ಮಹಾನಗರ: ಸೈಕಲ್‌ನಲ್ಲಿಯೇ ವಿಶ್ವ ಸುತ್ತುವ ಆಶಯದೊಂದಿಗೆ ಮೂಲತಃ ಇಟೆಲಿಯ ಅರ್ಮಾಂಡೋ ಎಂಬವರು ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಅವರು ಸೈಕ್ಲಿಂಗ್ ಮಾಡಿದ ಒಟ್ಟು ದೂರ ಹನ್ನೆರಡೂವರೆ ಲಕ್ಷ ಕಿಲೋಮೀಟರ್. ಇಲ್ಲಿಯವರೆಗೆ 80 ದೇಶಗಳನ್ನು ಸುತ್ತಾಡಿದ್ದಾರೆ. ಇಟೆಲಿಯವರಾದ ಅರ್ಮಾಂಡೋ ಅವರಿಗೆ ಈಗ 71 ವರ್ಷ ವಯಸ್ಸು. ಜರ್ಮನಿಯಲ್ಲಿ ಅವರ ವಾಸ. 1983ರಲ್ಲಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಾಗ, ಯಾವುದಾದರೂ ಕ್ರೀಡೆಯನ್ನು ಆಯ್ದುಕೊಳ್ಳುವಂತೆ ವೈದ್ಯರು ಸಲಹೆ ಮಾಡಿದರು. ಆಗ ಸೈಕ್ಲಿಂಗ್ ಅವರಿಗೆ ಇಷ್ಟವಾಯಿತು. ಅದಾಗಿ ನಿರಂತರ ಸೈಕ್ಲಿಂಗ್ ನಡೆಸಿದ ಅವರು ಅನಂತರ ವಿಶ್ವಪರ್ಯಟನೆಗೆ ಮುಂದಾಗಿದ್ದಾರೆ. ವಿಶೇಷವೆಂದರೆ, ಇದೀಗ ಅವರು ಏಳನೇ ಬಾರಿಗೆ ವಿಶ್ವಪರ್ಯಟನೆ ಕೈಗೆತ್ತಿಕೊಂಡಿದ್ದಾರೆ. ಅದರಲ್ಲೂ ನಾಲ್ಕನೇ ಬಾರಿಗೆ ಭಾರತದ ಪರ್ಯಟನೆ ನಡೆಸುತ್ತಿದ್ದಾರೆ.
ತನ್ನ ಪ್ರಯಾಣದ ಬಗ್ಗೆ ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘2005ರಲ್ಲಿ ಪತ್ನಿ ಜಿಸೆಲಾ ತೀರಿಕೊಂಡಳು. ಮಕ್ಕಳು, ಮೊಮ್ಮಕ್ಕಳು ಸುಖವಾಗಿದ್ದಾರೆ. ಈಗ ಜರ್ಮನಿಯಲ್ಲಿ ನನಗೊಬ್ಬಳು ಗರ್ಲ್ಫೆಂಡ್ ಇದ್ದಾಳೆ. ಹೆಲ್ಗಾ ಅಂತ ಹೆಸರು. ನನಗೀಗ 71 ವರ್ಷ ಪ್ರಾಯ. ನವೆಂಬರ್ 11ಕ್ಕೆ ದಿಲ್ಲಿಯಿಂದ ನಾನು ಥಾಯ್ಲೆಂಡ್ ಪ್ರಯಾಣಿಸಲಿದ್ದೇನೆ ಎಂದರು.
‘ಪೂರ್ವ ಕರಾವಳಿಯ ಹೈವೇಯಲ್ಲಿ ಈಗಾಗಲೇ ಕನ್ಯಾಕುಮಾರಿಗೆ ಬಂದು ಪಶ್ಚಿಮ ಕರಾವಳಿ ಮೂಲಕ ಮುಂಬಯಿ ಕಡೆಗೆ ಪ್ರಯಾಣ ನಡೆಸಲಾಗುತ್ತಿದೆ. ಪೆಟ್ರೋಲ್‌ಬಂಕ್‌ನಲ್ಲಿ ರಾತ್ರಿಗಳನ್ನು ಕಳೆಯುತ್ತೇನೆ. ವಿಮಾನದ ಟಿಕೆಟ್ ಇರುವುದರಿಂದ ವಿಮಾನ ನಿಲ್ದಾಣದಲ್ಲಿಯೂ ನಾನು ವಿಶ್ರಾಂತಿ ಪಡೆಯಲು ಅವಕಾಶವಿದೆ. ಈ ಪ್ರಯಾಣ ತುಂಬ ಖುಷಿ ಕೊಡುತ್ತದೆ. ಬ್ಯಾಂಕ್ ಕಾರ್ಡ್ ಇರುವುದರಿಂದ ಊಟ ತಿಂಡಿ ಮುಂತಾದ ಖರ್ಚಿಗೆ ಯಾವುದೇ ತೊಂದರೆಯಿಲ್ಲ’ ಎನ್ನುತ್ತಾರೆ. ಸೈಕಲ್‌ನ ಮುಂಭಾಗದ ಒಂದೆಡೆ ಅಡುಗೆಗೆ ಬೇಕಾದ ಸಾಮನಿನ ಬ್ಯಾಗ್, ಮತ್ತೊಂದು ಕಡೆ ದಾಖಲೆ ಪತ್ರಗಳ ಬ್ಯಾಗ್, ಹಿಂಭಾಗದಲ್ಲಿ ಕೊಂಚ ಬಟ್ಟೆ ಮುಂತಾದ ಸಾಮನುಗಳ ಬ್ಯಾಗ್ ನೇತಾಡಿಸಿಕೊಂಡು ಸೈಕಲ್ ಪ್ರಯಾಣ ನಡೆಸುತ್ತಿದ್ದಾರೆ.