ಚಂದಾಪುರ: ಅತ್ತಿಬೆಲೆಯ ಪಟಾಕಿ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕದ ಮಟ್ಟಿಗೆ ಶನಿವಾರ ಕರಾಳ ದಿನವಾಗಿತ್ತು. ಶಿವಮೊಗ್ಗ, ಹಾವೇರಿ ಜಿಲ್ಲೆಯಲ್ಲಿ ಪಟಾಕಿ ಅವಘಡ ಸಂಭವಿಸಿದರೂ ಇಷ್ಟೊಂದು ಸಾವು ನೋವು ಆಗಿರಲಿಲ್ಲ. ಈ ದುರಂತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ, ಮಾಲೀಕರ ನಿರ್ಲಕ್ಷ್ಯ ಕಾರಣವಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಕಿ ಆರಿದರೂ ಹೊಗೆ ಇನ್ನೂ ಹಾರಾಡುತ್ತಲೇ ಇದೆ. ಬುಧವಾರ ಮಧ್ಯಾಹ್ನ 3ರಿಂದಲೂ 8 ಅಗ್ನಿಶಾಮಕ ಯಂತ್ರಗಳು, 30 ಟ್ಯಾಂಕರ್ ನೀರು ಬಳಸಿ ಬೆಂಕಿ ನಂದಿಸಿದರೂ ಪಟಾಕಿಗೆ ಅಂಟಿರುವ ಬೆಂಕಿ ಇನ್ನೂ ಆರಿಲ್ಲ. ಅದರ ರಾಸಾಯನಿಕ ಮದ್ದು ಹಾವು ವಿಷ ಕಾರಿದಂತೆ ಒಳಗೊಳಗೆ ಹೊಗೆಯನ್ನು ಆಡಿಸುತ್ತಿದೆ.
ಪ್ಯಾಕಿಂಗ್ ಮಾಡುತ್ತಿದ್ದ ಮಹಿಳೆಯರು ಪರಾರಿ: ಶನಿವಾರ ಅಂಗಡಿ ಮುಂಭಾಗದಲ್ಲಿ ಬೆಂಕಿ ಹೊತ್ತಿರುವುದನ್ನು ಕಂಡ ತಕ್ಷಣ ಶೆಡ್ಡಿನ ಒಳಗಡೆ, ಹಿಂಬದಿಯಲ್ಲಿ ಪ್ಯಾಕಿಂಗ್ ಮಾಡುತ್ತಿದ್ದ ನಾಲ್ವರು ಮಹಿಳೆಯರು ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ. ತಲಾ ಮೂರು ಲಕ್ಷ ರೂ. ಪರಿಹಾರ: ತಮಿಳುನಾಡಿನ ಮಂತ್ರಿಗಳಾದ ಚಂದ್ರಪಾಣಿ, ಮಹಾಸುಬ್ರಮಣಿ ಸರ್ಕಾರ ಘೋಷಿಸಿದಂತೆ ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ. ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು. ಶವ ಸಂಸ್ಕಾರಕ್ಕೆ ನೆರವು: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂಸದ ಚೆಲುವರಾಜು, ಹೊಸೂರು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಶವ ಸಂಸ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಏಳು ಜನ ವಿದ್ಯಾರ್ಥಿಗಳು ಸುಟ್ಟು ಬೂದಿಯಾದ್ರು: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಆಲೂರು ಗ್ರಾಮದ ಒಂದೇ ಊರಿನವರಾದ ಏಳು ಪಿಯು ವಿದ್ಯಾರ್ಥಿಗಳು ದಸರಾ ರಜೆಯ ನಿಮಿತ್ತ ಪಟಾಕಿ ಅಂಗಡಿಗಳಲ್ಲಿ ಕೆಲಸ ಮಾಡುವುದಕ್ಕಾಗಿ ಬಂದಿದ್ದರು. ಈ ವಿದ್ಯಾರ್ಥಿಗಳ ತಂಡವು ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್‌ನಲ್ಲಿ 15 ದಿನಗಳಿಂದಲೂ ಕೆಲಸ ಮಾಡುತ್ತಿದ್ದರು. ಗೋದಾಮಿನ ಒಳಗಡೆ ಒಂದೇ ಕಡೆ ಸೇರಿಕೊಂಡು ಪ್ಯಾಕಿಂಗ್ ಮಾಡುತ್ತಿದ್ದರು. ಪಟಾಕಿಗೆ ಬೆಂಕಿ ಅಂಟಿಕೊಂಡ ತಕ್ಷಣ ಹೊರಗೆ ಬರಲು ಆಗದೆ ಮೃತಪಟ್ಟಿದ್ದಾರೆ. ಶೆಡ್‌ನ ಒಳಗೆ ಒಂದೇ ಒಂದು ಬಾಗಿಲು: ಪಟಾಕಿ ಗೋಡೌನ್ ಒಳಗಡೆ ಬಹಳ ಇಕ್ಕಟ್ಟಿನ ಪರಿಸ್ಥಿತಿ ಇತ್ತು. ಈ ಅವಘಡ ಸಂಭವಿಸಿದಾಗ ತಪ್ಪಿಸಿಕೊಂಡು ಹೋಗಲು ಕೇವಲ ಹಿಂಬದಿಯಲ್ಲಿ ಒಂದೇ ಒಂದು ಬಾಗಿಲು ಇದ್ದ ಪರಿಣಾಮ, ಆ ಬಾಗಿಲು ಅಡ್ಡಲಾಗಿ ಪಟಾಕಿ ಬಾಕ್ಸ್ ಗಳು ಇದ್ದವು. ಆದರೆ, ಅವಘಡದಿಂದ ತಪ್ಪಿಸಿಕೊಳ್ಳಲು ಹೋಗಲು ಸಾಧ್ಯವಾಗದೆ ಅಲ್ಲಲ್ಲೇ ಬಿದ್ದು ಪಟಾಕಿಯ ಬೆಂಕಿಗೆ ತುತ್ತಾಗಬೇಕಾಯಿತು.
