Advertisement
ಇದು ಸಿಸಿಪಸ್ ಮತ್ತು ಥೀಮ್ ಇಬ್ಬರಿಗೂ ಮೊದಲ “ಎಟಿಪಿ ಫೈನಲ್ಸ್’ ಪ್ರಶಸ್ತಿ ಸಮರವಾಗಿತ್ತು. ಹೀಗಾಗಿ ಯಾರೇ ಗೆದ್ದರೂ ಇಲ್ಲಿ ಮೊದಲ ಸಲ ಚಾಂಪಿಯನ್ ಆಗುತ್ತಿದ್ದರು. ತೀವ್ರ ಪೈಪೋಟಿಯ ಈ ಹೋರಾಟದಲ್ಲಿ ಅದೃಷ್ಟ ಸಿಸಿಪಸ್ ಪಾಲಾಯಿತು. ಗ್ರೀಕ್ ಆಟಗಾರನೊಬ್ಬನಿಗೆ ಮೊದಲ ಸಲ ಈ ಪ್ರಶಸ್ತಿ ಒಲಿಯಿತು. ಅಷ್ಟೇ ಅಲ್ಲ, ಗ್ರೀಕ್ ಟೆನಿಸಿಗನೊಬ್ಬ ಈ ಕೂಟಕ್ಕೆ ಅರ್ಹತೆ ಪಡೆದದ್ದು ಇದೇ ಮೊದಲ ಸಲವಾಗಿತ್ತು.
21ರ ಹರೆಯದ ಸಿಸಿಪಸ್ ಈ ಕೂಟದ 8 ಮಂದಿ ಸ್ಪರ್ಧಿಗಳಲ್ಲೇ ಅತ್ಯಂತ ಕಿರಿಯ ಆಟಗಾರನಾಗಿದ್ದರು. ಇದರೊಂದಿಗೆ 2001ರ ಬಳಿಕ ಈ ಪ್ರಶಸ್ತಿ ಎತ್ತಿದ ಕಿರಿಯ ಟೆನಿಸಿಗನೆಂಬ ಹಿರಿಮೆಗೆ ಪಾತ್ರರಾದರು. ಅಂದು ಲೇಟನ್ ಹೆವಿಟ್ ಈ ಸಾಧನೆ ಮಾಡಿದ್ದರು. ಹಾಗೆಯೇ 1991ರ ಬಳಿಕ ಪದಾರ್ಪಣ ಕೂಟದಲ್ಲೇ ಫೈನಲ್ ಪ್ರವೇಶಿಸಿದ ಕಿರಿಯ ಆಟಗಾರನಾಗಿಯೂ ಸಿಸಿಪಸ್ ಮೂಡಿಬಂದಿದ್ದರು. ಅಂದಿನ ಸಾಧಕ ಜಿಮ್ ಕೊರಿಯರ್. “ಮೊದಲ ಸೆಟ್ ಬಹಳ ಕಠಿನವಾಗಿತ್ತು. ಆದರೆ 2ನೇ ಸೆಟ್ ವೇಳೆ ಉತ್ತಮ ಪ್ರದರ್ಶನ ನೀಡಲು ಹೇಗೆ ಸಾಧ್ಯವಾಯಿತು ಎಂಬುದೇ ತಿಳಿಯುತ್ತಿಲ್ಲ. ಇಂಥ ದೊಡ್ಡ ಕೂಟದಲ್ಲಿ ಆಡುವಾಗ ಸಹಜವಾಗಿಯೇ ನಾನು ನರ್ವಸ್ ಆಗುತ್ತೇನೆ. ಆದರೆ ಇಂದು ಹೋರಾಟ ನೀಡುವಲ್ಲಿ ಯಶಸ್ವಿಯಾದೆ’ ಎಂದು ವಿಶ್ವದ 6ನೇ ರ್‍ಯಾಂಕಿಂಗ್ ಆಟಗಾರ ಸಿಸಿಪಸ್ ಪ್ರತಿಕ್ರಿಯಿಸಿದ್ದಾರೆ.
Related Articles
Advertisement