ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯದ 11 ಕಲ್ಲಿದ್ದಲು ಗಣಿಗಾರಿಕೆ ಕಾರ್ಮಿಕರನ್ನು ಭಾನುವಾರ ಬಂದೂಕುಧಾರಿಗಳು ಅಪಹರಿಸಿ, ಕೊಲೆಗೈದಿದ್ದಾರೆ.
ಬಲೂಚಿಸ್ತಾನದ ನೈರುತ್ಯ ಪ್ರಾಂತ್ಯದಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಅಪಹೃತರನ್ನು ಹತ್ತಿರದ ಪರ್ವತವೊಂದಕ್ಕೆ ಕರೆದೊಯ್ದು ಅಲ್ಲಿ ಗುಂಡಿನ ಮಳೆಗರೆದು ಎಲ್ಲರನ್ನೂ ಹತ್ಯೆಗೈಯ್ಯಲಾಗಿದೆ.
ಮಾಚ್ ಕಲ್ಲಿದ್ದಲು ಕ್ಷೇತ್ರದಲ್ಲಿ ಕೆಲಸ ಮಾಡಲೆಂದು ಗಣಿ ಕಾರ್ಮಿಕರು ತೆರಳುತ್ತಿದ್ದಾಗ, ಬಂದೂಕುಧಾರಿಗಳು ಇವರನ್ನು ಅಪಹರಿಸಿದ್ದರು. ನಂತರ ಪರ್ವತ ಪ್ರದೇಶಕ್ಕೆ ಕರೆದೊಯ್ದು ಗುಂಡಿನ ದಾಳಿ ನಡೆಸಿದ್ದರು. 6 ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದರೆ, ಐವರು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹಣಾ ಕಾಪು ತಾಲೂಕು ಕಾರ್ಯಾಲಯ ಉದ್ಘಾಟನೆ
ಶಿಯಾ ಹಜಾರಾ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಘಟನೆ ಖಂಡಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಇದನ್ನು ಅತ್ಯಂತ ಹೇಡಿತನದ ಭಯೋತ್ಪಾದನಾ ಕೃತ್ಯ ಎಂದು ಬಣ್ಣಿಸಿದ್ದಾರೆ.