ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್ ನ ಅರಹಾಮಾ ಪ್ರದೇಶದಲ್ಲಿ ಇಂದು ಬುಧವಾರ ಉಗ್ರರು ಕನಿಷ್ಠ ನಾಲ್ವರು ಪೊಲೀಸರನ್ನು ಕೊಂದು ಅಟ್ಟಹಾಸ ಮೆರೆದಿದ್ದಾರೆ. ಇನ್ನೋರ್ವ ಪೊಲೀಸ್ ಸಿಬಂದಿ ಉಗ್ರರ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅರಹಾಮಾ ಗ್ರಾಮದಲ್ಲಿನ ಡಿವೈಎಸ್ಪಿ ಪ್ರಧಾನ ಕಾರ್ಯಾಲಯದ ಭದ್ರತೆಗೆಂದು ತೆರಳುತಿತದ್ದ ಪೊಲೀಸ್ ಸಿಬಂದಿಗಳ ಮೇಲೆ ಉಗ್ರರು ದಾಳಿ ನಡೆಸಿದರೆಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಉಗ್ರರ ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಐವರು ಪೊಲೀಸರನ್ನು ಒಡನೆಯೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ನಾಲ್ವರು ಪೊಲೀಸರು ಮೃತಪಟ್ಟರು ಎಂದು ವರದಿ ತಿಳಿಸಿದೆ. ಉಗ್ರರು ಪೊಲೀಸರ ಕೈಯಲ್ಲಿದ್ದ ಎಕೆ 47 ರೈಫಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿರುವುದಾಗಿ ವರದಿಗಳು ತಿಳಿಸಿವೆ.
ಉಗ್ರರ ಈ ದಾಳಿಯನ್ನು ಅನುಸರಿಸಿ ಭದ್ರತಾ ಪಡೆಗಳು ಇಡಿಯ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ದಾಳಿಗೆ ಜೈಶ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳು ಹೊಣೆ ಹೊತ್ತಿವೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.