Advertisement

ಸೋಲಿನ ಪರಾಮರ್ಶೆ ನಡೆಸಿ ಜನರನ್ನು ತಲುಪುವ ಪ್ರಯತ್ನ

06:43 AM Jun 10, 2019 | Lakshmi GovindaRaj |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಸಂಬಂಧಪಟ್ಟಂತೆ ಪರಾಮರ್ಶೆ ನಡೆಸುವ ಮೂಲಕ ಮತ್ತೆ ಜನರನ್ನು ತಲುಪುವ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯ ವಕ್ತಾರ ರಮೇಶ್‌ಬಾಬು ಅವರು ಸಂಸದೆ ಸುಮಲತಾ ಅಂಬರೀಶ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸಿದ್ದ ಏಳು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೇ ಪಕ್ಷ ಜಯ ಗಳಿಸಿದ್ದು, ಆರು ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಹಜ. ಗೆಲುವಿಗೆ ಒಂದು ಕಾರಣವಾದರೆ ಸೋಲಿಗೆ ನೂರಾರು ಕಾರಣ. ರಾಜಕೀಯ ಪಕ್ಷವಾಗಿ ಜೆಡಿಎಸ್‌ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋರಾಟವನ್ನೇ ಬದುಕನ್ನಾಗಿ ಸ್ವೀಕರಿಸಿರುವ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ಕಾರ್ಯಕರ್ತರಲ್ಲಿದೆ. ಒಂದು ಕ್ಷೇತ್ರದಲ್ಲಿನ ತಾತ್ಕಾಲಿಕ ಹಿನ್ನಡೆಗೆ ಪರಿತಪಿಸುವ ಅಥವಾ ಹೋರಾಟದಿಂದ ಹಿಂದೆ ಸರಿಯುವ ಜಾಯಮಾನ ನಮ್ಮ ಪಕ್ಷದ್ದೂ ಅಲ್ಲ, ಕಾರ್ಯಕರ್ತರದ್ದೂ ಅಲ್ಲ. ದಾರಿಯಲ್ಲಿ ಎಡವಿದ ಮಾತ್ರಕ್ಕೆ ನಮ್ಮ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಹೇಳಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌ಗೆ ಪುಕ್ಕಟೆ ಸಲಹೆ ನೀಡುವ ಜತೆಗೆ ಜೆಡಿಎಸ್‌ ಪಕ್ಷವನ್ನೂ ಟೀಕಿಸಿದ್ದಾರೆ. ಹಿಂದೆ ಅಂಬರೀಶ್‌ ಅವರು ಎರಡು ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಸುಮಲತಾ ಅವರ ಸಲಹೆ ಪಡೆದಿದ್ದರೆ ಅವರು ಸೋಲುತ್ತಲೇ ಇರಲಿಲ್ಲ. ಸಲಹೆ ನೀಡಲು ಇವರಿಗೆ ಸಮಯ ಇರಲಿಲ್ಲವೋ ಅಥವಾ ಅಂಬರೀಶ್‌ ಅವರಿಗೆ ಇವರ ಮೇಲೆ ವಿಶ್ವಾಸವಿರಲಿಲ್ಲವೋ ಎಂಬುದನ್ನು ಅವರೇ ಹೇಳಬೇಕು ಎಂದು ತಿಳಿಸಿದ್ದಾರೆ.

ಸಚಿವ ಡಿ.ಸಿ.ತಮ್ಮಣ್ಣ ಅವರು ತಮ್ಮ ಕ್ಷೇತ್ರದ ಜನರೊಂದಿಗೆ ಹಂಚಿಕೊಂಡ ಭಾವನೆಗಳಿಗೆ ಸಂಸದೆ ಸುಮಲತಾ ಅವರು ದರ್ಪದಿಂದ ಟೀಕೆ ಮಾಡಿ ರಾಜೀನಾಮೆ ಕೇಳಿದ್ದಾರೆ. ಸಂಸದರಾಗಿ ಆಯ್ಕೆಯಾದ ಎರಡೇ ವಾರದಲ್ಲಿ ತಮ್ಮ ಆದ್ಯತೆಗಳನ್ನು ಬದಲಾಯಿಸಿ ರಾಜಕೀಯ ಪ್ರೇರಿತ ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next