ನಂಜನಗೂಡು: ಕಳಲೆ ಕೇಶವಮೂರ್ತಿ ರಾಜೀನಾಮೆಯೊಂದಿಗೆ ತಾಲೂಕು ಜೆಡಿಎಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಮೊದಲಿಗೆ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಅವರಿಗೆ ಕೇಶವ ಮೂರ್ತಿ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪಟ್ಟಣದ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯರೂ ಆದ ಮಂಜುನಾಥ್ ಮತ್ತು ಬೆಂಬಲಿಗರು ಬುಧವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರು.
ಇದರ ಬೆನ್ನಲ್ಲೇ ತಾಲೂಕು ಘಟಕದ ಅಧ್ಯಕ್ಷರಾಗಿ ಆರ್.ವಿ. ಮಹದೇವಸ್ವಾಮಿ ಅಧಿಕಾರ ವಹಿಸಿಕೊಂಡರು. ಪಕ್ಷದ ಕಾರ್ಯಾಲಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಕಾರ್ಯ ಕರ್ತರ ಸಮ್ಮುಖದಲ್ಲಿ ಮಹದೇವಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ನರಸಿಂಹಸ್ವಾಮಿ, ಕೇಶವಮೂರ್ತಿ ಅವರ ಈ ನಿಲುವನ್ನು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರಾಗಲೀ, ಎಚ್.ಡಿ. ಕುಮಾರಸ್ವಾಮಿ ಬೆಂಬಲಿಸಿರಲಿಲ್ಲ ಎಂದರು.
ಕಳಲೆ ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ವರಿಷ್ಠರು ತೀರ್ಮಾನಿಸಿದ್ದರು. ಒಂದು ವೇಳೆ ಚುನಾವಣೆಯಲ್ಲಿ ಏರುಪೇರಾದರೆ, ವಿಧಾನ ಪರಿಷತ್‌ಗೆ ಕಳುಹಿಸುವ ಸಂಕಲ್ಪ ಮಾಡಿದ್ದರು. ಆದರೆ, ಇದೀಗ ಅವರು ಏಕಾಏಕಿ ಪಕ್ಷದಿಂದ ಹೊರ ನಡೆದಿರುವುದು ಆಘಾತ ವನ್ನುಂಟು ಮಾಡಿದೆ. ಏನೇ ಆಗಲಿ ತೆನೆ ಇಳಿಸಿ, ಕೈ ಹಿಡಿಯುತ್ತಿರುವ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಅಭ್ಯರ್ಥಿಗಳಿಗೆ ಕೊರತೆಯಿಲ್ಲ: ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಬರವಿಲ್ಲ. ಈಗಾಗಲೇ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮುಖಂಡರ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ನಗರಸಭೆ ಸದಸ್ಯ ಮಂಜುನಾಥ್ ಹಾಗೂ ಬೆಂಬಲಿಗರ ಕುರಿತು ಪ್ರತಿಕ್ರಿಯಿಸಿದ ನರಸಿಂಹಸ್ವಾಮಿ, ಅವರು ಪಕ್ಷದ ಗುರುತಿನ ಮೇಲೆ ಗೆದ್ದು ಬಂದಿದ್ದಾರೆ. ಪಕ್ಷವೇ ಬೇಡ ಎಂದ ಮೇಲೆ ಅದರಿಂದ ದೊರೆತಿರುವ ಅಧಿಕಾರವೇಕೆ ಬೇಕು. ನೈತಿಕತೆ ಇದ್ದರೆ ಮೊದಲು ತಮ್ಮ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೀನಾಮೆ ಸಲ್ಲಿಸಿದ ಕಳಲೆ
ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಂಗಳವಾರ ಘೋಷಿಸಿದ್ದ ಕಳಲೆ ಕೇಶವಮೂರ್ತಿ, ಬುಧವಾರ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು. ಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಗೆ ಆಗಮಿಸಿದ ಕೇಶವಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಅವರಿಗೆ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.