Advertisement

ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಿ: ಶಾಸಕ ಓಲೇಕಾರ

05:20 PM Aug 06, 2018 | Team Udayavani |

ಹಾವೇರಿ: ‘ಬೆಳೆಯುವ ಪೈರನ್ನು ಮೊಳಕೆಯಲ್ಲಿ ನೋಡು’ ಎಂಬಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾಹಿತಿಯನ್ನು ಶಾಲಾ ಹಂತದಲ್ಲಿಯೇ ಮಾರ್ಗದರ್ಶನ ನೀಡಿ ಅವರ ವ್ಯಕ್ತಿತ್ವ ವಿಕಾಸದ ಕಡೆ ಗಮನ ಹರಿಸಬೇಕು ಎಂದು ಶಾಸಕ ನೆಹರು ಓಲೇಕಾರ ಅಭಿಪ್ರಾಯಿಸಿದರು. ನಗರದ ಹೊಸಮಠದ ಸಮುದಾಯ ಭವನದಲ್ಲಿ ನಡೆದ ಎಸ್‌.ಜೆ.ಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಾನ್ನಿಧ್ಯ ವಹಿಸಿದ್ದ ಬಸವಶಾಂತಲಿಂಗ ಸ್ವಾಮೀಜಿ, ವಿದ್ಯಾರ್ಥಿಗಳು ಪ್ರಕೃತಿಯಲ್ಲಿ ಗಿಡ-ಮರಗಳು ಬೆಳೆದು ಹೇಗೆ ಉಪಯುಕ್ತವಾಗುತ್ತವೆಯೋ ಹಾಗೆ ತಮ್ಮ ಬದುಕನ್ನು ರೂಪಿಸಿಕೊಂಡು ಸಮಾಜಕ್ಕೆ ಉಪಯೋಗಕಾರಿಯಾಗಬೇಕು. ಸಾಧನೆಗೆ ವಯೋಮಿತಿಯಿಲ್ಲ. ಸಮಾಜ ಸುಧಾಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿ, ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ವೀರಭದ್ರಪ್ಪ, ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಇಂದು ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಗಳು ಆಗುತ್ತಿವೆ. ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಜ್ಞಾನ ವೃದ್ಧಿಸುವಲ್ಲಿ ಪ್ರಯತ್ನಿಸಬೇಕು ಎಂದರು.

ಇನ್ನೋರ್ವ ಅತಿಥಿ ರಾಣಿಬೆನ್ನೂರಿನ ಉನ್ನತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ | ಬಿ.ಬಿ. ನಂದ್ಯಾಲ, ತಾಯಿಯ ಪ್ರೀತಿ, ತಂದೆಯ ರಕ್ಷಣೆ ಹಾಗೂ ಶಿಕ್ಷಕರ ಮಾರ್ಗದರ್ಶನ ಇವು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಭೂಮಿ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬ ಮನುಷ್ಯ ಸಂಸ್ಕಾರ ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿ ಸಬೇಕು ಎಂದರು.

ಸಮಾರಂಭದಲ್ಲಿ 2018-19ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌. ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬರೇಗಾರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್‌.ಬಿ. ಸಂಗಾಪೂರ, ಉಪನ್ಯಾಸಕರು ಇದ್ದರು. ವಿ.ಎನ್‌. ಆಲದಕಟ್ಟಿ ನಿರ್ವಹಿಸಿದರು. ರೇಖಾ ನಿಂಬಕ್ಕನವರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next