Advertisement

ಅದಾಲತ್‌ನಲ್ಲಿ ಹತ್ತಾರು ವರ್ಷಗಳ ಸಮಸ್ಯೆಗೆ ಪರಿಹಾರ

12:04 PM Nov 30, 2018 | Team Udayavani |

ಮೈಸೂರು: ಪ್ರಾಧಿಕಾರದ ಕೆಲಸಗಳಲ್ಲಿ ಅನಗತ್ಯ ವಿಳಂಬದಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌, ಗುರುವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅದಾಲತ್‌ ನಡೆಸಿದರು.

Advertisement

ಕಳೆದ 10, 15 ವರ್ಷಗಳಿಂದ ಬಾಕಿ ಉಳಿದಿದ್ದ ಸಮಸ್ಯೆಗಳ ಪೈಕಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರು, ಕೆಲ ಸಮಸ್ಯೆಗಳನ್ನು ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿಟ್ಟು ಇತ್ಯರ್ಥಪಡಿಸುವಂತೆ ಸೂಚಿಸಿದರು. ಕಾನೂನಾತ್ಮಕ ಸಮಸ್ಯೆಗಳಿರುವ ಪ್ರಕರಣಗಳನ್ನು ಸರ್ಕಾರಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

203 ಅರ್ಜಿ: ಮುಡಾ ಅದಾಲತ್‌ಗಾಗಿ ವಲಯ ಕಚೇರಿಗಳಲ್ಲಿ 132, ನಗರ ಯೋಜನಾ ಶಾಖೆಯಲ್ಲಿ 7, ಭೂಸ್ವಾಧೀನ ಶಾಖೆಯಲ್ಲಿ 30, ತಾಂತ್ರಿಕ ಶಾಖೆಯಲ್ಲಿ 29 ಹಾಗೂ ಇತರೆ 5 ಸೇರಿದಂತೆ ಒಟ್ಟು 203 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ 189 ಅರ್ಜಿಗಳಿಗೆ ಪರಿಹಾರ ಸೂಚಿಸಲಾಯಿತು.

14 ಅರ್ಜಿಗಳನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ನಿರ್ಣಯ ಕೈಗೊಳ್ಳಲು ತಿಳಿಸಲಾಯಿತು. ಅರ್ಜಿ ಸಲ್ಲಿಸಿದವರ ಪೈಕಿ ಮೊದಲ ಹಂತದಲ್ಲಿ 50 ಜನರಿಗೆ ಅದಾಲತ್‌ನಲ್ಲಿ ಟೋಕನ್‌ ನೀಡಿ, ಸರದಿಯ ಪ್ರಕಾರ ಈ 50 ಮಂದಿಯ ಅಹವಾಲು ಆಲಿಸಿದ ಸಚಿವರು, ಪರಿಹಾರ ಸೂಚಿಸಿದರು.

ಸಚಿವರಿಗೆ ಮನವರಿಕೆ: ಬದಲಿ ನಿವೇಶನ ಕೋರಿ ಅರ್ಜಿ, ತುಂಡು ಜಾಗ ಮಂಜೂರಾತಿ, ಕ್ರಯಪತ್ರ, ಖಾತೆ ವರ್ಗಾವಣೆ, ಹಕ್ಕುಪತ್ರ, ಸ್ವಾಧೀನ ಪತ್ರ, ನಿವೇಶನ, ಮನೆ ಕಂದಾಯ ನಿಗದಿ, ಗುತ್ತಿಗೆ ನವೀಕರಣ, ಭೂಸ್ವಾಧೀನ ಪರಿಹಾರ ,ಪ್ರೋತ್ಸಾಹಕ ನಿವೇಶನ ಕೋರಿಕೆ ಹಾಗೂ ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ದುರಸ್ತಿ, ಒಳ ಚರಂಡಿ ನಿರ್ಮಾಣ, ವಿದ್ಯುತ್‌ ಸಂಪರ್ಕ, ಬೀದಿ ದೀಪಗಳ ಅಳವಡಿಕೆ ಕಾಮಗಾರಿ ವಿಳಂಬ ಇತ್ಯಾದಿ ಸಮಸ್ಯೆಗಳನ್ನು ಸಾರ್ವಜನಿಕರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

Advertisement

ಕ್ರಿಮಿನಲ್‌ ಕೇಸ್‌ ದಾಖಲಿಸಿ: ಎಸ್‌ಬಿಎಂ ಲೇಔಟ್‌ ನಿರ್ಮಾಣ ಮಾಡಿರುವ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಸಂಘವನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಂಘದಿಂದ ನಿಯಮಾವಳಿ ಉಲ್ಲಂ ಸಿ ಮಂಜೂರು ಮಾಡಿರುವ ಸಿಎ ನಿವೇಶನದಲ್ಲಿ ಮನೆ ಕಟ್ಟಲು ಬಿಟ್ಟರೆ, ರಾಜ್ಯದ ಎಲ್ಲಾ ಕಡೆಯೂ ಸಿಎ ನಿವೇಶನದಲ್ಲಿ ಮನೆಕಟ್ಟಲು ಅವಕಾಶ ಕೊಡಬೇಕಾಗುತ್ತದೆ. ಇದು ಕ್ರಿಮಿನಲ್‌ ಅಪರಾಧ. ಸಿಎ ನಿವೇಶನ ಹಾಗೂ ಉದ್ಯಾನವನವನ್ನು ಖಾತೆ ಮಾಡಬೇಡಿ, ಈ ಪ್ರಕರಣದಲ್ಲಿ 1998ರಲ್ಲಿ ಖಾತೆ ಮಾಡಿಕೊಟ್ಟಿರುವ ಮುಡಾ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಸಾರ್ವಜನಿಕರ ತರಾಟೆ: ಇದಕ್ಕೂ ಮುನ್ನ ಮುಡಾ ಅದಾಲತ್‌ಗೆ ಚಾಲನೆ ನೀಡಿದ ಸಚಿವ ಯು.ಟಿ.ಖಾದರ್‌ ಹಾಗೂ ಜಿ.ಟಿ.ದೇವೇಗೌಡ ಅವರು ವೇದಿಕೆಯಿಂದ ತರಾತುರಿಯಲ್ಲಿ ಹೊರಟಿದ್ದನ್ನು ಕಂಡ ಸಾರ್ವಜನಿಕರು ಇಬ್ಬರೂ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು. ಕುರುಬಾರಹಳ್ಳಿ ಸರ್ವೇ ನಂಬರ್‌ 4ರ ಸಮಸ್ಯೆ ಇದೆ. ಅದಾಲತ್‌ಗೆ ಅರ್ಜಿಕೊಟ್ಟು ನಾವು ಕಾದು ಕುಳಿತಿದ್ದೇವೆ. ಅಧಿಕಾರಿಗಳಿಗಿಂತ ಮಂತ್ರಿಗಳೇ ಅರ್ಜೆಂಟ್‌ನಲ್ಲಿದ್ದಂತಿದೆ. ಕಾಟಾಚಾರಕ್ಕೆ ಅದಾಲತ್‌ ಮಾಡುತ್ತಿದ್ದೀರಾ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಅರ್ಜಿ ಕೊಡಿ: ನಿಮ್ಮ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ನಾವು ಬಂದಿರುವುದು, ನಿಮ್ಮಷ್ಟೇ ಕಾಳಜಿ ನಮಗೂ ಇದೆ. ಜನರ ಬಗ್ಗೆ ಕಾಳಜಿ ಇರುವುದಕ್ಕೇ ನಮ್ಮನ್ನು ಜನ ಆರಿಸಿ ಕಳುಹಿಸಿದ್ದಾರೆ. ನಿಮ್ಮ ವಿಚಾರ ಗೊತ್ತಿರಲಿಲ್ಲ. ಬರವಣಿಗೆಯಲ್ಲಿ ಅರ್ಜಿ ಕೊಡದೆ, ಬಾಯಲ್ಲಿ ಹೇಳಿ ಹೋದರೆ ಸಮಸ್ಯೆ ಬಗೆಹರಿಯಲ್ಲ. ಅಷ್ಟೆಲ್ಲಾ ನೆನಪಿಟ್ಟುಕೊಳ್ಳುವಂತಿದ್ದರೆ ನಾನೂ ಐಎಎಸ್‌ ಅಧಿಕಾರಿ ಆಗಿಬಿಡುತ್ತಿದ್ದೆ ಎಂದು ಸಮಜಾಯಿಷಿ ನೀಡಿದ ಸಚಿವ ಯು.ಟಿ.ಖಾದರ್‌, ಇಡೀ ದಿನ ಕುಳಿತು ಸಮಸ್ಯೆ ಆಲಿಸಿ, ಪರಿಹಾರ ಸೂಚಿಸಿದರು.

ಎಲ್ಲ ಸಮಸ್ಯೆಗಳನ್ನು ಸಚಿವರೇ ಬಗೆಹರಿಸಬೇಕಾ?: ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮಂತ್ರಿಗಳು ಬಂದು ಕೂರಬೇಕಾ? ಅಧಿಕಾರಿಗಳು ಏನು ಮಾಡುತ್ತೀರಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತರಾಟೆಗೆ ತೆಗೆದುಕೊಂಡರು. ವಿದ್ಯಾರಣ್ಯಪುರಂನಲ್ಲಿ 30-50 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿರುವ ಮೀನಾಕ್ಷಿ ಎಂಬುವವರು ಮೂಲ ಕ್ರಯಪತ್ರ ಕೋರಿ ಅರ್ಜಿ ಸಲ್ಲಿಸಿದರೆ,

ಮುಡಾದಲ್ಲಿ ದಾಖಲಾತಿ ಇಲ್ಲ ಎಂದು ಹಿಂಬರಹ ನೀಡಲಾಗಿದೆ. ಕಚೇರಿಯಲ್ಲಿ ದಾಖಲಾತಿ ಇಲ್ಲ ಅಂದರೆ ಅರ್ಥವೇನು? ತಮಾಷೆ ಮಾಡ್ತೀರಾ, ನಿಮ್ಮಲ್ಲೇ ದಾಖಲಾತಿ ಸರಿಯಾಗಿ ಇಟ್ಟುಕೊಳ್ಳದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡ ಅವರು, 2 ತಿಂಗಳಲ್ಲಿ ಇವರ ಸಮಸ್ಯೆ ಪರಿಹರಿಸಿ, ಮುಡಾ ರೆಕಾರ್ಡ್‌ ರೂಂ ಜವಾಬ್ದಾರಿ ಹೊಂದಿರುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next