Advertisement

Tungabhadra ಜಲಾಶಯದ ನೀರು ಉಳಿಸಿ ಹೊಸ ಗೇಟ್‌ ಅಳವಡಿಸಲು ಪ್ರಯತ್ನ

12:29 AM Aug 13, 2024 | Team Udayavani |

ಕೊಪ್ಪಳ: ಮುರಿದು ಬಿದ್ದಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಬದಲಾಗಿ ಹೊಸ ಗೇಟ್‌ ಅಳವಡಿಸಲು ತಜ್ಞರು ಹಾಗೂ ಸರಕಾರದ ಹಿರಿಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

Advertisement

ಸಾಧ್ಯವಾದಷ್ಟು ನೀರನ್ನು ಉಳಿಸಿಕೊಂಡೇ ಗೇಟ್‌ ಅಳವಡಿಸಲು ಕಸರತ್ತು ನಡೆದಿದ್ದು, ಅದಕ್ಕಾಗಿ “ಪ್ಲ್ಯಾನ್ ಎ’ ಮತ್ತು “ಬಿ’ ಮೂಲಕ ಸವಾಲಿನ ಸಾಹಸ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಮುರಿದು ಎರಡು ದಿನಗಳಾಗಿವೆ. ಆಬಳಿಕ ಅಣೆಕಟ್ಟಿನಿಂದ ನಿತ್ಯ 1.50 ಲಕ್ಷ ಕ್ಯುಸೆಕ್‌ ಹರಿದು ಹೋಗುತ್ತಿದೆ. ಈ ಮಧ್ಯೆ ತಜ್ಞರ ಮೊರೆ ಹೋಗಿರುವ ತುಂಗಭದ್ರಾ ಬೋರ್ಡ್‌, ಸಚಿವ ಶಿವರಾಜ ತಂಗಡಗಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ತಂಡವು ತುಂಗಭದ್ರಾ ಜಲಾಶಯದ ಬಗ್ಗೆ ಹೆಚ್ಚು ತಿಳಿದಿರುವ ನೀರಾವರಿ ತಜ್ಞ ತಮಿಳುನಾಡಿನ ಕನ್ನಯ್ಯ ನಾಯ್ಡು ಮತ್ತಿತರ ಅನುಭವಿಗಳ ಜತೆ ಸುದೀರ್ಘ‌ ಚರ್ಚೆ ನಡೆಸಿದೆ. ಈ ತಂಡವು ಜಲಾಶಯದಿಂದ ನದಿ ಪಾತ್ರಕ್ಕೆ ಹರಿಯುತ್ತಿರುವ ನೀರನ್ನು ತಡೆದು, ನೀರು ಉಳಿಸಿಕೊಂಡೇ ಹೊಸ ಗೇಟ್‌ ಅಳವಡಿಕೆಗೆ “ಪ್ಲ್ರಾನ್‌ ಎ’ ರೂಪಿಸಿದೆ. ಒಂದು ವೇಳೆ ಇದು ಯಶಸ್ವಿಯಾಗದಿದ್ದರೆ ಸುಮಾರು 60 ಟಿಎಂಸಿ ನೀರನ್ನು ನದಿಗೆ ಬಿಟ್ಟು ಗೇಟ್‌ ಅಳವಡಿಸುವ “ಪ್ಲ್ಯಾನ್ ಬಿ’ ಅನುಸರಿಸಲಾಗುತ್ತದೆ. ಈ ಎರಡು ಸಲಹೆಗಳೊಂದಿಗೆ ರಾಜ್ಯ ಸರಕಾರ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಏನಿದು ಪ್ಲ್ಯಾನ್ “ಎ’?
