Advertisement
ದಕ್ಷಿಣಕನ್ನಡ ಜಿಲ್ಲಾ ಬೋರ್ಡ್/ತಾಲೂಕು ಬೋರ್ಡ್ ನಡೆಸುವ ಶಾಲೆಗಳನ್ನು “ಬೋರ್ಡ್ ಹೈಸ್ಕೂಲ್’ ಎಂದು ಕರೆಯುತ್ತಿದ್ದರು. ಹಳೆಯ ವಿಶಾಲ ಪುತ್ತೂರು ತಾಲೂಕಿನಲ್ಲಿ ಮೊತ್ತಮೊದಲು ಸ್ಥಾಪನೆ ಆದ ಬೋರ್ಡ್ ಹೈಸ್ಕೂಲು ಪುತ್ತೂರಿನ ಕೊಂಬೆಟ್ಟುವಿನದ್ದು 1916ರಲ್ಲಿ. ಈಗ ಅದು ಶತಮಾನದ ಶಾಲೆ ಎಂಬ ಹಿರಿಮೆ ಉಳ್ಳದ್ದು. ಅದರ ಪಾರಂಪರಿಕ ಕಟ್ಟಡ ಪುತ್ತೂರಿನ ಹೆಮ್ಮೆ. (ಈಗ ಅದು ಸರಕಾರಿ ಜೂನಿಯರ್ ಕಾಲೇಜು).
Related Articles
Advertisement
ಬೋರ್ಡ್ ಹೈಸ್ಕೂಲ್ ಆ ಕಾಲದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪುತ್ತೂರು ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಸಿಕ್ವೇರಾ ಅವರು ಪಿಟಿ ಮಾಸ್ó. ಆಮೇಲೆ ಮಲ್ಯ ಮತ್ತು ತೋಳಾರ್ ಎಂಬ ಇಬ್ಬರು ತರುಣ ಪಿಟಿ ಮಾಷ್ಟ್ರುಗಳು ಬಂದರು. ನಾನು ಎಲ್ಲ ಕಾಲಕ್ಕೂ ಕ್ರೀಡೆಗಳಲ್ಲಿ ಬಹಳ ಹಿಂದೆ. ಕ್ರೀಡೆಯ ಕಡ್ಡಾಯದ ತರಬೇತಿಗೆ ಹೋಗುತ್ತಿದ್ದೆ; ಆಟೋಟಗಳಲ್ಲಿ ಸ್ಪರ್ಧಿಸುವಷ್ಟು ಎಂದೂ ಪರಿಣತಿಯನ್ನು ಪಡೆಯಲಿಲ್ಲ. ನಮ್ಮ ಹೈಸ್ಕೂಲಿನ ಕೆಳಗಿನ, ಬಂಟ್ಸ್ ಹಾಸ್ಟೆಲಿನ ಪಕ್ಕದ ಆಟದ ಮೈದಾನ ಆ ಕಾಲದಲ್ಲಿ ಪುತ್ತೂರಿನ ಒಲಿಂಪಿಕ್ ಕ್ರೀಡಾಂಗಣ ಎಂಬ ಖ್ಯಾತಿ ಪಡೆದಿತ್ತು. ನಮ್ಮ ಬೋರ್ಡ್ ಹೈಸ್ಕೂಲಿನಲ್ಲೂ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯದ ಪರಿಣತ ಆಟಗಾರರು ಇದ್ದರು. ನನ್ನ ನೆನಪಿಗೆ ಬರುವಂತೆ ನನ್ನ ಸಹಪಾಠಿ ಪುರುಷೋತ್ತಮ ನಾಯಕ್ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದರು. ಪಿ. ಗೋಪಾಲಕೃಷ್ಣ, ಮೋಹನ ಭಟ್, ಸುಧಾಕರ ಶೆಟ್ಟಿ, ಜೀವಂಧರ್, ಚಿತ್ತರಂಜನ್ ಇನ್ನೂ ಅನೇಕರು ಇದ್ದ ಉತ್ತಮ ತಂಡ ನಮ್ಮಲ್ಲಿತ್ತು. ಕ್ರಿಕೆಟ್ ಆಟದ ವ್ಯಾಕರಣವನ್ನು ನಾನು ಕಲಿತದ್ದು ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ನಮ್ಮ ಶಾಲೆಯವರ ಪಂದ್ಯಾಟಗಳನ್ನು ಐಸ್‌ಕ್ಯಾಂಡಿ ಚೀಪುತ್ತ ಉತ್ಸಾಹದಿಂದ ನೋಡುವುದರ ಮೂಲಕ. ಇದರ ಜೊತೆಗೆ ಅದೇ ಮೈದಾನದಲ್ಲಿ ಪುತ್ತೂರು ತಾಲೂಕು ಮಟ್ಟದ ಆಟೋಟ ಸ್ಪರ್ಧೆಗಳು ನಡೆಯುತ್ತಿದ್ದುವು. ಬೇರೆ ಬೇರೆ ಹೈಸ್ಕೂಲುಗಳ ತಂಡಗಳ ವೈವಿಧ್ಯಮಯ ಕ್ರೀಡಾ ಸಾಮರ್ಥ್ಯಗಳನ್ನು ಕಣ್ಣಾರೆ ನೋಡಿ ಕಲಿಯುವ ಅಪೂರ್ವ ಅವಕಾಶಗಳನ್ನು ಕಲ್ಪಿಸಿಕೊಟ್ಟದ್ದು ನಮ್ಮ ಬೋರ್ಡ್ ಹೈಸ್ಕೂಲ್.
