ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಗುಂಪೊಂದು ಏಕಾಏಕಿ ಕಲ್ಲು ತೂರಾಟ ನಡೆಸಿ, ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿದ್ದನ್ನು ಖಂಡಿಸಿ ಗುರುವಾರ ಬೆಳಗ್ಗೆ ಬಿಮ್ಸ್ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಕೋವಿಡ್ ಸೋಂಕಿತ ವ್ಯಕ್ತಿ ಮೃತಪಟ್ಟ ಎಂಬ ಕಾರಣಕ್ಕೆ ಏಕಾಏಕಿ ದಾಳಿ ನಡೆಸಿದ ಕಿಡಿಗೇಡಿಗಳು ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪೂರ್ವನಿಯೋಜಿತವಾಗಿ ಹಲ್ಲೆ ನಡೆಸಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವೈದ್ಯರ ಮೇಲೆ ಹಲ್ಲೆ ನಡೆದರೂ ಯಾವ ಹಿರಿಯ ಅಧಿಕಾರಿಗಳೂ ನಮ್ಮ ಸಹಾಯಕ್ಕೆ ಬಂದಿಲ್ಲ. ಇಲ್ಲಿ ಆರೋಗ್ಯ ಸಿಬ್ಬಂದಿಗೆ ಯಾವುದೇ ರಕ್ಷಣೆ ಇಲ್ಲ. ಕುಟುಂಬವನ್ನು ತೊರೆದು ನಾವು ಕೋವಿಡ್ ಸೋಂಕಿತರ ಸೇವೆ ಮಾಡುತ್ತಿದ್ದೇವೆ. ಆದರೂ ನಮ್ಮ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಆಕ್ರೋಶಿತರು ಆಸ್ಪತ್ರೆಯೊಳಗೆ ನುಗ್ಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಗೇಟ್ ಬಳಿ ತಡೆದು ವೈದ್ಯರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ರಕ್ಷಣೆ ಮಾಡಿದ್ದಾರೆ. ಓರ್ವ ಪೊಲೀಸ್ ಸಿಬ್ಬಂದಿ ಮೇಲೆ ಕೂಡ ಹಲ್ಲೆ ನಡೆದಿದ್ದು, ಅವರನ್ನು ಕೂಡ ಸ್ಕ್ಯಾನಿಂಗ್ ರೂಮ್‌ನಲ್ಲಿ ಕೂಡಿ ಹಾಕಿ ದೊಡ್ಡ ಅನಾಹುತದಿಂದ ಕಾಪಾಡಲಾಗಿದೆ ಎಂದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ಬಂದಾಗಿನಿಂದ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ. ಯಾರಿಗಾದರೂ ಕೋವಿಡ್ ಬಂದರೆ ಅವರ ಸಮೀಪವೂ ಹೋಗಲಾರದಂಥ ಸ್ಥಿತಿ ಇದೆ. ಆದರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುತ್ತಿದ್ದಾರೆ. ನೀವೆಲ್ಲ ದೇವರಿಗೆ ಸಮಾನರು ಎಂದರು.
ನಿಮಗೆ ಏನಾದರೂ ಸಮಸ್ಯೆಯಾದರೆ ನಾವೆಲ್ಲ ನಿಮ್ಮ ಬೆನ್ನಿಗೆ ನಿಂತು ರಕ್ಷಣೆ ಮಾಡುತ್ತೇವೆ. ಯಾರೂ ಹೆದರುವ ಅಗತ್ಯವಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಮ್ಮ ಬೆಂಬಲಕ್ಕೆ ಇದೆ. ಆಸ್ಪತ್ರೆಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುವುದು. ಯಾರೂ ಧೃತಿಗೆಡಬಾರದು. ಕೋವಿಡ್ ಯೋಧರಾದ ನಿಮಗೆ ಕಾನೂನು ರಕ್ಷಣೆ ಇದೆ. ಬಿಮ್ಸ್ ಸುತ್ತಮುತ್ತ ನಿಷೇಧಾಜ್ಞೆ ನಿರಂತರವಾಗಿ ಮುಂದುವರಿಸಲಾಗುವುದು. ಕೋವಿಡ್ ಸೋಂಕು ಕಡಿಮೆ ಆಗುವವರೆಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ವೈದ್ಯಕೀಯ ಸಿಬ್ಬಂದಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾನು ಆಸ್ಪತ್ರೆಗೆ ನಿತ್ಯವೂ ಎರಡು ಸಲ ಭೇಟಿ ನೀಡುತ್ತೇನೆ. ತಾಲೂಕು ಮಟ್ಟದಲ್ಲೂ ಕೋವಿಡ್ ಕೇರ್ ಕೇಂದ್ರಗಳನ್ನು ಮಾಡಿದ್ದೇವೆ. ಇದರಿಂದ ಬಿಮ್ಸ್‌ಗೆ ಒತ್ತಡ ಕಡಿಮೆ ಆಗಲಿದೆ. ಇಡೀ ಬಿಮ್ಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಘೋಷಿಸಿ ತೀರ್ಮಾನಿಸಲಾಗಿದೆ. ಯಾರಿಗೂ ಒತ್ತಡ ಆಗದಂತೆ ನೋಡಿಕೊಳ್ಳಲು ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ವೈದ್ಯಕೀಯ ನಿರ್ದೇಶಕ ಡಾ| ವಿನಯ ದಾಸ್ತಿಕೊಪ್ಪ ಮಾತನಾಡಿ, ಕೋವಿಡ್ ಶುರುವಾದಾಗಿನಿಮದ ಹಗಲಿರುಳು ಶ್ರಮಿಸುತ್ತಿರುವ ನಮಗೆಲ್ಲ ಈಗ ಜಿಲ್ಲಾಧಿಕಾರಿ ಉತ್ಸಾಹ ನೀಡಿದ್ದಾರೆ. ಆರಂಭದಿಂದಲೂ ನಾವೆಲ್ಲ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರುವಾಗ ಇಂಥ ತೊಡಕುಗಳು ಬರುವುದು ಸಹಜ. ಸವಾಲಿನಿಂದ ಕೂಡಿರುವ ಈ ಸಂದರ್ಭದಲ್ಲಿ ಯಾರೂ ಧೃತಿಗೆಡುವ ಅಗತ್ಯವಿಲ್ಲ. ಜಿಲ್ಲಾಸ್ಪತ್ರೆ ಮೇಲೆ ನಡೆದಿರುವ ಘಟನೆಯನ್ನು ಮರೆತು ಮತ್ತೆ ಎಂದಿನಂತೆ ನಾವು ಕರ್ತವ್ಯ ನಿಭಾಯಿಸೋಣ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಬಿಮ್ಸ್ ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.