ಬೆಂಗಳೂರು: ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಕೆಂಪಣ್ಣ ಆಯೋಗದ ವರದಿಯನ್ನು ಸರ್ಕಾರ ಜನರ ಮುಂದಿಡಲಿ ಎಂದು ಆಗ್ರಹಿಸಿದರು.
ಅರ್ಕಾವತಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 650 ಎಕರೆ ಡಿ ನೋಟಿಫಿಕೇಷನ್ ಮಾಡಿರುವುದು ನಿಜ. ನಾನು ಒಂದೇ ಒಂದು ಎಕರೆ ಡಿ ನೋಟಿಫಿಕೇಷನ್ ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿರುವ ಸಿದ್ದರಾಮಯ್ಯ ನ್ಯಾ.ಕೆಂಪಣ್ಣ ಆಯೋಗದ ವರದಿ ಬಹಿರಂಗಕ್ಕೆ ಯಾಕೆ ಮುಂದಾಗುತ್ತಿಲ್ಲ. ನಮ್ಮ ಮಾಹಿತಿ ಪ್ರಕಾರ ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಉಲ್ಲಂ ಸಲಾಗಿದೆ ಎಂದು ಆಯೋಗ ವರದಿ ನೀಡಿದೆ ಎಂದು ಹೇಳಿದರು.
ಬಿಜೆಪಿ ವತಿಯಿಂದಲೂ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿ.ಸೋಮಣ್ಣ ಅವರ ಸಮಿತಿ ಸಾಕಷ್ಟು ದಾಖಲೆ, ವರದಿಯನ್ನು ಆಯೋಗಕ್ಕೆ ನೀಡಿತ್ತು. ಆದರೆ, ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಮಾಧ್ಯಮಕ್ಕೆ ಮಾಹಿತಿಯೇ ನೀಡಲಿಲ್ಲ.
ಅವರೇ ಮುಖ್ಯಮಂತ್ರಿಗೆ ಕ್ಲೀನ್‌ಚಿಟ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆಯೋಗದ ವರದಿ ಕೊಟ್ಟ ನಂತರ ಅದರ ಪರಾಮರ್ಶೆಗೆ ಮತ್ತೂಂದು ಸಮಿತಿ ನೇಮಿಸುವ ಅವಶ್ಯಕತೆ ಏನಿತ್ತು. ಆಯೋಗದ ತನಿಖೆಯಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂಬುದು ಪ್ರಸ್ತಾಪಗೊಂಡಿರುವುದರಿಂದ ಅದನ್ನು ಮುಚ್ಚಿ ಹಾಕಲು ಸಮಿತಿ ನೇಮಿಸಲಾಗಿದೆ ಎಂದು ದೂರಿದರು.
ಆಗ್ರಹ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಸಚಿವರ ಮಾತನ್ನೂ ಅಧಿಕಾರಿಗಳು ಕೇಳುತ್ತಿಲ್ಲ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತಪಟ್ಟಿದ್ದಾನೆ ಎಂದು ಏಳು ಗಂಟೆ ಶವಾಗಾರದಲ್ಲಿ ಇಡಲಾಗಿತ್ತು. ಆ ನಂತರ ಅವರ ಸಂಬಂಧಿಕರು ನೋಡಿದಾಗ ಇನ್ನೂ ಜೀವ ಇತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಒಂದು ಗಂಟೆ ಮುಂಚೆ ಬಂದಿದ್ದರೆ ಬದುಕಿಸಬಹುದಿತ್ತು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೆಲಸ ಮಾಡುತ್ತಿರುವ ಪರಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇದುವರೆಗೂ ಅಲ್ಲಿಗೆ ಭೇಟಿ ನೀಡಿಲ್ಲ. ತಕ್ಷಣಕ್ಕೆ ಘಟನೆಗೆ ಕಾರಣರಾದ ವೈದ್ಯರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.