ಡೆಹರಾಡೂನ್ : ನಿನ್ನೆ ಮಂಗಳವಾರ ಗಂಗೋತ್ರಿಯಿಂದ ಮರಳುತ್ತಿದ್ದ ಯಾತ್ರಿಕರನ್ನು ಒಳಗೊಂಡ ಬಸ್ಸು ನಾಲೂಪಾನಿ ಎಂಬಲ್ಲಿ ಭಾಗೀರಥಿ ನದಿಗೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ. ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಭೀಕರ ದುರಂತಕ್ಕೆ ತೀವ್ರ ಶೋಕ ಮತ್ತು ಆಘಾತ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ಅಪಘಾತವು ನಿನ್ನೆ ಮಂಗಳವಾರ ಸಂಜೆ ಆರು ಗಂಟೆಯ ಹೊತ್ತಿಗೆ ಘಟಿಸಿದೆ. ನತದೃಷ್ಟ ಬಸ್ಸಿನಲ್ಲಿದ್ದವರಲ್ಲಿ ಹೆಚ್ಚಿನವರು ಮಧ್ಯಪ್ರದೇಶದವರು. ಇವರು ಗಂಗೋತ್ರಿಯಿಂದ ಹೃಷೀಕೇಶಕ್ಕೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿತು. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿ ಬಿತ್ತು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದ ವತಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದರು.
ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಸಿಬಂದಿಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಭರದಿಂದ ಇಂದು ಬೆಳಗ್ಗಿನ ವರೆಗೂ ನಡೆಯಿತು. ಬಸ್ಸು ಉರುಳಿ ಬಿದ್ದ ತಾಣವು ಅತ್ಯಂತ ಕಡಿದಾದ ಪರ್ವತ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯ ಕಷ್ಟಕರವಾಯಿತು.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿ ಮೃತರ ಕುಟುಂಬಗಳಿಗೆ ರಾಜ್ಯದ ವತಿಯಿಂದ ತಲಾ 1 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಪ್ರಕಟಿಸಿದರು.