ಮೈಸೂರು: ನಗರದ ಮೈಸೂರು-ಹುಣಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಿನಕಲ್ ಜಂಕ್ಷನ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ನಿರ್ಮಾಣ ಕಾಮಗಾರಿಯನ್ನು ದಸರಾ ವೇಳೆಗೆ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಂಸದ ಪ್ರತಾಪ ಸಿಂಹ ಸೂಚಿಸಿದರು.
ಕೇಂದ್ರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ವತಿಯಿಂದ ನಿರ್ಮಿಸಿರುವ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಕಾಮಗಾರಿ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲಿಸಿದರು. ಈ ವೇಳೆ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಳೆದ 2016ರಲ್ಲಿ ಕೈಕೊಂಡಿರುವ ಕಾಮಗಾರಿ ಈಗಾಗಲೇ ಪೂರ್ಣವಾಗಬೇಕಿತ್ತು.
ಕಾಮಗಾರಿ ವಿಳಂಬದಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತುರ್ತಾಗಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಕಾರ್ಯಪಾಲಕ ಅಭಿಯಂತರ ಸುರೇಶ್ ಬಾಬು, ಬಹುತೇಕ ಕೆಲಸ ಮುಗಿದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು.
ದಸರಾ ವೇಳೆಗೆ ಪೂರ್ಣ: ನಗರದಲ್ಲಿರುವ 42 ಕಿ.ಮೀ ರಿಂಗ್ ರಸ್ತೆಯನ್ನು ಮುಡಾದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಹೀಗಾಗಿ ರಿಂಗ್‌ರಸ್ತೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮೊದಲ ಹಂತವಾಗಿ 177 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದೆ.
ನಗರದ ಜಂಕ್ಷನ್‌ನಲ್ಲಿ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಗ್ರೇಡ್ ಸೆಪರೇಟರ್ ಕಾಮಗಾರಿ ಇದೀಗ ಫ್ಲೈಓವರ್ ಆಗಿ ಬದಲಾಗಿದೆ. ಅಂದಾಜು 19.83 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ನಿರ್ಮಿಸುತ್ತಿರುವ ಕಾಮಗಾರಿ ದಸರಾ ವೇಳೆಗೆ ಕೆಲಸ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಬಾರ್‌ಗಳ ತೆರವಿಗೆ ಕ್ರಮ: ರಿಂಗ್‌ರಸ್ತೆಯ ಸರ್ವೀಸ್ ರಸ್ತೆಯ ಅಕ್ಕಪಕ್ಕದಲ್ಲಿ ನೆಡಲಾಗಿರುವ ಸಸಿಗಳ ಮೇಲೆ ಲಾರಿ ನಿಲ್ಲಿಸಲಾಗುತ್ತಿದ್ದು, ಜತೆಗೆ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಬಾರ್‌ಗಳಿಗೆ ಸುಪ್ರೀಂಕೋರ್ಟ್ ನಿಷೇಧದ ಹಿನ್ನೆಲೆಯಲ್ಲಿ ರಿಂಗ್‌ರಸ್ತೆಯುದ್ದಕ್ಕೂ ಬಾರ್‌ಗಳು ತೆರೆದಿರುವುದರಿಂದ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ.
ಹೀಗಾಗಿ ರಿಂಗ್‌ರಸ್ತೆಯಲ್ಲಿರುವ ಬಾರ್‌ಗಳನ್ನು ಶೀಘ್ರ ತೆರವುಗೊಳಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಮುಂದಾಗಬೇಕೆಂದರು. ಮುಡಾ ಎಇಇ ಸತೀಶ್, ಕಾಮಗಾರಿ ಗುತ್ತಿಗೆದಾರ ಜೈನ್ ಇನ್ನಿತರರು ಹಾಜರಿದ್ದರು.