Advertisement

ಕಾಲಗರ್ಭಕ್ಕೆ ಸೇರಿದ ಅಥಣಿ ಫಾಸಿಕಟ್ಟೆ

04:52 PM Dec 26, 2019 | Naveen |

„ಸಂತೋಷ ರಾ. ಬಡಕಂಬಿ
ಅಥಣಿ:
ಸ್ವಾತಂತ್ರ್ಯಕ್ಕೂ ಮುಂಚೆ ಮುಂಬೈ ಪ್ರಾಂತಕ್ಕೆ ಸೇರಿದ ಅಥಣಿಯಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳಿದ್ದು, ಅವುಗಳೊಂದಿಗೆ ನಗರದ ಜನರ ಗಮನ ಸೆಳೆಯುತ್ತಿದ್ದ ಫಾಸಿಕಟ್ಟೆ ಇತ್ತೀಚೆಗಷ್ಟೇ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಾಶವಾಗಿದ್ದು, ಅದನ್ನು ರಕ್ಷಿಸಬೇಕಿತ್ತು ಎನ್ನುವ ಕಳಕಳಿ ಇದೀಗ ಕೇಳಿ ಬರುತ್ತಿದೆ.

Advertisement

ಅಥಣಿ ಇತಿಹಾಸ ತೆರೆದು ನೋಡಿದಾಗ 1830ರಲ್ಲಿ ಅಥಣಿ ನಗರದಲ್ಲಿ ಅಂಚೆ ಕಚೇರಿ, ಪುರಸಭೆ, ತಹಶೀಲ್ದಾರ್‌ ಕಚೇರಿ, ಸಬ್‌ ರಜಿಸ್ಟ್ರಾರ್‌ ಕಚೇರಿ. ಸರಕಾರಿ ಆಸ್ಪತ್ರೆ ಇವೆಲ್ಲ ಇಲಾಖೆಗಳು ಏಕ ಕಾಲಕ್ಕೆ ಆರಂಭವಾಗಿದ್ದವು. 1861ರಲ್ಲಿ ನ್ಯಾಯಾಲಯ ಕೂಡ ಆರಂಭವಾಗಿದೆ. ಈ ತಹಶೀಲ್ದಾರ್‌ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆ ಮಧ್ಯದ ಸ್ಥಳದಲ್ಲಿಯೇ ಫಾಸಿಕಟ್ಟೆ (ಗಲ್ಲು ಶಿಕ್ಷೆ ನೀಡುವ ಸ್ಥಳ)ಇತ್ತು. ಈಗಲೂ ಈ ಸ್ಥಳಕ್ಕೆ ಫಾಸಿಕಟ್ಟೆ ಎಂದೇ ಕರೆಯುವುದು ರೂಢಿಯಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಗಲಿ ಮತ್ತು ಜತ್ತ ಅಥಣಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಹಾಗೂ ನೆರೆಯ ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಅಥಣಿಯ ಈ ಫಾಸಿಕಟ್ಟೆಗೆ ತಂದು ಇದೇ ಕಟ್ಟೆಯ ಮೇಲೆ ಗಲ್ಲಿಗೆ ಏರಿಸಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ಅಥಣಿ ಫಾಸಿಕಟ್ಟೆಯಲ್ಲಿ ಫಾಸಿ ನೀಡುವುದನ್ನು ನಿಲ್ಲಿಸಿ ಆಯಾ ಸ್ಥಳದಲ್ಲೇ ಗಲ್ಲಿಗೇರಿಸುವ ಕಾರ್ಯ ನಡೆದವು. ಆದರೆ ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಈ ಇತಿಹಾಸ ಪ್ರಸಿದ್ಧ ಫಾಸಿಕಟ್ಟೆಗೆ ರಕ್ಷಣೆ ದೊರೆಯದೇ ನಾಶವಾಗಿ ಹೆಸರಷ್ಟೇ ಉಳಿಯುವಂತಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ ಹೇಗೆ ಹೋರಾಟಕ್ಕೆ ಮೀಸಲಿರುವ ಸ್ಥಳವೋ ಹಾಗೆ ಅಥಣಿಯಲ್ಲಿ ಈ ಸ್ಥಳ ಸ್ಥಳೀಯ ಹೋರಾಟ, ಪ್ರತಿಭಟನೆಗಳಿಗೆ ಕೇಂದ್ರವಾಗಿತ್ತು. ಆದರೆ ಇತ್ತೀಚೆಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಅಥಣಿ ಪಟ್ಟಣದಲ್ಲಿ ಅಗಲೀಕರಣ ಮಾಡುವಾಗ ಈ ಐತಿಹಾಸಿಕ ಫಾಸಿಕಟ್ಟೆ ಒಡೆದು ಹೋಗಿದೆ. ಇದರಿಂದ ಅಂದಿನ ಫಾಸಿಕಟ್ಟೆ ಇಂದು ಇತಿಹಾಸ ಪುಟಗಳಲ್ಲಿ ಲೀನವಾಗಿದೆ.

ಮುಂದಿನ ಪೀಳಿಗೆಗೆ ನಾವು ಅಥಣಿಯ ಇತಿಹಾಸ ಹೇಳುವಾಗ ಈ ಸ್ಥಳದಲ್ಲಿ ಫಾಸಿಕಟ್ಟೆ ಇತ್ತು ಎಂದು ಫೋಟೊ ತೋರಿಸಿ ಹೇಳುವ ಪ್ರಸಂಗ ಎದುರಾಗಿದ್ದು ನಮ್ಮ ಪೀಳಿಗೆಯ ದುರಂತ. ಸಾರ್ವಜನಿಕರು ಹಾಗೂ ನಾಯಕರ ನಿರ್ಲಕ್ಷéದಿಂದ ಇಂದು ಇತಿಹಾಸ ಪ್ರಸಿದ್ಧ ಈ ಸ್ಥಳ ಹಾಳಾಗಿ ಒಡೆದು ಹೋಗಿದ್ದು, ಇನ್ನು ಮುಂದಾದರೂ ನಾವು ಎಚ್ಚೆತ್ತುಕೊಂಡು ಉಳಿದ ಕಚೇರಿಗಳನ್ನಾದರೂ ಉಳಿಸಬೇಕಾಗಿದೆ.
ಪ್ರಶಾಂತ ತೋಡಕರ
ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ

ಇತಿಹಾಸ ಪ್ರಸಿದ್ದ ಫಾಸಿಕಟ್ಟೆ ನಮ್ಮ ನಿರ್ಲಕ್ಷ್ಯದಿಂದ ಆಗಿದೆ. ಸಂಘಟಿತರಾಗಿ ಹೋರಾಡಿ ಆ ಸ್ಥಳದಲ್ಲಿ ಫಾಸಿಕಟ್ಟೆ ಗುರುತಿಗಾಗಿ ಸ್ಥಳವನ್ನು ಕಾಯ್ದಿರಿಸುವಂತೆ ಒತ್ತಾಯಿಸಬೇಕಾಗಿದೆ. ನಮ್ಮ ಅಥಣಿ ಇತಿಹಾಸ ಬಿಂಬಿಸುವ ಈ ಫಾಶಿಕಟ್ಟೆ ನೆನಪು ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ಇಲ್ಲಿ ಒಂದು ಚಿಕ್ಕ ಕಟ್ಟೆ ನಿರ್ಮಾಣ ಮಾಡಬೇಕು ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗುವುದು.
ಅಬ್ದುಲ್‌ ಜಬ್ಬರ ಚಿಂಚಲಿ
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್‌ ಬೆಳಗಾವಿ ಜಿಲ್ಲಾಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next