ವಾಡಿ: ಬೌದ್ಧ ಧರ್ಮದ ಇತಿಹಾಸ ತಿಳಿಯುವ ಸಂಶೋಧನೆಗೆ ಪೂರಕವಾಗಿರುವ ಸನ್ನತಿ ತಾಣದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಅಧಿಕಾರಿಗಳ ವರದಿ ಪಡೆದು ದೆಹಲಿಗೆ ನಿಯೋಗ ತೆರಳಿ ಕೇಂದ್ರದ ಗಮನ ಸೆಳೆಯಲಾಗುವುದು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ಸನ್ನತಿ ಪ್ರದೇಶದ ಕನಗನಹಳ್ಳಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಿಶಾಲವಾದ ಬಯಲು ಪ್ರದೇಶದಲ್ಲಿ ಹರಡಿಕೊಂಡಿದ್ದ ಬುದ್ಧನ ಶಿಲಾ ಮೂರ್ತಿಗಳು, ಬುದ್ಧ ವಿಹಾರ, ಶಿಲಾ ಶಾಸನ, ಬುದ್ಧನ ಜಾಥಕ ಕಥೆಯುಳ್ಳ ಕಲಾಕೃತಿಗಳನ್ನು ಕಂಡು ಮರುಗಿದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಬೌದ್ಧ ಪ್ರವಾಸಿ ತಾಣವಾಗಿರುವ ಸನ್ನತಿ ಪ್ರದೇಶ ಇಷ್ಟೊತ್ತಿಗೆ ಪ್ರಪಂಚದ ಗಮನ ಸೆಳೆಯಬೇಕಿತ್ತು. ಇಲ್ಲಿನ ವಾಸ್ತವ ಸ್ಥಿತಿಗತಿ ನೋಡಿದರೆ ನೋವಾಗುತ್ತದೆ. ಮೌರ್ಯ ಸಾಮ್ರಾಜ್ಯದ ದೊರೆ, ಬೌದ್ಧ ಅನುಯಾಯಿ ಸಾಮ್ರಾಟ್ ಅಶೋಕ ಚಕ್ರವರ್ತಿ ಕಾಲಘಟ್ಟವನ್ನು ನೆನಪಿಸುವ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಬೌದ್ಧ ಸ್ತೂಪ ನೆಲೆ ಕಲಬುರಗಿಯ ಸನ್ನತಿಯಲ್ಲಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಒಮ್ಮೆಯೂ ಈ ಕುರಿತು ಪ್ರಾಸ್ತಾಪಿಸಿಲ್ಲ. ಖುದ್ದಾಗಿ ಸ್ಥಳ ವೀಕ್ಷಿಸಿದ ನಂತರವೇ ಪ್ರದೇಶದ ಮಹತ್ವ ತಿಳಿಯಿತು ಎಂದರು.
ಬೌದ್ಧರ ಸಾಂಸ್ಕೃತಿಕ ಪರಂಪರೆ ಎತ್ತಿಹಿಡಿಯುವ ಸನ್ನತಿ ಪ್ರಗತಿ ಅತ್ಯವಶ್ಯಕವಾಗಿದೆ. ಎರಡು ಸಾವಿರ ವರ್ಷಗಳಷ್ಟು ಹಳೆಯ ಪಳೆಯುಳಿಕೆಗಳು ಇಲ್ಲಿ ದೊರೆತಿರುವುದು ಹೆಮ್ಮೆಯ ವಿಷಯ. ಇಲ್ಲಿರುವ ಬುದ್ಧನ ಶಿಲಾ ಅವಶೇಷಗಳನ್ನು ಬಿಸಿಲು, ಗಾಳಿಗೆ ಹಾಳಾಗಲು ಬಿಡುವುದಿಲ್ಲ. ಆದಷ್ಟು ಬೇಗ ಪುರಾತತ್ವ ಅಧಿಕಾರಿಗಳೊಂದಿಗೆ ಚರ್ಚಿಸಿ, ಸನ್ನತಿ ಅಭಿವೃದ್ಧಿ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ. ಸನ್ನತಿ ಪ್ರದೇಶದಲ್ಲಿ ಸ್ಥಗಿತವಾಗಿರುವ ಉಖ್ಖನನ ಮುಂದುವರಿಸಿದರೆ ಇನ್ನಷ್ಟು ಮಹತ್ವದ ಕುರುಹುಗಳು ಪತ್ತೆಯಾಗಬಹುದು. ಒಟ್ಟಿನಲ್ಲಿ ಈ ತಾಣದ ಮೇಲೆ ಪ್ರಾಮಾಣಿಕವಾಗಿ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ, ಕೂಡಲೇ ತಾಣದ ಸಮಗ್ರ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.
ಪುರಾತತ್ವ ಇಲಾಖೆ ಹಂಪಿ ವಿಭಾಗದ ಅಧೀಕ್ಷಕ ನಿಖೀಲ್ ದಾಸ್, ಸೇಡಂ ಸಹಾಯಕ ಆಯುಕ್ತೆ ಅಶ್ವಿಜಾ ಡಿ.ವಿ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರ, ವಿಠ್ಠಲ ನಾಯಕ, ನಿವೇದಿತಾ ದಹಿಹಂಡೆ, ಗುರುಲಿಂಗ ಚಂದನ್, ಶಿವರಾಮ ಪವಾರ, ರಮೇಶಗೌಡ ಉಳಂಡಗೇರಾ, ಭೀಮರೆಡ್ಡಿಗೌಡ ಕುರಾಳ, ರವಿ ಕಾರಬಾರಿ, ಅರವಿಂದ ಚವ್ಹಾಣ, ವೀರಣ್ಣ ಯಾರಿ, ರಾಹುಲ್ ಸಿಂಧಗಿ ಮತ್ತಿತರರು ಇದ್ದರು.