ಮುರಿದು ಬಿದ್ದಿರುವ 19ನೇ ಕ್ರಸ್ಟ್‌ಗೇಟ್‌ 20 ಅಡಿ ಎತ್ತರ, 64 ಅಡಿ ಅಗಲ ಹಾಗೂ 48 ಟನ್‌ ಭಾರ ಹೊಂದಿದೆ. ಇಷ್ಟೇ ಅಗಲ, ಎತ್ತರದ ಹೊಸ ಗೇಟ್‌ ನಿರ್ಮಿಸಲು 64 ಅಡಿ ಅಗಲ, 5 ಅಡಿ ಎತ್ತರದ ನಾಲ್ಕು ಕಬ್ಬಿಣದ ಪ್ಲೇಟ್‌ಗಳನ್ನು ತಯಾರಿಸಲಾಗಿದೆ. ಅವುಗಳಿಗೆ ಫ್ರೇಮ್‌ ಕೂಡ ಸಿದ್ಧಪಡಿಸಲಾಗಿದೆ. ಈ ಫ್ರೆಮನ್ನು ಎರಡು ಬೃಹತ್‌ ಕ್ರೇನ್‌ಗಳ ಮೂಲಕ ಮುರಿದ ಗೇಟ್‌ನ ಎರಡೂ ಬದಿ ಮೊದಲು ಅಳವಡಿಸಲಾಗುತ್ತದೆ. ಬಳಿಕ 64 ಅಡಿ ಅಗಲ, 5 ಅಡಿ ಎತ್ತರದ ಮೊದಲ ಪ್ಲೇಟ್‌ ಇಳಿಸಲಾಗುತ್ತದೆ. ಹೀಗೆ ಹಂತ ಹಂತವಾಗಿ 4 ಪ್ಲೇಟ್‌ಗಳನ್ನು ಇಳಿಸಲಾಗುತ್ತದೆ. ಇದರಿಂದ 19ನೇ ಗೇಟ್‌ನಲ್ಲಿ ನೀರಿನ ಹೊರ ಹರಿವು ಬಂದ್‌ ಆಗುತ್ತದೆ. ಆ ಬಳಿಕ ಹೊಸ ಕ್ರಸ್ಟ್‌ ಗೇಟ್‌ ಅಳವಡಿಕೆ ಮಾಡಬಹುದು. ಇದರಿಂದ ನೀರನ್ನು ಉಳಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪ್ಲ್ಯಾನ್ ಬಿ ಏನು?
ಈ ಹಿಂದೆ ಯೋಜಿಸಿದಂತೆ ಜಲಾಶಯದ ನೀರನ್ನು 20 ಅಡಿಗಳಷ್ಟು ಖಾಲಿ ಮಾಡಿ ಅಂದರೆ ಸುಮಾರು 65 ಟಿಎಂಸಿ ನೀರನ್ನು ಹೊರಬಿಟ್ಟ ಬಳಿಕ ಮುರಿದ ಗೇಟ್‌ನ ಸ್ಥಳದಲ್ಲಿ ಅದೇ ಮಾದರಿಯ ಹೊಸ ಗೇಟ್‌ ಅಳವಡಿಕೆ ಮಾಡುವುದು ಪ್ಲ್ರಾನ್‌ ಬಿ. ಇದು ಸವಾಲಿನ ಕೆಲಸವಲ್ಲ. ಆದರೆ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗಲಿದೆ.

