ಥಾಣೆ: ಮುಂಬೈ-ನವಿ ಮುಂಬೈಯನ್ನು ಸಂಪರ್ಕಿಸುವ ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜನವರಿ 12) ಉದ್ಘಾಟಿಸಿದರು. ಈ ಸೇತುವೆಗೆ ಅಟಲ್ ಸೇತುವೆ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:ಧನುಷ್ ʼCaptain Millerʼ ಗೆ ಫುಲ್ ಮಾರ್ಕ್ಸ್: ಕಾಲಿವುಡ್‌ನಲ್ಲಿ ಮತ್ತೆ ಮಿಂಚಿದ ಶಿವಣ್ಣ
ಅಟಲ್ ಸೇತುವೆ ಒಟ್ಟು 21.08 ಕಿಲೋ ಮೀಟರ್ ಉದ್ದ ಹೊಂದಿದ್ದು, 17, 840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯು ದಕ್ಷಿಣ ಮುಂಬೈ ಮತ್ತು ನವಿ ಮುಂಬೈಯನ್ನು ಸಂಪರ್ಕಿಸಲಿದ್ದು, ಪ್ರಸ್ತುತ ಇರುವ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 15-20 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇತುವೆ ನಿರ್ಮಾಣಕ್ಕಾಗಿ 2016ರ ಡಿಸೆಂಬರ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು ಏಳು ವರ್ಷಗಳ ಬಳಿಕ ದೇಶದ ಉದ್ದನೆಯ ಸಮುದ್ರ ಸೇತುವೆ ನಿರ್ಮಾಣಗೊಂಡಿದೆ.
ಈ ಸೇತುವೆ ಮುಂಬೈ ಮತ್ತು ಅದರ ಉಪನಗರವಾದ ನವಿಮುಂಬೈಗೆ ಸಮುದ್ರದ ಮೇಲ್ಭಾಗದಲ್ಲಿ ಸಂಪರ್ಕ ಕಲ್ಪಿಸಲಿದೆ. ಇದು ಆರು ಪಥದ ಹೆದ್ದಾರಿಯಾಗಿದೆ. ಅಷ್ಟೇ ಅಲ್ಲ ಪುಣೆ, ಗೋವಾ ಸೇರಿದಂತೆ ದಕ್ಷಿಣ ಭಾರತಕ್ಕೆ ಪ್ರಯಾಣಿಸುವವರಿಗೆ ಇದು ಅನುಕೂಲ ಕಲ್ಪಿಸಲಿದೆ.
ಸಮುದ್ರದ ಸೇತುವೆ ಮೇಲೆ ಸಂಚರಿಸಲು ಟೋಲ್ ಕಟ್ಟಬೇಕು. ಒಮ್ಮುಖ ಪ್ರಯಾಣಕ್ಕೆ ವಾಹನಗಳಿಗೆ 250 ರೂಪಾಯಿ ಹಾಗೂ ದ್ವಿಮುಖ ಪ್ರಯಾಣಕ್ಕೆ 375 ರೂಪಾಯಿ ಶುಲ್ಕ ಕಟ್ಟಬೇಕು.