Advertisement

ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿ: ಉದ್ಘಾಟನೆಗೆ ಮೊದಲೇ ಬಿರುಕು:

03:35 PM Jun 05, 2017 | Team Udayavani |

ಶಿರ್ವ: ಆತ್ರಾಡಿ – ಶಿರ್ವ – ಬಜಪೆ ರಾಜ್ಯ ಹೆದ್ದಾರಿಯ ಶಿರ್ವ ನ್ಯಾರ್ಮ ಬಳಿ ಸುಮಾರು 70 ಲ.ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣಗೊಂಡ ಸೇತುವೆಯು ಉದ್ಘಾಟನೆಗೆ ಮೊದಲೇ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು ಅಪಾಯದ ಭೀತಿ ಎದುರಾಗಿದೆ.

Advertisement

ಪ್ರಶ್ನಿಸುವಂತಾಗಿದೆ
ಸೇತುವೆಯ ಕಾಮಗಾರಿ ಮುಗಿದು ಸಂಚಾರಕ್ಕೆ ಅನುವು ಮಾಡಿಕೊಟ್ಟ ಕೇವಲ 15 ದಿನಗಳಲ್ಲಿಯೇ ವಾಹನಗಳ ಓಡಾಟಕ್ಕೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು ಕಾಮಗಾರಿಯ ಗುಣಮಟ್ಟ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಾಗರಿಕರು ಪ್ರಶ್ನಿಸುವಂತಾಗಿದೆ.

ಎಡೆಬಿಡದೆ ಚಲಿಸುತ್ತಿವೆ
ಶಿರ್ವ ಪರಿಸರದಲ್ಲಿ ಹಲವಾರು ವಿದ್ಯಾಸಂಸ್ಥೆಗಳಿದ್ದು ದಿನವೊಂದಕ್ಕೆ ಸಾವಿರಾರು ಘನ ಹಾಗೂ ಲಘು ವಾಹನಗಳು ಈ ಸೇತುವೆಯಲ್ಲಿ ಎಡೆಬಿಡದೆ ಚಲಿಸುತ್ತಿವೆ. ವಾಹನಗಳೊಂದಿಗೆ ಸಾರ್ವಜನಿಕರು ಮತ್ತು ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಓಡಾಡುತ್ತಿದ್ದಾರೆ. ತಿಂಗಳುಗಳ ವರೆಗೆ ಮರ ಹಾಗೂ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸದೇ ಇದ್ದು ಉದಯವಾಣಿಯ ವರದಿಯಿಂದಾಗಿ ತರಾತುರಿಯಲ್ಲಿ ಸೇತುವೆಯ ಇಕ್ಕೆಲದ ಕಾಮಗಾರಿಯನ್ನು ಮುಗಿಸಲಾಗಿತ್ತು. ಮೊದಲ ಮಳೆಗೇ ಮಣ್ಣು ಸಿಂಕ್‌ ಆಗಿ ವಾಹನಗಳು ಸೇತುವೆಯ ಮೇಲೆ ಬರುವಾಗ ಜರ್ಕ್‌ ಹೊಡೆದು ಬಿರುಕು ಬಿಡುವ ಸಾಧ್ಯತೆ ಇದೆ.

ಬ್ರಿಟಿಷರ ಕಾಲದ ಸೇತುವೆ ಇತ್ತು
ಈ ಹಿಂದೆ ಇದೇಜಾಗದಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದಿದ್ದು  ಹೊಸ ಸೇತುವೆಯ ನಿರ್ಮಿಸುವಾಗ ಅದನ್ನು ಒಡೆದು ಹಾಕಲು ಗುತ್ತಿಗೆದಾರರಿಗೆ ತಿಂಗಳೇ ಬೇಕಾಗಿದೆ ಎಂಬುದನ್ನು ಇಲ್ಲಿ ಸ್ಮರಿಬಹುದು. ಆದರೆ  ಹೊಸ ಸೇತುವೆಯ ಕಾಮಗಾರಿ ನಡೆದು ಸಂಚಾರಕ್ಕೆ ಬಿಟ್ಟುಕೊಟ್ಟ ಕೆಲ ದಿನದಲ್ಲಿಯೇ ಬಿರುಕು ಬಿಟ್ಟಿದ್ದು ಕಾಮಗಾರಿಯ ಉತ್ಕೃಷ್ಟತೆಯನ್ನು ಜನ ಪ್ರಶ್ನೆ ಮಾಡುವಂತಾಗಿದೆ. 

ಮಣ್ಣು ಕುಸಿಯುವ ಭೀತಿ
ಸೇತುವೆಯ ಇಕ್ಕೆಲದಲ್ಲಿ ಮಣ್ಣು ತುಂಬಿಸಿದ್ದು ತಡೆಗೋಡೆ ನಿರ್ಮಿಸದೇ ಇರುವುದರಿಂದಾಗಿ ಮಳೆಗಾಲದಲ್ಲಿ ಮಣ್ಣು ಕುಸಿಯುವ ಭೀತಿಯೂ ಎದುರಾಗಿದೆ.

Advertisement

ನಿಯಮವನ್ನು ಗಾಳಿಗೆ ತೂರಿ ಕಾಮಗಾರಿ
ರಾಜ್ಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸುವಾಗ ಆದಷ್ಟು ನೇರವಾಗಿ ರಸ್ತೆ ನಿರ್ಮಿಸುವುದು ಕ್ರಮ. ಆದರೆ ಇಲ್ಲಿ ಸರಕಾರಿ ಜಾಗವಿದ್ದರೂ ನಿಯಮವನ್ನು ಗಾಳಿಗೆ ತೂರಿ ಇಲಾಖೆಯವರು/ಗುತ್ತಿಗೆದಾರರು ಓರೆಕೋರೆಯಾಗಿ ಹೆದ್ದಾರಿ ರಸ್ತೆಯನ್ನು ನಿರ್ಮಿಸಿದ್ದಾರೆ. ಅಸಮರ್ಪಕ ರಾಜ್ಯ ಹೆದ್ದಾರಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಸಾರ್ವಜನಿಕರ ತೆರಿಗೆ ಹಣ ಪೋಲು
ಕಳಪೆ ಕಾಮಗಾರಿಯಿಂದ ಕಾಮಗಾರಿ ಮುಗಿದ ಕೆಲ ದಿನಗಳಲ್ಲಿಯೇ ಸೇತುವೆ ಬಿರುಕು ಬಿಟ್ಟಿರುವುದು ಬೇಸರದ ವಿಷಯ. ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ಖೇದಕರ . ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಾಮಗಾರಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡರೆ ಉತ್ತಮ.  ಎಂದು ಅನಿವಾಸಿ ಭಾರತೀಯ ಉದ್ಯಮಿ ರಿಚರ್ಡ್‌ ಪೌಲ್‌ ಫೆರಾವೋ ಶಿರ್ವ ಅವರು ಆರೋಪಿಸಿದ್ದಾರೆ.

– ಸತೀಶ್ಚಂದ್ರ ಶೆಟ್ಟಿ ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next