ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಆಮಿಷ ನೀಡುವ ಯತ್ನಗಳನ್ನು ರಾಜಕಾರಣಿಗಳು ಮುಂದುವರಿಸಿದ್ದು ಭಾನುವಾರ ರಾಜ್ಯಾದ್ಯಂತ ಹಣ , ಸೀರೆ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಲಗ್ಗೆರೆಯಲ್ಲಿ ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಮುನಿರತ್ನ ಅವರ ಭಾವಚಿತ್ರವಿದ್ದ ಸೀರೆ ಬಂಡಲ್‌ಗಳು ಸಹಿತ ವಿವಿಧ ವಸ್ತುಗಳನ್ನು 5 ಕಡೆಗಳಲ್ಲಿ ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ತಿಮ್ಮ ಸಂದ್ರ ದಲ್ಲಿರುವ ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ಅವರ ಕಚೇರಿಯ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಬಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿಯೊಬ್ಬರು ಹಂಚಲು ಮುಂದಾಗಿದ್ದ ಹೊಲಿಗೆ ಯಂತ್ರಗಳನ್ನು ಜಪ್ತಿ ಮಾಡಿರುವ ಬಗ್ಗೆ ವರದಿಯಾಗಿದೆ.
ರಾಯಚೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಯರಗೇರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಿಂಗನೋಡಿ ಚೆಕ್ ಪೋಸ್ಟ್ ಬಳಿ ಹಣ ಸಾಗಿಸುತ್ತಿದ್ದ ಕಾರು ಮತ್ತು 5 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ರಾಮದುರ್ಗದ ಹುಲಕುಂದ ದಲ್ಲಿ ಸುಮಾರು 2 ಸಾವಿರ ಸೀರೆಗಳ ಸಮೇತ ಇಬ್ಬರನ್ನು ಕಟಕೋಳ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂ.ಜಾವೀದ್ ಅವರು ಹಂಚಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.