡುಕತೊಡಗಿದ. 
ಗುರು ಅವನ ಬತ್ತಳಿಕೆಯೊಂದಿಗೆ ಕಾಣೆಯಾಗಿದ್ದರು!

– ವಿದ್ಯಾ ಅರಮನೆ 

Advertisement

Udayavani is now on Telegram. Click here to join our channel and stay updated with the latest news.

Next