ಕೊಟ್ಟೂರು: ಅಲಬೂರು ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವಂತಾಗಲು ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಹೇಳಿದರು. ಅಲಬೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅವರು ಮಾತನಾಡಿದರು. ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮನೆ ಮನೆಗೆ ನೇರ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆರಹರಿಸುವತ್ತ ಮುಂದಾಗಿದ್ದೇವೆ ಎಂದರು.
ಸರ್ಕಾರದ ನಿರ್ದೇಶನದಂತೆ ತಾಲೂಕು ಮಟ್ಟದ ಅಧಿಕಾರಿಗಳು ನಿಗದಿತ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮೀಣ ಸೌಲಭ್ಯಗಳ ಕುರಿತು ಅವಲೋಕನ ಮಾಡಲಾಗುತ್ತದೆ. ಅಲ್ಲದೆ ಇಲಾಖಾ ಮಟ್ಟದಲ್ಲಿ ಬಗೆಹರಿಯುವಂತಹ ಸಮಸ್ಯೆಗಳಿದ್ದಲ್ಲಿ ಸ್ಥಳದಲ್ಲಿಯೇ ಪರಿಹರಿಸಲಾಗುತ್ತದೆ ಎಂದರು. ಗ್ರಾಮದಲ್ಲಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಇತರ ದೇವಾಲಯಗಳಿಗೆ ಭೇಟಿ ನೀಡಿ ದೇವಸ್ಥಾನಗಳ ದುರಸ್ತಿ ಕಾರ್ಯ ಇರುವುದರಿಂದ ಕೂಡಲೇ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಹಣ ಮಂಜೂರು ಮಾಡಲು ತಿಳಿಸುವುದಾಗಿ ಹೇಳಿದರು.
ನಂತರ ಅಲಬೂರು ಗ್ರಾಮಕ್ಕೆ ಪ್ರಮುಖವಾಗಿ ಸ್ಮಶಾನ, ಕೆರೆ ದುರಸ್ತಿ, ಪಶು ಆಸ್ಪತ್ರೆ, ಬ್ಯಾಂಕ್, ಮತ್ತಿತರ ಬಹುಮುಖ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು. ನರೇಗಾ ಯೋಜನೆಯಡಿ ರೈತರಿಗೆ ಕೂಡಲೇ ಕೆರೆ ದುರಸ್ತಿಗೆ ಚಾಲನೆ ನೀಡಲು ಅಧಿಕಾರಿಗಳಿಗೆ ತಿಳಿಸಿದರು. ಈ ಭಾಗದಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಗಳಿಗೆ ಗೋದಾಮುಗಳ ವ್ಯವಸ್ಥೆ ನಂತರ ಕೇಂದ್ರ ತೆರೆಯಲು ಸರ್ಕಾರದ ಅನುಮೋದನೆ ದೊರಕಿದ ಕೂಡಲೇ ಕ್ರಮ ವಹಿಸಲಾಗುವುದು ಎಂದರು. ಸಾಮಾಜಿಕ ಭದ್ರತೆ ಯೋಜನೆ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.
ತಾಲೂಕಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶಿವಾನಂದಪ್ಪ, ಉಪಾಧ್ಯಕ್ಷ ಶಿಲ್ಪಾ ವೀರನಗೌಡ ಮತ್ತು ಸದಸ್ಯರು, ತಹಶೀಲ್ದಾರ ಕುಮಾರಸ್ವಾಮಿ, ಇಒ ವಿಜಯಕುಮಾರ ಬೆಣ್ಣಿ, ಶಿಕ್ಷಣ ಇಲಾಖೆ ಇಸಿಒ ಅಜ್ಜಪ್ಪ, ಆಯುಷ್ ಇಲಾಖೆ ವಿಜಯಕುಮಾರ, ಕೇಶವಮೂರ್ತಿ, ಶ್ರೀಧರ ಜಂಟಿ ನಿರ್ದೇಶಕರು, ಜೆಡಿ ಶರಣಪ್ಪ, ಗಣಿ ಭೂ ಇಲಾಖೆ ಮಹಾವೀರ, ಪಿಂಚಣಿ ಇಲಾಖೆ ಹೊನ್ನೂರಪ್ಪ, ಅವಿನಾಶ ಹಾಗೂ ಗ್ರಾಮಸ್ಥರು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಭರಮಣ್ಣ ಮತ್ತಿತರರು ಉಪಸ್ಥಿತರಿದ್ದರು.