Advertisement

ಗ್ರಂಥಾಲಯಕ್ಕೆ ಓದುಗರನ್ನು ಆಕರ್ಷಿಸಿ: ಸುರಳ್ಕರ್‌

03:09 PM May 06, 2022 | Team Udayavani |

ಕೊಪ್ಪಳ: ಗ್ರಾಪಂ ಗ್ರಂಥಾಲಯಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದ್ದು, ಗ್ರಂಥಾಲಯ ಮೇಲ್ವಿಚಾರಕರು ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಓದುಗರನ್ನು ಆಕರ್ಷಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ನಡೆದ ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ಕರಿಯರ್‌ ಗೈಡೆನ್ಸ್‌ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಂದ ವೃದ್ಧರವರೆಗೂ ಗ್ರಂಥಾಲಯಕ್ಕೆ ಬಂದು ಓದುವಂತೆ ಗ್ರಾಪಂ ಗ್ರಂಥಾಲಯಗಳು ಕಾರ್ಯನಿರ್ವಹಿಸಬೇಕು. ಪುಸ್ತಕಗಳು, ಮೂಲಭೂತ ಸೌಕರ್ಯ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮುಂತಾದ ಸೌಲಭ್ಯಗಳನ್ನು ನೀಡುವ ಜೊತೆಗೆ ಗ್ರಂಥಾಲಯ ಮೇಲ್ವಿಚಾರಕರಿಗೆ ಅಗತ್ಯ ತರಬೇತಿ ನೀಡಲಾಗಿದೆ.

ಇದೆಲ್ಲವನ್ನೂ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಗ್ರಂಥಾಲಯಕ್ಕೆ ಆಗಮಿಸುವಂತೆ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಬೇಕು. ಗ್ರಂಥಾಲಯಕ್ಕೆ ಬರುವ ಚಿಕ್ಕಮಕ್ಕಳಿಗೆ ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಪೋಸ್ಟರ್‌ ಅಳವಡಿಸಿ, ಗ್ರಾಮೀಣರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಮೇಲ್ವಿಚಾರಕರು ತಮ್ಮ ಕರ್ತವ್ಯದ ವೇಳೆ ವೈಯಕ್ತಿಕ ಸಮಯ ಸದ್ಭಳಕೆ ಮಾಡಿಕೊಳ್ಳಬಹುದು. ಹೆಚ್ಚಿನ ಜ್ಞಾನಾರ್ಜನೆಗೆ ಅಥವಾ ಪುಸ್ತಕಗಳನ್ನು ವಿಮಶಾìತ್ಮಕವಾಗಿ ಓದಿ, ಆ ವಿಮರ್ಶೆಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಹತ್ತನೇ ತರಗತಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಪೂರಕವಾಗುವ ವಿಷಯ, ಮಾಹಿತಿಯನ್ನು ಕೂಡ ಆನ್‌ಲೈನ್‌ ಮೂಲಕ ನೀಡಬಹುದು. ಇದರಿಂದ ಮೇಲ್ವಿಚಾರಕರು ಆದಾಯ ಕೂಡ ಪಡೆಯಬಹುದು ಎಂದರು.

Advertisement

ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ತಾಪಂ ಹಾಗೂ ಗ್ರಾಪಂನ ಅನುದಾನದಲ್ಲಿ ಗ್ರಂಥಾಲಯ ಅಭಿವೃದ್ಧಿಗೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಅಗತ್ಯ ಅನುದಾನ ನೀಡಲಾಗಿದ್ದು, ಬಹುತೇಕ ಜಿಲ್ಲೆಯ ಎಲ್ಲ ಗ್ರಾಪಂ ಗ್ರಂಥಾಲಯ ಎಲ್ಲ ಮೂಲಭೂತ ಸೌಕರ್ಯ ಹೊಂದಿವೆ. ಆದರೂ ಗ್ರಾಮೀಣರ ಬೇಡಿಕೆಗೆ ತಕ್ಕಂತೆ ಸಂಪನ್ಮೂಲಗಳ ಸೀಮಿತ ಲಭ್ಯತೆ ಆಧಾರದಲ್ಲಿ ಗ್ರಂಥಾಲಯದಲ್ಲಿ ಸೌಲಭ್ಯ ಅಳವಡಿಸುವುದು ಗ್ರಂಥಾಲಯ ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಗ್ರಂಥಾಲಯಕ್ಕೆ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸುವವರು, ಹವ್ಯಾಸಿ ಓದುಗರು ಮುಂತಾದ ವರ್ಗದ ಓದುಗರು ಆಗಮಿಸುತ್ತಾರೆ. ಓದುಗರ ಅಗತ್ಯಕ್ಕೆ ತಕ್ಕಂತೆ ಪುಸ್ತಕಗಳನ್ನು ಒದಗಿಸುವುದು, ಪೂರಕ ವಾತಾವರಣ ಸೃಷ್ಟಿಸುವುದು ಮೇಲ್ವಿಚಾರಕರ ಕರ್ತವ್ಯ. ಸರ್ಕಾರಿ ಸೌಲಭ್ಯಗಳೊಂದಿಗೆ ವೈಯಕ್ತಿಕ ಹಿತಾಸಕ್ತಿಯಿಂದ ಗ್ರಂಥಾಲಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮೇಲ್ವಿಚಾರಕರು ಮಾಡಬೇಕು ಎಂದರು.

ಜಿಲ್ಲೆಯ ಒಂದು ಗ್ರಾಪಂ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆದಿದ್ದು, ಅದಕ್ಕೆ ಸಿಗುವ ಸ್ಪಂದನೆ ಆಧಾರದಲ್ಲಿ ಇತರೆ ಗ್ರಾಪಂ ಗ್ರಂಥಾಲಯಗಳಲ್ಲಿ ಹಂತ ಹಂತವಾಗಿ ಡಿಜಿಟಲೀಕರಣ ವ್ಯವಸ್ಥೆ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಎಲ್ಲ ಪೂರಕ ಜ್ಞಾನದ ಪುಸ್ತಕಗಳನ್ನು ಒದಗಿಸುವ ಮೂಲಕ ಗ್ರಂಥಾಲಯವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡಬಹುದು ಎಂದರು.

ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್‌ನ ಸುಚಿತ್ರಾರಾವ್‌ ಪ್ರಾಸ್ತಾವಿಕ ಮಾತನಾಡಿದರು. ಐಎಲ್‌ಪಿಯ ಹರೀಶ ಮಾತನಾಡಿ, ಯುನಿಸೆಫ್‌-ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್‌ ಹಾಗೂ ವ್ಯವಸ್ಥಾಪಕ ಹರೀಶ್‌ ಜೋಗಿ ಅವರು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಆಯ್ದ 30 ಗ್ರಾಪಂ ಗ್ರಂಥಾಲಯಗಳಿಗೆ ಶಿಕ್ಷಣ ಫೌಂಡೇಶನ್‌ನಿಂದ ಡಿಜಿಟಲ್‌ ಉಪಕರಣ ಹಾಗೂ ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ನಿಂದ ಕೆರಿಯರ್‌ ಗೈಡನ್ಸ್‌ ಕಿಟ್‌ನ್ನು ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಸಿ ಹಾಗೂ ಜಿಪಂ ಸಿಇಒ ವಿತರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ವಿಠ್ಠಲ್‌ ಚೌಗಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next