ಬೆಂಗಳೂರು: ಕಳ್ಳನ ಕೈಗೆ ಖಜಾನೆ ಕೀ ಕೊಟ್ಟು ಮೋಸ ಹೋದ ಕಥೆಯಿದು. ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ಖಾಸಗಿ ಏಜೆನ್ಸಿಯ ಕಸ್ಟೋಡಿಯನ್, ಎಟಿಎಂ ಕೇಂದ್ರಗಳಿಂದ ಬರೋಬ್ಬರಿ 76 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಎಸ್‌ಐಎಸ್ ಪ್ರೊಸೆಗರ್ ಕಂಪನಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆ ಪೊಲೀಸರು, ಆರೋಪಿ ಶಿವರಾಜ್ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೂರು ವರ್ಷಗಳಿಂದ ಕಸ್ಟೋಡಿಯನ್ ಕಾರ್ಯನಿರ್ವಹಿಸುತ್ತಿದ್ದ ಶಿವರಾಜ್, ಓಟಿಸಿ ರಸ್ತೆಯಲ್ಲಿರುವ ಎಚ್‌ಡಿಎಫ್ಸಿ ಹಾಗೂ ಐಸಿಐಸಿಐ ಬ್ಯಾಂಕ್ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ.
ಆ.28ರಂದು ರಾತ್ರಿ ಓಟಿಸಿ ರಸ್ತೆಯಲ್ಲಿರುವ ನಾಲ್ಕು ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿರುವ ಆರೋಪಿ ಶಿವರಾಜ್, ಕಂಪನಿ ನೀಡಿದ್ದ ಪಾಸ್‌ವರ್ಡ್ ಬಳಸಿ 76.42 ಲಕ್ಷ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಏಜೆನ್ಸಿ ಮ್ಯಾನೇಜರ್ ಶತ್ರುಘ್ನ ಸಿಂಗ್ ಪ್ರಸಾದ್ ನೀಡಿದ ದೂರಿನ ಮೇರೆಗೆ ಆರೋಪಿ ಹಣ ಡ್ರಾ ಮಾಡುತ್ತಿರುವ ಸಿಸಿಟಿವಿ ಫುಟೇಜ್ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗೈರು ಹಾಜರಿ ನಾಟಕ: ಆಗಸ್ಟ್ 22ರಿಂದ ಕಂಪನಿಯಲ್ಲಿ ವೈಯಕ್ತಿಕ ಕಾರಣ ನೀಡಿ ರಜೆ ಪಡೆದುಕೊಂಡ ಶಿವರಾಜ್, ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ ಆತನ ಬದಲಿಗೆ ವೀರುವೇಲು ಎಂಬಾತನನ್ನು ಕೆಲಸಕ್ಕೆ ನೇಮಿಸಲಾಗಿತ್ತು. ಈ ಮಧ್ಯೆ ಆ.29ರಂದು ಓಟಿಸಿ ರಸ್ತೆಯಲ್ಲಿನ ನಾಲ್ಕು ಎಟಿಎಂ ಕೇಂದ್ರಗಳಲ್ಲಿ ಹಣ ಖಾಲಿಯಾಗಿದ್ದು, ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಬ್ಯಾಂಕ್ ಸಿಬ್ಬಂದಿ, ಏಜೆನ್ಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಏಜೆನ್ಸಿಯವರು ವೀರವೇಲುನನ್ನು ಕರೆದು ಕೇಳಿದಾಗ ಟಿಎಂಗೆ ಹಣ ತುಂಬಿರುವುದಾಗಿ ಆತ ತಿಳಿಸಿದ್ದ.
ಇದರಿಂದ ಎಚ್ಚೆತ್ತ ಏಜೆನ್ಸಿ ಸಿಬ್ಬಂದಿ, ನಾಲ್ಕು ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, 76.42 ಲಕ್ಷ ರೂ. ಕೊರತೆ ಇರುವುದು ಧೃಡಪಟ್ಟಿದೆ. ಎಟಿಎಂ ಕೇಂದ್ರಗಳ ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ, 28ರ ತಡರಾತ್ರಿ ಎಟಿಎಂಗಳಿಗೆ ಬಂದ ಶಿವರಾಜ್, ಪಾಸ್‌ವರ್ಡ್ ಬಳಸಿ ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ. ಆತನ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಆತ ವಾಸವಿದ್ದ ಆಡುಗೋಡಿಯ ಮನೆಯ ಬಳಿ ಹೋದರೂ ಆತ ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.
ಹಲವು ದಿನಗಳಿಂದ ಸ್ಕೆಚ್?: ಹಣ ಕಳವು ಮಾಡಿ ಪರಾರಿಯಾಗುವ ಹಲವು ದಿನಗಳ ಮೊದಲೇ ಆರೋಪಿ ಶಿವರಾಜ್ ತನ್ನ ಸ್ನೇಹಿತನೊಬ್ಬನ ಜತೆ ಸೇರಿ ಸಂಚು ರೂಪಿಸಿರುವ ಶಂಕೆಯಿದೆ. ಎಟಿಎಂ ಕೇಂದ್ರಗಳ ಸೆಕ್ಯೂರಿಟಿಗಳ ಪರಿಚಯ ಆತನಿಗಿತ್ತು. ಹೀಗಾಗಿ, ಹಣ ಡ್ರಾ ಮಾಡಲು ಎಟಿಎಂಗಳಿಗೆ ತೆರಳಿದಾಗ, ಪರಿಶೀಲನೆ ನಡೆಸಲು ಬಂದಿರುವುದಾಗಿ ಸೆಕ್ಯೂರಿಟಿಗೆ ಹೇಳಿದ್ದಾನೆ. ಬಳಿಕ ಅವರನ್ನು ಯಾಮಾರಿಸಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ತನಿಖೆ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದರು.
ಕಸ್ಟೋಡಿಯನ್ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಪರಾರಿಯಾಗಿರುವ ಪ್ರಕರಣ ಸಂಬಂಧ ಕ್ಷಿಪ್ರಗತಿಯ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ.
-ಡಿ.ದೇವರಾಜು, ಕೇಂದ್ರ ವಿಭಾಗದ ಡಿಸಿಪಿ
* ಮಂಜುನಾಥ್ ಲಘುಮೇನಹಳ್ಳಿ