ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ)ವು ಜ. 27ರಿಂದ 31ರ ವರೆಗೆ ಜರಗಲಿದೆ. ಜ. 20ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಾರ್ಷಿಕ ಮಹೋತ್ಸವದಲ್ಲಿ 35 ದಿವ್ಯ ಬಲಿಪೂಜೆಗಳು ಕೊಂಕಣಿಯಲ್ಲಿ,11 ಕನ್ನಡದಲ್ಲಿ ನಡೆಯಲಿವೆ. ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಬಲಿಪೂಜೆ ನೆರವೇರಿಸಲಿದ್ದಾರೆ. ಜ. 28ರಂದು ಪೂರ್ವಾಹ್ನ10ಕ್ಕೆ ಅಸ್ವಸ್ಥರಿಗಾಗಿ ಪೂಜೆ ನಡೆಯಲಿದೆ.
ಮಹೋತ್ಸವಕ್ಕೆ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿವೆ. ಹಣ, ವಸ್ತುರೂಪದ ಹರಕೆ, ಮೋಂಬತ್ತಿ ಹರಕೆ ಸಲ್ಲಿಸಲು ಚರ್ಚ್‌ನ ಎಡಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 5 ಕಡೆಗಳಲ್ಲಿ ಕುಡಿಯುವ ನೀರು, 60 ಶೌಚಾಲಯ, ವಿವಿಧ ಭಾಗಗಳಿಂದ ಆಗಮಿಸುವವರಿಗೆ ಅಲ್ಲಲ್ಲಿ ಪಾರ್ಕಿಂಗ್, ಪಾಸ್ ಹೊಂದಿದವರಿಗೆ ಪರ್ಪಲೆಗುಡ್ಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಂಗಡಿ, ಸ್ಟಾಲ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ ಎಂದರು.
ಭಕ್ತರ ಸುರಕ್ಷೆಗೆ ಆದ್ಯತೆ: ಭಕ್ತರ ಸುರಕ್ಷೆ ನಿಟ್ಟಿನಲ್ಲಿ ಹಳೆಯ ಹಾಗೂ ಹೊಸ ಇಗರ್ಜಿಗಳ ಒಳಗಡೆ, ಬಸಿಲಿಕಾದ ವಠಾರದಲ್ಲಿ 64 ಸಿಸಿ ಕೆಮರಾ ಅಳವಡಿಸಲಾಗಿದೆ. ಅಂಗಡಿ ಮುಂಗಟ್ಟುಗಳ ಪರಿಸರದಲ್ಲಿ ಕೆಮರಾ ಅಳವಡಿಸಲು ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಚರ್ಚ್‌ನ ಸಹಾಯಕ ನಿರ್ದೇಶಕ ಫಾ| ಜೆನ್ಸಿಲ್ ಆಳ್ವ, ಚರ್ಚ್‌ನ 18 ಆಯೋಗದ ಅಧ್ಯಕ್ಷ ರಿಚರ್ಡ್ ಪಿಂಟೊ, ಜಾನ್ ಡಿ’ಸೋಜಾ, ಸಂತೋಷ್ ಡಿ’ಸೋಜಾ, ಲೀನಾ ಡಿ’ಸಿಲ್ವಾ ಉಪಸ್ಥಿತರಿದ್ದರು.
ಭಿಕ್ಷಾಟನೆಗಿಲ್ಲ ಅವಕಾಶ
ವಾರ್ಷಿಕ ಮಹೋತ್ಸವದ ಸಂದರ್ಭ ನಡೆಯುವ ಭಿಕ್ಷಾಟನೆಯನ್ನು ಈ ವರ್ಷ ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಹಬ್ಬದ ಶುಕ್ರವಾರ ಭಿಕ್ಷುಕರಿಗೆ ನೀಡುತ್ತಿದ್ದ ಹಣ ವಿತರಣೆಯನ್ನು ನಿಷೇಧಿಸಲಾಗಿದ್ದು, ಜಾತ್ರೆಯಲ್ಲಿ ಭಿಕ್ಷುಕರು ಕಂಡುಬಂದರೆ ನಿರಾಶ್ರಿತ ಕೇಂದ್ರಗಳಿಗೆ ಬಿಡಲಾಗುವುದು ಎಂದು ಫಾ| ಜಾರ್ಜ್ ಡಿ’ಸೋಜಾ ತಿಳಿಸಿದರು.