ಹೊಸದಿಲ್ಲಿ : ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನೂರ್‌ಪುರ್ ಎಂಬಲ್ಲಿ ಇಂದು ಸೋಮವಾರ ಶಾಲಾ ಬಸ್ಸೊಂದು ಇನ್ನೂರು ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ 26 ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಸುಮಾರು 25 ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳೀಯರ ನೆರವಿನಲ್ಲಿ ರಕ್ಷಣಾ ಕಾರ್ಯ ಜಾರಿಯಲ್ಲಿದೆ. ರಾಷ್ಟ್ರೀಯ ದುರಂತ ಸ್ಪಂದನೆ ದಳವನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಈ ದುರಂತದ ತನಿಖೆಗೆ ಉನ್ನತ ಮಟ್ಟದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.
ದುರಂತದಲ್ಲಿ ಹಲವಾರು ಮಕ್ಕಳು ಮೃತಪಟ್ಟು ಇನ್ನಷ್ಟು ಹಲವು ಮಕ್ಕಳು ಗಾಯಗೊಂಡಿರವುದಾಗಿ ನನಗೆ ತಿಳಿದು ಬಂದಿದೆ. ನಾನು ಮುಖ್ಯ ಕಾರ್ಯದರ್ಶಿ, ಡಿಜಿ ಮತ್ತು ಡೆಪ್ಯುಟಿ ಕಮಿಷನರ್ ಜತೆಗೆ ಮಾತನಾಡಿದ್ದೇನೆ; ರಕ್ಷಣಾ ಕಾರ್ಯ ನಡೆಯುತ್ತಿದೆ; ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇನೆ ಎಂದು ಸಿಎಂ ಠಾಕೂರ್ ಹೇಳಿದರು.
ಪ್ರಾಥಮಿಕ ತನಿಖೆಗಳ ಪ್ರಕಾರ ದುರಂತಕ್ಕೆ ಈಡಾದ ಬಸ್ಸು ಖಾಸಗಿ ಶಾಲೆಯೊಂದಕ್ಕೆ ಸೇರಿದೆ. ದಿನದ ಶಾಲಾ ವೇಳೆ ಮುಗಿದ ಬಳಿಕ ಮಕ್ಕಳನ್ನು ಅವರವರ ಮನೆಗೆ ಬಿಡುವುದಕ್ಕೆ ಬಸ್ಸು ಹೋಗುತ್ತಿತ್ತು.