Advertisement

ಬಡವ ಬಲ್ಲಿದ ಭೇದ ಮರೆತು ಒಂದಾಗಿ ಬಾಳ್ಳೋಣ: ಆಶಾ 

11:15 AM Aug 10, 2018 | |

ವರ್ಕಾಡಿ : ಬಂಟರ ಸಂಘ ವರ್ಕಾಡಿ ವಲಯ ಮತ್ತು ಗ್ರಾಮ ಸಮಿತಿಗಳ ಆಶ್ರಯದಲ್ಲಿ ಪ್ರಕೃತಿ ರಮಣೀಯ ಸುಂದರ ತಾಣವಾದ ವರ್ಕಾಡಿ ಪಾವಳದ ಬಾಕಿಮಾರು ಕೆಸರುಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ಸಂಭ್ರಮ ಸಡಗರದಿಂದ ನಡೆಯಿತು.

Advertisement

ಬಂಟರ ಧರ್ಮ ಚಾವಡಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಸಮಾರಂಭವು ಆರಂಭಗೊಂಡಿತು. ಬಂಟರ ಸಂಘದ ವರ್ಕಾಡಿ ವಲಯದ ಗೌರವಾಧ್ಯಕ್ಷ ಶಂಕರಮೋಹನ ಪೂಂಜ ಅಡೇಕಳ ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ, ಗ್ರಾಮೀಣ ಆಟ ಕ್ರೀಡೆಗಳಿಂದ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ ಎಂದು ಶುಭಕೋರಿದರು.

ಬಂಟ ಮಹಿಳಾ ಸಂಘದ ಅಧ್ಯಕ್ಷೆ ಆಶಾ ದಿಲೀಪ್‌ ರೈ ಸುಳ್ಯಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಡವ-ಶ್ರೀಮಂತ ಎಂಬ ಭೇದಭಾವ ಎಂದಿಗೂ ತರವಲ್ಲ. ಕಿರೀಟ ಧರಿಸಿದ ರಾಜನಾದರೂ ಮುಂಡಾಸು ಇಲ್ಲದ ಸೇವಕನಾದರೂ ಸತ್ತಾಗ ಇಬ್ಬರನ್ನೂ ಉರಿಸುವುದು ಕಟ್ಟಿಗೆ. ಈ ಕಟ್ಟಿಗೆಯು ಮರವಾಗಿದ್ದರೂ ನಾಡಿಗೆ ಪ್ರಯೋಜನವಿದೆ. ಅಲ್ಲದೆ ಮರ ಸತ್ತ ಅನಂತರವೂ ಉಪಯೋಗಕ್ಕೆ ಬರುತ್ತದೆ ಎಂದು ವಿಶ್ಲೇಷಿಸಿದರು.

ಮಾನವನು ತನ್ನ ಜೀವಿತದಲ್ಲಿ ಸಾಧನೆ ಹಾಗೂ ಸಮಾನತೆಯನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು. ಸಂಘಟನೆಯಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ತತ್ವವನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ದಿವ್ಯ ತೇಜಸ್ಸೊಂದು ಬೆಳಗುತ್ತದೆ ಎಂದು ನುಡಿದರು. ಮನುಷ್ಯ ಸತ್ತಾಗ ಉಪಯೋಗ ಶೂನ್ಯ ಹಾಗೂ ಆತಂಕವಾಗುವುದು ಸಹಜ ಎಂಬುದನ್ನು ಮನಮುಟ್ಟುವಂತೆ ಉದಾಹರಣೆ ಗಳೊಂದಿಗೆ ವಿವರಿಸಿದರು.

ಧರ್ಮ ಚಾವಡಿಯಲ್ಲಿ ಮುಖ್ಯ ಅತಿಥಿಗಳಾಗಿ ವಿವಿಧ ರಂಗಗಳ ಗಣ್ಯರಾದ ಸಂತೋಷ್‌ ಶೆಟ್ಟಿ ಬಾಕ್ರಬೈಲು, ಶೈಲೇಂದ್ರ ಭರತ್‌ ನಾಯ್ಕ, ಸುಭಾಶ್ಚಂದ್ರ ಅಡಪ ಕಲ್ಲೂರುಬೀಡು, ಗೋಪಾಲ ಶೆಟ್ಟಿ ಅರಿಬೈಲು, ಶೇಖರ ಶೆಟ್ಟಿ ಕೊಡ್ಲಮೊಗರು, ವಿಶ್ವನಾಥ ರೈ ಅಡ್ಕ, ಸುಲೋಚನಾ ಸಿ.ಶೆಟ್ಟಿ , ಬಿ.ತ್ಯಾಂಪಣ್ಣ ರೈ, ನಾರಾಯಣ ಶೆಟ್ಟಿ ಉದ್ದ ಪಾವೂರು, ರಾಮಣ್ಣ ಶೆಟ್ಟಿ ಆಲಬೆಗುತ್ತು , ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿಬೈಲುಗುತ್ತು, ವಸಂತರಾಜ್‌ ಶೆಟ್ಟಿ ಕಣಿಯೂರು, ಬಾಲಕೃಷ್ಣ ಶೆಟ್ಟಿ ಪಾವಳಗುತ್ತು, ಜಯಂತ ಶೆಟ್ಟಿ ಪಾವಳ ಮೊದಲಾದವರು ಶುಭಹಾರೈಸಿದರು.

