ಇಸ್ಲಾಮಾಬಾದ್: ಪೇಶಾವರದ ಮದರಸಾದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ (ಅಕ್ಟೋಬರ್ 27, 2020) ದಿರ್ ಕಾಲೋನಿಯಲ್ಲಿ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಅಪರಿಚಿತ ವ್ಯಕ್ತಿಗಳು ಮದರಸಾದೊಳಗೆ ಸ್ಫೋಟಕವನ್ನು ಅಳವಡಿಸಿಟ್ಟಿದ್ದು, ಇದು ಸ್ಫೋಟಗೊಂಡ ಪರಿಣಾಮ ಏಳು ಮಕ್ಕಳು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿ ರಾಯಟರ್ಸ್ ಗೆ ತಿಳಿಸಿದ್ದಾರೆ.
ಸಮೀಪದ ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರರ ಮಾಹಿತಿ ಪ್ರಕಾರ, ಸ್ಫೋಟದಲ್ಲಿ ಏಳು ಮಕ್ಕಳು ಸಾವನ್ನಪ್ಪಿದ್ದು, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವರು ಬೆಂಕಿಯಿಂದಾಗಿ ಭಾಗಶಃ ಸುಟ್ಟು ಹೋಗಿರುವುದಾಗಿ ವರದಿ ವಿವರಿಸಿದೆ.
ಮದರಸಾದಲ್ಲಿ ತರಗತಿ ನಡೆಯುತ್ತಿದ್ದಾಗಲೇ ಸ್ಫೋಟ ಸಂಭವಿಸಿರುವುದಾಗಿ ವರದಿ ತಿಳಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ರಕ್ಷಣಾ ತಂಡ ದೌಡಾಯಿಸಿದೆ. ಸ್ಫೋಟದ ಬಗ್ಗೆ ಈಗಾಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸ್ಫೋಟ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.