ಹೊಸದಿಲ್ಲಿ : ಭಾರತ – ಅಮೆರಿಕ ನಡುವಿನ ಮೊತ್ತ ಮೊದಲ 2 + 2 ಸಂವಾದದಲ್ಲಿ ಉಭಯ ದೇಶಗಳು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ ಮತ್ತು ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ಥಾನವನ್ನು ಒತ್ತಾಯಿಸಿವೆ.
ಭಾರತ – ಅಮೆರಿಕ ನಡುವಿನ ಪ್ರಥಮ 2+2 ಸಂವಾದದ ಮೂಲಕ ಉಭಯ ದೇಶಗಳ ರಕ್ಷಣಾ ವ್ಯೂಹಗಾರಿಕೆ ಹೊಸ ಎತ್ತರವನ್ನು ತಲುಪಿದೆ; ವಾಷಿಂಗ್ಟನ್‌ನಿಂದ ಭಾರತ ಅತ್ಯಂತ ಸೂಕ್ಷ್ಮ ಮತ್ತು ಅತ್ಯಾಧುನಿಕ ಮಿಲಿಟರಿ ಸಲಕರಣೆಗಳನ್ನು ಪಡೆಯಲಿದೆ.
ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಹಕ್ಕಾನಿ, ತಾಲಿಬಾನ್, ಲಷ್ಕರ್, ಜೈಶ್ ಎ ಮೊಹಮ್ಮದ್ ಸೇರಿದಂತೆ ಇನ್ನೂ ಅನೇಕ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಮತ್ತು ಅಮೆರಿಕ ಪಾಕ್ ಹೊಸ ಸರಕಾರವನ್ನು ಆಗ್ರಹಿಸಿವೆ.
2 + 2 ಸಂವಾದದಲ್ಲಿ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ವಿದೇಶ ಸಚಿವ ಮೈಕೆಲ್ ಪಾಂಪಿಯೋ ಮತ್ತು
ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಭಾಗಿಯಾದರು.
2008ರ ಮುಂಬಯಿ ದಾಳಿಯ 10ನೇ ವರ್ಷಾಚರಣೆಗೆ ಮುನ್ನ ನಡೆದಿರುವ ಈ 2 + 2 ಸಂವಾದದಲ್ಲಿ ಭಾರತ ಮತ್ತು ಅಮೆರಿಕ ಜತೆಗೂಡಿ ಮುಂಬಯಿ ದಾಳಿ (2008), ಪಠಾಣಕೋಟ್ ದಾಳಿ (2016), ಉರಿ ದಾಳಿ (2016) ಮತ್ತು ಇತರ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳನ್ನು ಎಸಗಿದ ಉಗ್ರರ ವಿರುದ್ಧ ತ್ವರಿತ ಕಾನೂನು ಕ್ರಮಕೈಗೊಂಡು ಶಿಕ್ಷಿಸುವಂತೆ ಪಾಕಿಸ್ಥಾನದ ಹೊಸ ಸರಕಾರವನ್ನು ಒತ್ತಾಯಿಸಿದವು.
ಬಳಿಕ ಜಂಟಿ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಸುಶ್ಮಾ ಸ್ವರಾಜ್, ಭಾರತ – ಅಮೆರಿಕ ಉಗ್ರ ನಿಗ್ರಹ ಸಹಕಾರವು ಹೊಸ ಗುಣಮಟ್ಟದ ಅಲಗು ಮತ್ತು ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.