ವಾಷಿಂಗ್ಟನ್: ಬಾಹ್ಯಾಕಾಶ ಯಾತ್ರೆ ಹೋದ್ರೆ ವಯಸ್ಸು ಕಡಿಮೆಯಾಗುತ್ತಾ? ಹಾಗಂತ ಇದೀಗ ಸಂಶಯವೊಂದು ಮೊಳಕೆಯೊಡೆದಿದೆ. ಇದುವರೆಗೆ ಶೂನ್ಯ ಗುರುತ್ವ ಪ್ರದೇಶದಲ್ಲಿ ವಯಸ್ಸು ಬೇಗ ಹೆಚ್ಚಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ ಗಗನಯಾನಿ ಸ್ಕಾಟ್ ಕೆಲ್ಲಿ ಅವರ ವಿಚಾರದಲ್ಲಿ ಇದು ಉಲ್ಟಾ ಆಗಿದೆ!
ಈ ಕಾರಣ ಬಾಹ್ಯಾಕಾಶ ಯಾತ್ರೆ ಮಾಡಿದ್ರೆ ವಯಸ್ಸು ಕಡಿಮೆಯಾಗುತ್ತದೆ ಎಂಬ ವಾದಗಳೂ ಜೋರಾಗಿವೆ. ಸ್ಕಾಟ್ ಕೆಲ್ಲಿ ಅವರು 382 ದಿನಗಳ ಬಾಹ್ಯಾಕಾಶ ಯಾತ್ರೆ ಮಾಡಿದ್ದು, ಅವರ ವಯಸ್ಸು ಅರ್ಥಾತ್ ಮುಪ್ಪಿನ ಪ್ರಮಾಣ ಅವರ ಸೋದರ ಮಾರ್ಕ್ ಕೆಲ್ಲಿಗಿಂತ ಈಗ ಕಡಿಮೆಯಾಗಿದೆಯಂತೆ!
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಸಂಶೋಧನೆಗಳ ಪ್ರಕಾರ, ಕೆಲ್ಲಿ ಅವರು ಸೋದರನಿಗಿಂತ ಕಡಿಮೆ ಮುಪ್ಪು ಹೊಂದಿದ್ದಾರೆ. ಮನುಷ್ಯನ ದೇಹದಲ್ಲಿ ಮುಪ್ಪಿಗೆ ಕಾರಣವಾಗುವುದು ಕ್ರೋಮೋಸೋಮ್‌ಗಳು- ಡಿಎನ್‌ಎನಲ್ಲಿನ ಸಣ್ಣ ಕೋಶಗಳು. ಇದನ್ನು ಟೆಲ್ಮೋರ್ ಎಂದು ಕರೆಯುತ್ತಾರೆ. ಮನುಷ್ಯನಿಗೆ ವಯಸ್ಸಾದಂತೆ ಈ ಟೆಲ್ಮೋರ್ಗಳು ಸಣ್ಣದಾಗುತ್ತ ಹೋಗುತ್ತವೆ.
ಆದರೆ ಗಗನಯಾನಿ ಕೆಲ್ಲಿ ವಿಚಾರದಲ್ಲಿ ಟೆಲ್ಮೋರ್ ಗಳು ಉದ್ದವಾಗುತ್ತ ಹೋಗಿವೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದು, ಟೆಲ್ಮೋರ್ಗಳು ಉದ್ದವಾಗಿದ್ದು ಪತ್ತೆಯಾಗಿವೆ. ಹಾಗೆಯೇ ಅವರು ಭೂಮಿಗೆ ಮರಳಿದ ಬಳಿಕ ಅದು ಸಣ್ಣದಾಗುತ್ತ ಹೋಗುತ್ತಿದ್ದುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಸದ್ಯ ಕೆಲ್ಲಿ ಅವರಲ್ಲಿ ಕಂಡುಬಂದ ಈ ಲಕ್ಷಣ ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ.
ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.