Advertisement

ಕರ್ನಾಟಕ ತುಳು ಅಕಾಡೆಮಿ ಸದಸ್ಯೆ ವಿಜಯಾ ಶೆಟ್ಟಿ ಸಾಲೆತ್ತೂರು ಅವರು ತುಳು ಪಾಡ್ದನದೊಂದಿಗೆ ಕಾರ್ಯಕ್ರಮಕ್ಕೆ ಶುಭಕೋರಿದರು. ಆದ್ವಿಕಾ ಶೆಟ್ಟಿ ಕ್ರೀಡಾ ಜ್ಯೋತಿಯನ್ನು ಕ್ರೀಡಾಳುಗಳಿಗೆ ನೀಡುವ ಮೂಲಕ ಕೆಸರಿನ ಆಟಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಕೆಸರಿನ ಗದ್ದೆಯಲ್ಲಿ ತುಳುನಾಡಿನ ಹಲವು ರೀತಿಯ ಆಟಗಳು, ಕ್ರೀಡೆಗಳು, ನೃತ್ಯಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ರಶ್ಮಿತಾ ಆರ್‌. ಶೆಟ್ಟಿ ಪಾವಳಗುತ್ತು ಪ್ರಾರ್ಥನೆ ಹಾಡಿದರು. ಕಿರಣ್‌ಕುಮಾರ್‌ ಕುರ್ಮಾನು ಸ್ವಾಗತಿಸಿ, ಪ್ರಭಾವತಿ ಶೆಟ್ಟಿ ಪಾವಳಗುತ್ತು ವಂದಿಸಿದರು. ದೇವಿಪ್ರಸಾದ್‌ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. 

ಆಡಿದರು…ಕುಣಿದರು…ಹೊರಳಾಡಿದರು…
ನಿಸರ್ಗದ ಮಡಿಲಾದ ಕೆಸರಲ್ಲಿ ನಲಿದು ಕುಪ್ಪಳಿಸಿದ ದೃಶ್ಯವು ಆರೋಗ್ಯವನ್ನು ಮುದಗೊಳಿಸುವ ರಹದಾರಿಯೇ ಎಂಬಂತೆ ಭಾಸವಾಗುತ್ತಿತ್ತು. ಜಾತಿ, ಮತ, ಪಂಗಡ, ಧರ್ಮವನ್ನು ಮರೆತು ಎಲ್ಲರೊಂದಿಗೆ ಬೆರೆತು ವೀಕ್ಷಕರು ಮತ್ತು ಪ್ರೇಕ್ಷಕರು ತೋರಿದ ಸಹಕಾರ ಹಾಗೂ ಬಂಟರು ಸ್ವಾಗತಿಸಿದ ಕ್ರಮ ನಿಜಕ್ಕೂ ವರ್ತಮಾನದಲ್ಲಿ ಹೊಸ ಸಾಮರಸ್ಯಕ್ಕೆ ನಾಂದಿ ಹಾಡುವಂತಿತ್ತು. 

ವಿಜಯಕ್ಕನ ಪಾಡ್ದನ, ಬಂಟರ ವಾಲಿಬಾಲ್‌, ಕಬಡ್ಡಿ , ಮಹಿಳೆಯರ ಪಿರಮಿಡ್‌ ನಿರ್ಮಾಣದ ಚಾಕಚಕ್ಯತೆ, ಮಲ್ಲಿಗೆ ಮುಡಿದ ಮಹಿಳೆಯರ ಕೆಸರಿನ ನಾಟ್ಯ, ಎಟ್ಟಿ ಚಟ್ನಿಯ ಊಟ, ಸಜ್ಜಿಗೆ ಬಜಿಲ್‌ನೊಂದಿಗೆ ಚಹಾ, ದಿನಪೂರ್ತಿ ಕೃತಕ ವರ್ಷಧಾರೆ, ಸಮಬಲವನ್ನು ಕಾಯ್ದುಕೊಳ್ಳುವ ಹಗ್ಗಜಗ್ಗಾಟದ ಜಿದ್ದಾಜಿದ್ದಿನ ಹೋರಾಟ ಇವೆಲ್ಲವೂ ಪಾವಳದ ಕೆಸರಿನ ಗದ್ದೆಯಲ್ಲಿ ನೂತನ ಮಾಯಾಲೋಕವನ್ನೇ ಸೃಷ್ಟಿಸಿದೆ ಎಂಬುದು ಸೋಜಿಗವಾದರೂ ಸತ್ಯ.

ಕೂಟದ ಸಮ್ಮಾನಿತೆ, ತುಳುವ ಸಿರಿ ಖ್ಯಾತಿಯ ಆದ್ವಿಕಾ ಶೆಟ್ಟಿ, ದೀಪಕ್‌ ರೈ ಪಾಣಾಜೆ, ಆಸ್ತಿಕಾ ಅವಿನಾಶ್‌ ಶೆಟ್ಟಿ ಮುಂತಾದ ತಾರೆಯರ ಕೆಸರಿನಾಟ ಮೊದಲಾದವು ಪಾವಳದ ಕೆಸರಿನ ಮಣ್ಣಿನಲ್ಲಿ ಹೊಸದೊಂದು ತಾರಾಲೋಕವನ್ನೇ ಸೃಷ್ಟಿಸಿದಂತಿತ್ತು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮವು ನೂತನ ಕಳೆಯೊಂದಕ್ಕೆ ಸಾಕ್ಷಿಯಂತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next