Advertisement

ಹೊಸ ಪ್ರಯೋಗ ಸವಾಲು
ಪ್ಲಾನ್‌ ಎ ಅನುಸಾರ 5 ಅಡಿ ಎತ್ತರದ ಐದು ಪ್ಲೇಟ್‌ಗಳನ್ನು ಮುರಿದ ಹಳೆಯ ಗೇಟ್‌ ಜಾಗದಲ್ಲಿ ಹೊರಹರಿಯುತ್ತಿರುವ ನೀರಿನ ಸೆಳೆತಕ್ಕೆ ಎದುರಾಗಿ ಇಳಿ ಬಿಡುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಅಣೆಕಟ್ಟಿನಲ್ಲಿ 97 ಟಿಎಂಸಿ ನೀರು ಸಂಗ್ರಹವಿದೆ. ನೀರಿನ ಒತ್ತಡ ಕನಿಷ್ಟ 70-80 ಕಿ.ಮೀ.ಗಳಷ್ಟಿದೆ. ಈ ನೀರಿನ ಒತ್ತಡಕ್ಕೆ ಎದುರಾಗಿ ಪ್ಲೇಟ್‌ ಅಳವಡಿಕೆ ಕಷ್ಟ ಅಲ್ಲದೆ ಈ ಜಲಾಶಯದಲ್ಲಿ ಇದೇ ಮೊದಲು ಇಂತಹ ಪ್ರಯೋಗ ನಡೆಯುತ್ತಿರುವುದು. ಅಲ್ಲದೆ ಪ್ಲೇಟ್‌ ಇಳಿಬಿಡಲು ಎರಡು ಬೃಹದಾಕಾರದ ಕ್ರೇನ್‌ಗಳ ಅಗತ್ಯವಿದೆ. ಈ ಕ್ರೇನ್‌ಗಳು ಅಣೆಕಟ್ಟೆಯ ಮೇಲೆಯೇ ಕೆಲಸ ಮಾಡಬೇಕಾಗಿದ್ದು, ಇದರಿಂದ ಅಣೆಕಟ್ಟಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಇವೆಲ್ಲದರ ಕುರಿತು ಸರಕಾರವು ತಜ್ಞರೊಂದಿಗೆ ಚರ್ಚೆ ನಡೆಸಿದೆ. ಸರಕಾರದ ಈ ಹೊಸ ಪ್ರಯೋಗವನ್ನು ಬೃಹತ್‌ ರೈತ ಸಮೂಹ ಎದುರು ನೋಡುತ್ತಿದೆ. ಗೇಟ್‌ ಪ್ಲೇಟ್‌ಗಳ ನಿರ್ಮಾಣ ಕಾರ್ಯವೂ ಭರದಿಂದ ನಡೆದಿದೆ. ಸಚಿವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ನಾರಾಯಣಪುರ ಜಲಾಶಯದಲ್ಲಿ ನಡೆದಿತ್ತು ಇಂಥದ್ದೇ ಪ್ರಯೋಗ
ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿ ಕೃಷ್ಣಾ ನದಿ ನೀರಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದ 5ನೇ ಗೇಟ್‌ 2005ರಲ್ಲಿ ಇದೇ ರೀತಿ ಮುರಿದು ಬಿದ್ದಿತ್ತು. ಆಗ ತಜ್ಞರು ಮುರಿದ ಗೇಟ್‌ ಬಳಿ ಬಲವಾದ ಕಬ್ಬಿಣದ ಪ್ಲೇಟ್‌ಗಳನ್ನು ಅಳವಡಿಸಿ ನೀರಿನ ಹರಿವು ಸ್ಥಗಿತಗೊಳಿಸಿದ್ದರು. ಬಳಿಕ ಹೊಸ ಗೇಟ್‌ ಅಳವಡಿಸಲಾಗಿತ್ತು.

ನೀರು ಉಳಿಸಿ ಹೊಸ ಗೇಟ್‌ ಅಳವಡಿಕೆಗೆ ಸಿದ್ಧತೆ ನಡೆಸಿದ್ದೇವೆ. ನಾರಾಯಣ ಎಂಜಿನಿಯರಿಂಗ್‌ ಹಾಗೂ ಹಿಂದುಸ್ಥಾನ್‌ ಸಂಸ್ಥೆಗಳು ಪ್ಲೇಟ್‌ ಸಿದ್ಧಪಡಿಸುತ್ತಿವೆ. ಜಿಂದಾಲ್‌ನ ತಜ್ಞರೂ ಬಂದಿದ್ದಾರೆ. ಎಷ್ಟು ಭಾರದ ಕ್ರೇನ್‌ ಬಳಕೆ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಕೆಲಸ ಆರಂಭಿಸಲಾಗುವುದು.
– ಶಿವರಾಜ ತಂಗಡಗಿ, ಸಚಿವ

ಇಂದು ಸಿಎಂ ಭೇಟಿ
ಕೊಪ್ಪಳ: ತುಂಗಭದ್ರಾ ಜಲಾಶಯದ ಪರಿಸ್ಥಿತಿ ಅವ ಲೋಕಿಸಲು ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಸ್ಥಳಕ್ಕೆ ಆಗಮಿಸಲಿದ್ದಾ ರೆ. ಬಳಿಕ ಹಿರಿಯ ನೀರಾವರಿ ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾ ರೆ.

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next