ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನ ಸಮೇತ ಪರಾರಿಯಾಗಲು ಇಬ್ಬರು ಕಳ್ಳರು ವಿಫಲ ಯತ್ನ ನಡೆಸಿರುವ ಸಿನಿಮೀಯ ಮಾದರಿ ಘಟನೆ ಕಲ್ಯಾಣನಗರದ 80 ಅಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ಹಣ ದರೋಡೆ ಮಾಡುವ ಉದ್ದೇಶದ ಹಿನ್ನೆಲೆಯಲ್ಲಿ ವಾಹನ ಕದ್ದೊಯ್ಯುವ ಸಂಚು ರೂಪಿಸಿದ ಶಂಕೆ ಹಿನ್ನೆಲೆಯಲ್ಲಿ ಖಾಸಗಿ ಬ್ಯಾಂಕ್ ಗಳ ಎಟಿಎಂಗಳಿಗೆ ಹಣ ತುಂಬಿಸುವ ಏಜೆನ್ಸಿ ವಾಹನದ ಚಾಲಕ ಸುಮನ್, ಸೆಕ್ಯೂರಿಟಿ ಮಂಜು, ಕಸ್ಟೋಡಿಯನ್‌ಗಳಾದ ದೀಪಕ್, ಸತೀಶ್ ಕುಮಾರ್‌ನನ್ನು ವಶಕ್ಕೆ ಪಡೆದಿರುವ ಬಾಣಸವಾಡಿ ಠಾಣೆ ಪೊಲೀಸರು ತೀವ್ರ
ವಿಚಾರಣೆ ನಡೆಸುತ್ತಿದ್ದಾರೆ.
ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬಿಸುವ ರೇಡಿಯಂಟ್ ಏಜೆನ್ಸಿ ವಾಹನದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಲ್ಯಾಣನಗರದ ಓಂ ಶಕ್ತಿ ದೇವಾಲಯದ ಸಮೀಪದ ಎಚ್‌ಡಿಎಫ್ಸಿ ಬ್ಯಾಂಕ್ ಎಟಿಎಂಗೆ ಹಣ ತುಂಬಲು ರೇಡಿಯಂಟ್ ಏಜೆನ್ಸಿ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ ಕಸ್ಟೋಡಿಯನ್ ಗಳಾದ ದೀಪಕ್ ಹಾಗೂ ಸತೀಶ್ ಹಣ ತುಂಬಲು ಎಟಿಎಂ ಕೇಂದ್ರಕ್ಕೆ ಹೋಗಿದ್ದಾರೆ, ಸೆಕ್ಯೂರಿಟಿ ಗಾರ್ಡ್ ಕೂಡ ಅವರ ಹಿಂದೆಯೇ ಹೋಗಿದ್ದಾನೆ. ವಾಹನದಲ್ಲಿದ್ದ ಚಾಲಕ ಸುಮನ್ ಕೂಡ ಕೆಳಗಿಳಿದು, ಪೋನ್ ಸಂಭಾಷಣೆಯಲ್ಲಿ ನಿರತನಾಗಿದ್ದಾನೆ.
ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿ ವಾಹನ ಹತ್ತಿ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಇದನ್ನು ಗಮನಿಸಿದ ಚಾಲಕ ಸುಮನ್ ಕಿರುಚಿಕೊಂಡು ಹಿಂಬಾಲಿಸಿದ್ದಾನೆ. ಜತೆಗೆ, ಎಟಿಎಂ ಭದ್ರತಾ ಸಿಬ್ಬಂದಿ ಕೂಡ ಓಡಿಬಂದಿದ್ದು ವಾಹನ ಹಿಂಬಾಲಿಸಿದ್ದರು. ಸಿನಿಮಾ ಮಾದರಿಯಲ್ಲಿ ಕೆಲವೇ ನಿಮಿಷಗಳಲ್ಲಿ ನಡೆದ ಈ
ದರೋಡೆ ದೃಶ್ಯ ನೋಡಿ ಸ್ಥಳೀಯರು ಹಾಗೂ ಸ್ಥಳದಲ್ಲಿದ್ದ ಬಾಣಸವಾಡಿ ಬೀಟ್ ಸಿಬ್ಬಂದಿಯ ಇಬ್ಬರು ಪೊಲೀಸ್ ಪೇದೆಗಳು ಹಿಂಬಾಲಿಸುತ್ತಿದ್ದಂತೆ, ಆರೋಪಿ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 7 ಲಕ್ಷ ರೂ. ಹಣವಿದ್ದ ವಾಹನ ದರೋಡೆ ಯತ್ನ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಏಜೆನ್ಸಿಯ ಸೆಕ್ಯೂರಿ ಗಾರ್ಡ್ ವಾಹನದ ಬಳಿ ಇರದೇ ಹೋಗಿದ್ದು, ಚಾಲಕ ಕೀ ಬಿಟ್ಟು ಹೋಗಿದ್ದಾನೆ. ದರೋಡೆ ಸಂಚಿನಲ್ಲಿ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಏಜೆನ್ಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಾಹನ ಕದ್ದೊಯ್ಯಲು ಯತ್ನಿಸಿದ ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.