ಮದುವೆ ಆಗಿ ತಿಂಗಳಾಗಿತ್ತು: ಮೃತರ ಪೈಕಿಯಲ್ಲಿ ಕೆಲಸಕ್ಕೆ ಬಂದಿದ್ದ ಯುವಕರೊಬ್ಬ ಮದುವೆಯಾಗಿ ಒಂದು ತಿಂಗಳಾಗಿತ್ತು. ಸಂಸಾರದ ಕಷ್ಟಕ್ಕೆ ನೆರವಾಗಲೆಂದು ಹೆಂಡತಿಯನ್ನು ತವರಿಗೆ ಕಳುಹಿಸಿ ದುಡಿಯಲು ಪಟಾಕಿ ಅಂಗಡಿಯಲ್ಲಿ ಕೆಲಸಕ್ಕೆ ಬಂದಿದ್ದರು. ಆದರೆ, ವಿಧಿ ಅವರನ್ನು ಇಹಲೋಕಕ್ಕೆ ಕರೆದೊಯ್ಯಿತು. ವರ್ಷದ ಮಗು ಬಿಟ್ಟು ಹೊರಟ ವಸಂತರಾಜ್: ಮೃತರ ಪೈಕಿ ವಸಂತರಾಜ್ ಎಂಬವರು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಒಂದು ಮಗು ಇತ್ತು. ಸಂಸಾರವನ್ನು ಬಿಟ್ಟು ದುಡಿಯಲೆಂದು ಶಿವಕಾಶಿ ಪಟಾಕಿಯ ಮಾಲೀಕರೊಂದಿಗೆ ಅತ್ತಿಬೆಲೆಗೆ ಬಂದಿದ್ದರು. ಆದರೆ, ಇವರು ದುಡಿದುಕೊಂಡು ಮನೆಗೆ ಹೋಗುವ ಮುನ್ನವೇ ಇಹಲೋಕ ತ್ಯಜಿಸಿದರು.
ಪತಿ ಸಾವನ್ನು ಕಂಡು ಪತ್ನಿ ಬಿದ್ದು ಹೊರಳಾಡಿ, ಕಣ್ಣೀರು ಹಾಕಿದರು. ಮೃತಪಟ್ಟ 14 ಮಂದಿಯ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದಂತೆ, ಅವರುಗಳಿಗೆ ಹಸ್ತಾಂತರಿ ಲಾಗಿದೆ ಎಂದು ಐಜಿಪಿ ರವಿಕಾಂತ್ ಗೌಡ ತಿಳಿಸಿದರು.
ಇನ್ನೂ ನಾಲ್ಕೈದು ಗೋಡೌನ್ ಇವೆ: ಘಟನೆ ನಡೆದ ಗೋಡೌನ್ ಇದ್ದ ಸಾಲಿನಲ್ಲೇ ಇನ್ನೂ ನಾಲ್ಕೈದು ಗೋಡೌನ್‌ಗಳು ಇವೆ ಎನ್ನಲಾಗಿದೆ. ಅವುಗಳನ್ನು ಅಧಿಕಾರಿಗಳು ಮರೆಮಾಚಿ, ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಈ ಪಟಾಕಿಯ ದುರಂತ ನಡೆದ ದಾಸ್ತಾನು ಅಂಗಡಿ ಸಾಲಿನಲ್ಲಿ ಇನ್ನೂ ಐದಾರು ಪಟಾಕಿ ಗೋಡೌನ್‌ಗಳು ಇವೆ ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರೇ ಮಾತನಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಅಧಿಕಾರಿಗಳು ಮೌನವಹಿಸಿ, ಮರೆಮಾಚಿ, ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಸ್ಥಳೀಯರ ದೂರಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತವು ಗಮನಹರಿಸಿ, ಅವುಗಳನ್ನು ತೆರವುಗೊಳಿಸಿ ಇಂತಹ ಅವಘಡಗಳು ಮುಂದೆ ನಡೆಯದಂತೆ ಕ್ರಮಕೈಗೊಳ್ಳಬೇಕಾಗಿದೆ.
– ಮಹೇಶ್ ಊಗಿನಹಳ್ಳಿ