ಎಷ್ಟೇ ಅನ್ಯೋನ್ಯತೆಯ ಸಂಸಾರವಾದರೂ, ಅಲ್ಲಿ ಗಂಡ-ಹೆಂಡತಿ ನಡುವೆ ಒಂದಷ್ಟು ಸಮಸ್ಯೆ, ಭಿನ್ನಾಭಿಪ್ರಾಯ, ಪರ-ವಿರೋಧ ಚರ್ಚೆ, ಮಾತುಕಥೆ ಇದ್ದೇ ಇರುತ್ತದೆ. ಹಾಗಂದ ಮಾತ್ರಕ್ಕೆ, ಹೀಗಿರುವ ಸಂಸಾರಗಳಲ್ಲಿ ಸಂಬಂಧಗಳು ಸರಿಯಾಗಿರದು ಎಂದು ಹೇಳಲಾಗದು. ಗಂಡ-ಹೆಂಡಿ ನಡುವೆ ಎಂಥದ್ದೇ ಭಿನ್ನಾಭಿಪ್ರಾಯ, ಮನಸ್ತಾಪ, ಬೇಧ-ಭಾವಗಳಿದ್ದರೂ ಅದನ್ನು ಮುಂದುವರೆಸಿಕೊಂಡು ಹೋಗಬಾರದು ಎಂಬುದು ಹಿರಿಯರ ಕಿವಿಮಾತು. “ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ’ ಎಂಬ ಮಾತು ಅದೆಲ್ಲದಕ್ಕೂ ಉತ್ತರ! ಆದರೆ ಅದೆಷ್ಟು ಸಂಸಾರದಲ್ಲಿ ಈ ಉತ್ತರವೇ ಪರಿಹಾರವಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ಅಥಿ ಐ ಲವ್ ಯು’ ಸಿನಿಮಾದ ಕಥೆಯ ಒಂದು ಎಳೆ.
ಗಂಡ-ಹೆಂಡತಿ ಜಗಳದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ, ಒಂದಷ್ಟು ಪರರ ಮಾತುಗಳು ಆಫೀಸಿಗೆ ಹೋದ ಗಂಡನನ್ನು ಮನೆಗೆ ಬರುವಂತೆ ಮಾಡುತ್ತದೆ. ಮಟ ಮಟ ಮಧ್ಯಾಹ್ನ ಗಂಡ-ಹೆಂಡತಿ ಮುಖಾಮುಖೀಯಾಗುವಂತೆ ಮಾಡುತ್ತದೆ. ಇಬ್ಬರ ಜಗಳ ಮುಂದೇನಾಗುತ್ತದೆ ಎಂಬುದೇ “ಅಥಿ ಐ ಲವ್ ಯು’ ಸಿನಿಮಾದ ಕ್ಲೈಮ್ಯಾಕ್ಸ್. ಬೆಳಗ್ಗೆ ಹೆಂಡತಿ ಬೇಗನೆ ಮೇಲೆ ಏಳುವುದಿಲ್ಲ ಎಂಬುದರಿಂದ ಕಥೆ ಆರಂಭವಾಗುತ್ತದೆ. ತೀವ್ರ ಭಿನ್ನಾಭಿಪ್ರಾಯದ ಒಂದು ಜೋಡಿಯ ಜೀವನ ದಲ್ಲಿ ಒಂದು ದಿನದಲ್ಲಿ ನಡೆಯುವ ಘಟನಾ ವಳಿಗಳನ್ನು ಆಧರಿಸಿ ಇಡೀ ಸಿನಿಮಾ ಸಾಗುತ್ತದೆ. ಒಂದೇ ದಿನ, ಒಂದೇ ಲೊಕೇಶನ್‌ನಲ್ಲಿ ಕೇವಲ ಎರಡೇ ಎರಡು ಪಾತ್ರಗಳನ್ನು ಇಟ್ಟುಕೊಂಡು ನಟ ಕಂ ನಿರ್ದೇಶಕ ಲೋಕೆಂದ್ರ ಸೂರ್ಯ ಇಡೀ ಸಿನಿಮಾವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ.
ಸಿನಿಮಾದ ಕಥೆ ಮತ್ತು ನಿರೂಪಣೆ ಎರಡೂ ನಿಧಾನವಾಗಿ ಸಾಗುವುದರಿಂದ ಸಾವಧಾನದಿಂದ ಕೂತು ನೋಡಬೇಕಾದ ಅನಿವಾರ್ಯತೆ ಪ್ರೇಕ್ಷ ಕರಿಗೆ ಎದುರಾಗುತ್ತದೆ. ಹಾಗಂತ ಸಾವ ಧಾನದಿಂದ ಕೂತವರಿಗೆ ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶ ಸಿಗುವುದಂತೂ ಖಚಿತ.
ಇನ್ನು ಎರಡೇ ಪಾತ್ರಗಳು ಸಿನಿಮಾದಲ್ಲಿದ್ದು ನಾಯಕ ಲೋಕೇಂದ್ರ ಸೂರ್ಯ, ನಾಯಕಿ ಸಾತ್ವಿಕಾ ಇಬ್ಬರೂ ದಂಪತಿಗಳಾಗಿ ತಮ್ಮ ಪಾತ್ರವನ್ನು ಮನ ಮುಟ್ಟುವಂತೆ ನಿಭಾಯಿಸಿದ್ದಾರೆ. ಯಾವುದೇ ಆಡಂಬರ, ಜಂಜಾಟ, ಅಬ್ಬರದ ಸಂಗೀತ ಇದ್ಯಾವುದೂ ಇಲ್ಲದೆ ತಾಳ್ಮೆಯಿಂದ ಕೂತವರಿಗೆ “ಅಥಿ’ ನಿಧಾನವಾಗಿಯಾದರೂ ಮನಮುಟ್ಟುತ್ತದೆ.
ಜಿ.ಎಸ್. ಕಾರ್ತಿಕ ಸುಧನ್