ಶಿವರಾಮ ಕಾರಂತರ ಭೀಷ್ಮ ವಿಜಯಶಿವರಾಮ ಕಾರಂತರ ಹೊಸ ಪ್ರಯೋಗ “ಯಕ್ಷರಂಗ’ದ ಆರಂಭದ ಒಂದು ಪ್ರದರ್ಶನ “ಭೀಷ್ಮ ವಿಜಯ’ವನ್ನು ಬೋರ್ಡ್ ಹೈಸ್ಕೂಲಿನ ಹೊರಾಂಗಣದ ಸ್ಟೇಜ್‌ನಲ್ಲಿ ನೋಡಿದ ನೆನಪು ಹಸುರಾಗಿದೆ. ಮಾತು ಇಲ್ಲದ, ಸಂಗೀತ ಮತ್ತು ಅಭಿನಯ ಪ್ರಧಾನವಾದ ಕಾರಂತರ ಪ್ರಯೋಗ ನನ್ನ ಮೇಲೆ ಪ್ರಭಾವ ಬೀರಿತು. ಕಾರಂತರ ಮಕ್ಕಳು ಉಲ್ಲಾಸ್ ಮತ್ತು ಕ್ಷಮಾ ಆ ಕಾಲಕ್ಕೆ ಬೋರ್ಡ್ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದರು. ನಾನು ಹತ್ತನೆಯ ತರಗತಿಯಲ್ಲಿ ಇದ್ದಾಗ ಉಲ್ಲಾಸ ಕಾರಂತ್ ಒಂಬತ್ತನೆಯ ಮತ್ತು ಕ್ಷಮಾ ಎಂಟನೆಯ ತರಗತಿಯಲ್ಲಿ ಕಲಿಯುತ್ತಿದ್ದರು. ಆಗ ನನ್ನ ತಮ್ಮ ಉಲ್ಲಾಸ್ ಕೂಡಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದ. ನನ್ನ ಅಪ್ಪ 1935ರಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಥಿ ಆಗಿದ್ದರು. ಬೋರ್ಡ್ ಹೈಸ್ಕೂಲ್ 1966ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದಾಗ ಹೊರತಂದ “ಸುವರ್ಣ ದೀಪಿಕಾ’ ಸ್ಮರಣಸಂಚಿಕೆಗೆ ಅಪ್ಪ ಗೌರವ ಸಂಪಾದಕರಾಗಿದ್ದರು. ಪುತ್ತೂರಿನಲ್ಲಿ ನಮ್ಮ ಬಿಡಾರ ಇದ್ದದ್ದು ಕೊಂಬೆಟ್ಟುವಿನಲ್ಲಿ. ನಮ್ಮ ಮನೆಯಿಂದ ಹೈಸ್ಕೂಲಿಗೆ ಹತ್ತು ನಿಮಿಷದ ನಡಿಗೆಯ ದಾರಿ. 14 ವರ್ಷಗಳ ಬಳಿಕ ಮೊದಲ ಬಾರಿ ವಿದ್ಯುದ್ದೀಪದ ಬೆಳಕಿನಲ್ಲಿ ಓದಲು ಸುರುಮಾಡಿದ ದಿನಗಳು. ಹೈಸ್ಕೂಲಿನಲ್ಲಿ ಕ್ರಿಕೆಟ್ ಆಡುವುದನ್ನು ನೋಡಿ ನಾನು ಕ್ರಿಕೆಟ್ ಆಡುವುದನ್ನು ಕಲಿತದ್ದು ನಮ್ಮ ಮನೆಯ ಪಕ್ಕದ ಬಯಲಿನಲ್ಲಿ. ನಾನು, ನನ್ನ ತಮ್ಮ ಉಲ್ಲಾಸ, ಹಿಂಬದಿಯ ಮನೆಯಲ್ಲಿ ವಾಸವಾಗಿದ್ದ ಶ್ರೀಕೃಷ್ಣ ವಿಲಾಸ ಹೊಟೇಲಿನ ಸೀತಾರಾಮ ಕೆದಿಲಾಯರ ಮಕ್ಕಳು ಮೋಹನ, ರಮೇಶ, ಜಯರಾಮ, ಹತ್ತಿರದ ಮನೆಯ ನನ್ನ ಸಹಪಾಠಿ ಜಯರಾಮ ರೈ, ಸಮೀಪದಲ್ಲಿದ್ದ ಡಾ. ತಿಮ್ಮಣ್ಣ ಭಟ್ಟರ ಮಕ್ಕಳು ಚಂದ್ರಶೇಖರ ಮತ್ತು ರವೀಂದ್ರ – ನಾವೆಲ್ಲಾ ಸೇರಿಕೊಂಡು ಆಡಿದ ರಬ್ಬರ್ ಬಾಲ್ ಕ್ರಿಕೆಟ್ ಆಟದ ದಿನಗಳು ಅವಿಸ್ಮರಣೀಯ. ಎಲ್ಲರೂ ಹೈಸ್ಕೂಲು ಹುಡುಗರು ಆತ್ಮೀಯತೆಯಿಂದ ಒಂದೇ ಕುಟುಂಬದವರಂತೆ ಚೇಷ್ಟೆ ಮಾಡುತ್ತ ಕ್ರಿಕೆಟ್ ಆಡುತ್ತಿದ್ದೆವು. ಕೊಂಬೆಟ್ಟು ಮನೆಯಲ್ಲಿ ಇದ್ದಾಗ ನಾನು ಮತ್ತು ತಮ್ಮ ಉಲ್ಲಾಸ ಮಾಡಿದ ಒಂದು ಪ್ರಯೋಗ ಪ್ರಶಾಂತ ಎಂಬ ಹಸ್ತಪತ್ರಿಕೆಯನ್ನು ತಂದದ್ದು. ಅದಕ್ಕೆ ನಾವೇ ಕತೆ, ಕವನ, ಲೇಖನ, ವ್ಯಂಗ್ಯಚಿತ್ರ ಬರೆದು, ಅದರ ಪ್ರತಿಗಳನ್ನು ಮನೆಯಲ್ಲಿ ಮತ್ತು ನೆರೆಕರೆಯಲ್ಲಿ ತೋರಿಸಿ ಸಂಭ್ರಮಿಸುತ್ತಿ¨ªೆವು. ನಮ್ಮ ಮನೆಯ ಸಮೀಪದಲ್ಲಿದ್ದ ಕನ್ನೆಪ್ಪಾಡಿ ರಾಮಕೃಷ್ಣ (ರಘು) ವಕೀಲರು ನವಭಾರತದಲ್ಲಿ ಬರೆಯುತ್ತಿದ್ದ “ಶಿಂಗಣ್ಣ’ ವ್ಯಂಗ್ಯಚಿತ್ರ ಮತ್ತು ಅವರು ಆರಂಭಿಸಿದ “ಇಂದ್ರಧನುಷ್’ ವ್ಯಂಗ್ಯ ಪತ್ರಿಕೆಯ ಪ್ರಭಾವ ಕೂಡಾ ಇತ್ತು. ನಾನು ಬೋರ್ಡ್ ಹೈಸ್ಕೂಲಿನ ಒಂಬತ್ತನೇ ತರಗತಿಯಲ್ಲಿ ಇ¨ªಾಗ ಟೈಫಾçಡ್ ಕಾಯಿಲೆಯಿಂದಾಗಿ ಎರಡು ತಿಂಗಳು ಶಾಲೆಗೆ ಹೋಗಲಾಗಲಿಲ್ಲ. ಇಂಗ್ಲಿಶ್ ಪಾಠ ನನಗೆ ಬಹಳ ಕಷ್ಟವಾಗುತ್ತಿತ್ತು. ಆಗ ಅಪ್ಪ ನಮ್ಮ ಮನೆಯ ಹಿಂದಿನ ಹಿತ್ತಲಲ್ಲಿ ವಾಸಿಸುತ್ತಿದ್ದ ಅವರ ಗುರು ಹಿರಿಯ ಸಾಹಿತಿ ಉಗ್ರಾಣ ಮಂಗೇಶರಾಯರಲ್ಲಿ ನನಗೆ ಇಂಗ್ಲಿಶ್ ಟ್ಯೂಶನ್ ಕೊಡಿಸುವ ವ್ಯವಸ್ಥೆ ಮಾಡಿಸಿದರು. ಮಂಗೇಶರಾಯರು ಅಚ್ಚುಕಟ್ಟಾಗಿ ಎರಡು ತಿಂಗಳ ಕಾಲ ಉಚಿತವಾಗಿ ನನಗೆ ಇಂಗ್ಲಿಶ್ ಪಾಠ ಮಾಡಿದರು. ಉಗ್ರಾಣ ಮಂಗೇಶರಾಯರ ಶಿಷ್ಯ ಎನ್ನುವ ಹೆಮ್ಮೆ ನನ್ನದು. ಅಪ್ಪನ ಆಣತಿಯಂತೆ ನಾನು ಬಹುಮಟ್ಟಿಗೆ ಪ್ರತಿದಿನ ಸಂಜೆ ಕೊಂಬೆಟ್ಟು ಮನೆಯಿಂದ ಕೋರ್ಟು ರಸ್ತೆಯ ಮಾಳಿಗೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುತ್ತಿ¨ªೆ. ಪತ್ರಿಕೆಗಳ ವ್ಯಾಪಕ ಓದಿನ ಅನುಭವ ಸಿಕ್ಕಿದ್ದು ನನಗೆ ಈ ಲೈಬ್ರೆರಿಯಲ್ಲಿ. ಆ ಕಾಲದಲ್ಲಿ (1960-63) ನಾನು ಓದುತ್ತಿದ್ದ ಪತ್ರಿಕೆಗಳು- ಪ್ರಪಂಚ, ಜನಪ್ರಗತಿ, ಕರ್ಮವೀರ, ಪ್ರಜಾಮತ, ವಿಚಾರವಾಣಿ, ಕಸ್ತೂರಿ, ನವಭಾರತ, ಪ್ರಜಾವಾಣಿ. ಹೀಗೆ ಮನೆಯಿಂದ ಲೈಬ್ರೆರಿಗೆ ಹೋಗುವ ದಾರಿಯಲ್ಲಿ ಹೆಚ್ಚಾಗಿ ಎಪಿ ಸುಬ್ಬಯ್ಯನವರ ಮಾಳಿಗೆಯಲ್ಲಿನ ಸಂಜೆಯ ಮಾತುಕತೆಗೆ ಬಾಲವನದಿಂದ ನಡೆದುಕೊಂಡು ಬರುತ್ತಿದ್ದ ಶಿವರಾಮ ಕಾರಂತರನ್ನು ಕಾಣುತ್ತಿದ್ದೆ. ನಾನು ಕೈ ಜೋಡಿಸಿ ನಮಸ್ಕರಿಸಿದ ಕೂಡಲೇ ತಲೆ ಕೆಳಗೆ ಹಾಕಿ ನಡೆದುಬರುತ್ತಿದ್ದ ಕಾರಂತರು ಪ್ರತಿ ನಮಸ್ಕಾರ ಮಾಡುತ್ತಿದ್ದರು. ಅದು ನನಗೆ ಬೆರಗು ಮತ್ತು ಧನ್ಯತೆಯ ಕ್ಷಣ. ಹೈಸ್ಕೂಲು ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ಸಂಕ್ರಮಣದ ಕಾಲ. ಹದಿಹರೆಯದ ನಡುವಯಸ್ಸಿನಲ್ಲಿ ದೇಹ ಮತ್ತು ಮನಸ್ಸುಗಳಲ್ಲಿ ಹೊಸ ಸಂಚಲನದ ಕಾಮನಬಿಲ್ಲು ಮೂಡುತ್ತಿರುವಾಗ ಏನೆಲ್ಲವನ್ನು ಕಲಿಯಬೇಕು ಮತ್ತು ಕಲಿಯಬಾರದು ಎನ್ನುವುದು ಮುಂದಿನ ಬದುಕಿಗೆ ದಾರಿದೀಪಗಳನ್ನು ತೋರಿಸುತ್ತದೆ. ಪಾಠ-ಆಟಗಳ ಜಗತ್ತನ್ನು ವಿಸ್ತರಿಸಿದ, ಆಲಯ-ಬಯಲುಗಳ ಬೌಂಡರಿ ಗೆರೆಗಳನ್ನು ತೋರಿಸಿದ, “ನಾನು’ ಸರ್ವನಾಮದ ಬದಲು “ನಾವು’ ಬಹುವಚನದ ಪಾಠವನ್ನು ಕಲಿಸಿದ, ಮೇಲಕ್ಕೆ ಏರಲು ಮೆಟ್ಟಿಲುಗಳನ್ನು ಕಾಣಿಸಿದ ನನ್ನ ಬದುಕಿನ ಶೈಕ್ಷಣಿಕ ಏಣಿ- ಕೊಂಬೆಟ್ಟು ಶಾಲೆ. ಬಿ. ಎ. ವಿವೇಕ ರೈ