ನಾಗ್ಪುರ್: ಒಂದು ವೇಳೆ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ನಮಗೆ 5000 ರೂ. ಬದಲು 10 ಸಾವಿರ ರೂಪಾಯಿ ಸಿಕ್ಕಿದರೆ ಆಶ್ಚರ್ಯವಾಗುವುದಿಲ್ಲವೇ? ಅದೇ ರೀತಿಯ ಘಟನೆ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಹುಲ್ ಗಾಂಧಿಯ ಖ್ಯಾತಿಯಿಂದ ಭಯಗೊಂಡು ಕೇಂದ್ರ ಸರ್ಕಾರದಿಂದ ವಿಚಾರಣೆ ಕೆಲಸ: ಡಿಕೆ ಶಿವಕುಮಾರ್
ವ್ಯಕ್ತಿಯೊಬ್ಬರು 500 ರೂಪಾಯಿ ಡ್ರಾ ಮಾಡಲು ಎಟಿಎಂಗೆ ಹೋಗಿದ್ದರು. ಆದರೆ ಎಟಿಎಂನಿಂದ ಬರೋಬ್ಬರಿ 500 ರೂಪಾಯಿ ಐದು ನೋಟುಗಳು ಹೊರಬಂದಿದ್ದವು. ಇದರಿಂದ ಅಚ್ಚರಿಗೊಂಡ ವ್ಯಕ್ತಿ ಮತ್ತೊಮ್ಮೆ 500 ರೂಪಾಯಿ ಡ್ರಾ ಮಾಡಿದಾಗಲೂ 2,500 ರೂಪಾಯಿ ಸಿಕ್ಕಿತ್ತು. ಈ ಘಟನೆ ನಾಗ್ಪುರ್ ನಗರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಖಪರ್ಖೇಡಾ ನಗರದ ಖಾಸಗಿ ಬ್ಯಾಂಕ್ ನ ಎಟಿಎಂನಲ್ಲಿ ನಡೆದಿರುವುದಾಗಿ ವರದಿ ವಿವರಿಸಿದೆ.
ಎಟಿಎಂನಲ್ಲಿ ಒಂದಕ್ಕೆ ಐದು ಪಟ್ಟು ಹಣ ಬರುತ್ತಿದೆ ಎಂಬ ಸುದ್ದಿ ಅಗ್ನಿಜ್ವಾಲೆಯಂತೆ ಎಲ್ಲೆಡೆ ಹರಡಿದ ಪರಿಣಾಮ ಹಣ ಡ್ರಾ ಮಾಡಲು ಎಟಿಎಂ ಮುಂದೆ ಜನರ ದಂಡೇ ನೆರೆದಿತ್ತು. ಏತನ್ಮಧ್ಯೆ ಬ್ಯಾಂಕ್ ಗ್ರಾಹಕರೊಬ್ಬರು ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಪರಿಣಾಮ ಪೊಲೀಸರು ಸ್ಥಳಕ್ಕಾಗಮಿಸಿ ಎಟಿಎಂಗೆ ಬೀಗ ಹಾಕಿ, ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ತಾಂತ್ರಿಕ ದೋಷದಿಂದಾಗಿ ಎಟಿಎಂನಲ್ಲಿ ನಮೂದಿಸಿದ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಹಣ ಡ್ರಾ ಆಗಲು ಕಾರಣವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.