Advertisement
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಈ ಕನಸು ಇಂದು ನನಸಾಗುತ್ತಿದೆ. ಜೈ ಜವಾನ್, ಜೈ ಕಿಸಾನ್ ಘೋಷಣೆಯೊಂದಿಗೆ ಜೈ ವಿಜ್ಞಾನ್ ಎಂಬ ದೂರದರ್ಶಿತ್ವ ಹೊಂದಿದ್ದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.
Related Articles
Advertisement
ಭಾರತದ ಪ್ರಮುಖ ಮಹಾನಗರಗಳನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಹೆದ್ದಾರಿಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ಕಲ್ಪಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಹಳ್ಳಿಹಳ್ಳಿಗೆ ರಸ್ತೆ ಸೌಲಭ್ಯ ಕಲ್ಪಿಸಿದರು. ಆ ಮೂಲಕ ರಸ್ತೆ ಸಂಪರ್ಕ ಜಾಲವನ್ನು ಬಲಪಡಿಸಿದರು.ದೂರಸಂಪರ್ಕ ಕ್ಷೇತ್ರದಲ್ಲಿಯೂ ಹೊಸ ಸುಧಾರಣೆಗಳನ್ನು ಮಾಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದರು. ಸರ್ವ ಶಿಕ್ಷಣ ಅಭಿಯಾನ, ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಮಹತ್ವದ ಯೋಜನೆಯಾಗಿತ್ತು. ಅವರ ಜನ್ಮದಿನವನ್ನು”ಸುಶಾಸನ ದಿವಸ’ ಎಂದು ಆಚರಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ನನ್ನ ರಾಜಕೀಯ ಬದುಕಿನಲ್ಲಿಯೂ ಅವರನ್ನು ಆದರ್ಶ ವ್ಯಕ್ತಿಯಾಗಿ ಕಂಡಿದ್ದೇನೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಮೊದಲ ಬಾರಿಗೆ ಹೊಸದಿಲ್ಲಿಗೆ ತೆರಳಿದಾಗ ನನ್ನ ಮೊದಲ ಭೇಟಿ ಇದ್ದುದ್ದು ಅವರ ಸ್ಮಾರಕ “ಸದೈವ ಅಟಲ್’ಗೆ. ಸರಕಾರದ ಯೋಜನೆಗಳ ಆಶಯಗಳು ಈಡೇರಿದಾಗ, ಪರಿಣಾಮಕಾರಿಯಾಗಿ ಜನರನ್ನು ತಲುಪಿದಾಗ, ಆಡಳಿತ ಉತ್ತಮವಾಗಿದೆ ಎಂಬುದು ಸ್ವಯಂ ವೇದ್ಯವಾಗುತ್ತದೆ. ನಿಗದಿತ ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನ, ತುರ್ತು ಸಂದರ್ಭಗಳಲ್ಲಿ ಸಕಾಲದಲ್ಲಿ ಜನರ ನೆರವಿಗೆ ಧಾವಿಸುವುದು, ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಆಡಳಿತದ ಲಕ್ಷಣಗಳು. ಈ ನಿಟ್ಟಿನಲ್ಲಿ ನಮ್ಮ ಸರಕಾರವೂ ಉತ್ತಮ ಆಡಳಿತ ನೀಡಲು ಸರ್ವ ಪ್ರಯತ್ನಗಳನ್ನೂ ಮಾಡಿದೆ. ಆರ್ಥಿಕ ಶಿಸ್ತು, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ, ಜನಸ್ನೇಹಿ ಆಡಳಿತ, ಮಾನವೀಯತೆ, ಸ್ಪಂದನಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ಸರಕಾರ ಮಾಡಿದೆ. ಅಟಲ್ ಜೀ ಅವರ ಆದರ್ಶ ಪಾಲನೆಯನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡಿದ್ದೇವೆ. ಅಟಲ್ ಜೀ ಅವರಿಗೆ ಅವರೇ ಸಾಟಿ. ಭಾರತೀಯ ಜನಸಂಘದಲ್ಲಿ ಸಕ್ರಿಯರಾಗಿದ್ದು, ಅನಂತರ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷವನ್ನು ಅವರು ಮುನ್ನಡೆಸಿದ ಪರಿ ಅನನ್ಯವಾದುದು. ಅವರು ಕವಿ ಹೃದಯ, ಮುತ್ಸದ್ದಿತನ ಹಾಗೂ ಚಿಂತನಶೀಲತೆಯ ಅಪೂರ್ವ ಸಂಗಮವೇ ಸರಿ. ಅವರ ನೇತೃತ್ವದಲ್ಲಿ ವಿಜ್ಞಾನ, ತಂತ್ರಜ್ಞಾನ, ಮೂಲಸೌಲಭ್ಯ, ಆರ್ಥಿಕತೆಯಲ್ಲಿ ಭಾರತ ಹೊಸ ಮೈಲುಗಲ್ಲನ್ನೇ ಕ್ರಮಿಸಿತು. ಇದೀಗ ಪ್ರಧಾನಿ ನರೇಂದ್ರ ಮೋದಿಜಿ ಅವರು ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ವಿಶ್ವಶ್ರೇಷ್ಠ ಭಾರತದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಅಟಲ್ ಜೀ ಅವರ ಕನಸುಗಳನ್ನು ನನಸಾಗಿಸುತ್ತಿದ್ದಾರೆ. ಅವರ ಜನ್ಮದಿನವನ್ನು ಸುಶಾಸನ ದಿನವೆಂದು ಆಚರಿಸಲಾಗುತ್ತದೆ. ಆದರೆ ಸುಶಾಸನ ನಮ್ಮ ದಿನನಿತ್ಯದ ಮಂತ್ರವಾದಾಗ ಅದು ಸಾರ್ಥಕವಾಗುತ್ತದೆ. ಅಟಲ್ ಜೀ ಅವರ ಜನ್ಮದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು!! -ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ, ಕರ್ನಾಟಕ