ಮುಂಬಯಿ : ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು, ಹಲವೆಡೆ ಪ್ರವಾಹ ಆವರಿಸಿದೆ. ಮರಣ ಮೃದಂಗ ಮುಂದುವರಿದಿದ್ದು, ರತ್ನಗಿರಿಯಲ್ಲಿ ಡ್ಯಾಮ್‌ನಿಂದ ಹೊರಬಿಟ್ಟ ಭಾರೀ ಪ್ರಮಾಣದ ನೀರಿನಲ್ಲಿ ಗ್ರಾಮಗಳು ಮುಳುಗಿದ್ದು 26 ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ರಾತ್ರಿ ತಿವಾರೆ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದ್ದು, ಹಲವು ಗ್ರಾಮಗಳು ಮುಳುಗಡೆಯಾಗಿದ್ದು, 26 ಮಂದಿ ನಾಪತ್ತೆಯಾಗಿದ್ದಾರೆ. 6 ಮಂದಿಯ ಶವಗಳು ಶವಗಳು ಪತ್ತೆಯಾಗಿವೆ.
ಎನ್‌ಡಿಆರ್‌ಎಫ್ ಪಡೆಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
2 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಲಾಗಿ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ಮಂಗಳವಾರ ಹಲವೆಡೆ ಗೋಡೆ ಕುಸಿದು 30 ಕ್ಕೂ ಹೆಚ್ಚು ಮಂದಿ , ಮಳೆ ಸಂಬಂಧಿ ಅವಘಡಗಳಿಂದಾಗಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಮುಂಬಯಿ ನಗರ, ವಿದರ್ಭ ಮತ್ತು ಮರಾಠಾವಾಡಾ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.