ಬೆಂಗಳೂರು : ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆಯಡಿ ರಾಜ್ಯದ ಪ್ರಗತಿಗೆ ವಿಶ್ವ ಬ್ಯಾಂಕ್ ಹಾಗೂ ರಾಷ್ಟ್ರೀಯ ಯೋಜನಾ ನಿರ್ವಹಣಾ ಘಟಕ(ಎನ್‍ಪಿಎಂಯು)ವು ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯವು ಇನ್ನುಳಿದ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದೆ.
ಕೇಂದ್ರ ಸರ್ಕಾರದ ಅಟಲ್ ಭೂಜಲ ಯೋಜನೆಯನ್ನು ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದ್ದು, ಜಿಲ್ಲೆಯ ಆರು ತಾಲೂಕುಗಳ 199 ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಯೋಜನೆಯ ಮಾರ್ಗಸೂಚಿಯಂತೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಮಾಹಿತಿ ಸಂಗ್ರಹ, ಜಲಭದ್ರತಾ ಯೋಜನೆಯ ಸಿದ್ಧತೆ ಹಾಗೂ ಇನ್ನಿತರ ಪ್ರಾಥಮಿಕ ಚಟುವಟಿಕೆಗಳನ್ನು ಕೈಗೊಂಡಿದೆ.
ಮಧುಗಿರಿ ತಾಲೂಕಿನ ದಬ್ಬೆಗಟ್ಟ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿಪುರ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ವಿಸ್ತೃತವಾದ ಜಲ ಆಯವ್ಯಯ (Water Budget) ಜಲಭದ್ರತಾ ಯೋಜನೆ ( Water Security Plan) ಸಿದ್ಧಪಡಿಸಲು ವಿಶ್ವಬ್ಯಾಂಕ್ ಮತ್ತು ರಾಷ್ಟ್ರೀಯ ಯೋಜನಾ ನಿರ್ವಹಣಾ ಘಟಕವು ಆಯ್ಕೆ ಮಾಡಿದ್ದು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಜಲಭದ್ರತಾ ಯೋಜನೆಯನ್ನು ಕಳುಹಿಸಿ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಪ್ರೋತ್ಸಾಹ ಧನವನ್ನು ಹೆಚ್ಚುವರಿಯಾಗಿ ತುಮಕೂರು ಜಿಲ್ಲೆಗೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.