Advertisement

ವೈಯಕ್ತಿಕ ದ್ವೇಷ ಸ್ನೇಹಿತರಿಂದ ಹಲ್ಲೆ

11:51 AM Jun 05, 2018 | Team Udayavani |

ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆರೇಳು ಮಂದಿ ಯುವಕರ ಗುಂಪು, ಸ್ನೇಹಿತನ ಮೇಲೇ ಹಲ್ಲೆ ನಡೆಸಿದ ಘಟನೆ ಆಡುಗೋಡಿಯ ರಾಜೇಂದ್ರನಗರದ ಪಾಸ್‌ಪೋರ್ಟ್‌ ಕಚೇರಿ ಸಮೀಪ ಸೋಮವಾರ ನಡೆದಿದೆ.

Advertisement

ಘಟನೆ ಸಂಬಂಧ ರಾಜೇಂದ್ರನಗರದ ಕೊಳಗೇರಿ ನಿವಾಸಿ ಕಾರ್ತಿಕ್‌, ರಿಚರ್ಡ್‌ ಮತ್ತು ಅಜಿತ್‌ ಸೇರಿ ಐವರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಮನೋಜ್‌ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡಿರುವ ಮನೋಜ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆಗೊಳಗಾದವ ಮತ್ತು ಹಲ್ಲೆ ನಡೆಸಿದ ಆರೋಪಿಗಳು ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಮನೋಜ್‌, ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಇಬ್ಬರೂ ಸ್ನೇಹಿತರಾಗಿದ್ದು, ಮನೋಜ್‌ನ ಸ್ನೇಹಿತ ಸೂರ್ಯ ಎಂಬುವನ ಸಹೋದರಿಯನ್ನು ಕಾರ್ತಿಕ್‌ನ ಸಂಬಂಧಿಯೊಬ್ಬರು ವಿವಾಹವಾಗಿದ್ದರು.

ಇದಾದ ಬಳಿಕ ಕೆಲ ದಿನಗಳ ಹಿಂದೆ ಮನೋಜ್‌, ನಿಮ್ಮ ಸಂಬಂಧಿ ಮದುವೆಯಾಗಿರುವುದು ನನ್ನ ಸ್ನೇಹಿತನ ಸಹೋದರಿಯನ್ನು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಂಬಂಧಿಗೆ ಹೇಳು ಎಂದು ಕಾರ್ತಿಕ್‌ಗೆ ತಾಕೀತು ಮಾಡಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಸಿದ ಕಾರ್ತಿಕ್‌, ಅದು ನಮಗೆ ಗೊತ್ತಿದೆ. ನಿನ್ನಿಂದ ಕಲಿಯಬೇಕಿಲ್ಲ ಎಂದು ಹೇಳಿದ್ದ.

ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದವಾಗಿದ್ದು, ಮಧ್ಯೆ ಪ್ರವೇಶಿಸಿದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ವಿವಾದವೊಂದಕ್ಕೆ ಸಂಬಂಧಿಸಿದಂತೆ ಮನೋಜ್‌ ತನ್ನ ಸ್ನೇಹಿತ ಸೂರ್ಯನ ಮನೆಗೆ ಬಂದು ಅವರ ತಂದೆ ಕಣ್ಣನ್‌ಗೆ ಬೆದರಿಕೆ ಹಾಕಿದ್ದ. ಇದಾದ ಒಂದೆರಡು ದಿನದಲ್ಲೇ ಕಣ್ಣನ್‌ ಹೃದಯಾಘಾತದಿಂದ ಮೃತಪಟ್ಟಿದ್ದರು.

Advertisement

ಈ ವೇಳೆ ಮನೋಜ್‌ ಕೂಡ ಕಣ್ಣನ್‌ರ ಅಂತಿಮ ದರ್ಶನಕ್ಕೆ ಬಂದಿದ್ದ. ಆದರೆ, ಮನೋಜ್‌ ಬೆದರಿಕೆ ಹಾಕಿದ್ದರಿಂದಲೇ ತನ್ನ ತಂದೆ ಮೃತಪಟ್ಟರು ಎಂದುಕೊಂಡಿದ್ದ ಸೂರ್ಯ, ಈ ವಿಚಾರವನ್ನು ತನ್ನ ಇನ್ನೊಬ್ಬ ಸ್ನೇಹಿತ ಕಾರ್ತಿಕ್‌ ಹಾಗೂ ಇತರರ ಬಳಿ ಹೇಳಿಕೊಂಡಿದ್ದ.

ಇದರಿಂದ ಆಕ್ರೋಶಗೊಂಡಿದ್ದ ಕಾರ್ತಿಕ್‌ ಮತ್ತು ತಂಡ ಸೋಮವಾರ ಬೆಳಗ್ಗೆ ರಾಜೇಂದ್ರನಗರದ ಪಾಸ್‌ಪೋರ್ಟ್‌ ಕಚೇರಿ ಬಳಿ ಹೋಗುತ್ತಿದ್ದ ಮನೋಜ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮನೋಜ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತುರ್ತು ನಿಗಾ ಘಟಕದಲ್ಲಿ ಮನೋಜ್‌ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next